ADVERTISEMENT

ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮಂಸೋರೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಆಗಸ್ಟ್ 2021, 11:12 IST
Last Updated 15 ಆಗಸ್ಟ್ 2021, 11:12 IST
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಖಿಲಾ ಮತ್ತು ಮಂಸೋರೆ
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಖಿಲಾ ಮತ್ತು ಮಂಸೋರೆ   

ಬೆಂಗಳೂರು: ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮಂಸೋರೆ ಅವರು ತಮ್ಮ ಬಹುಕಾಲದ ಗೆಳತಿ ಅಖಿಲಾ ಅವರನ್ನು ಇಂದು (ಭಾನುವಾರ) ವರಿಸಿದರು.

ಬೆಂಗಳೂರಿನ ಖಾಸಗಿ ರೆಸಾರ್ಟ್‌ನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಕುಟುಂಬ ಸದಸ್ಯರು ಮತ್ತು ಬಂಧು ಮಿತ್ರರು ಪಾಲ್ಗೊಂಡಿದ್ದರು.

2014ರಲ್ಲಿ ಮಂಸೋರೆ ಅವರು ಮೊದಲು ನಿರ್ದೇಶಿಸಿದ ‘ಹರಿವು’ ಚಿತ್ರಕ್ಕೆ ಉತ್ತಮ ಪ್ರಾದೇಶಿಕ ಚಿತ್ರ ರಾಷ್ಟ್ರಪ್ರಶಸ್ತಿ ಬಂದಿತ್ತು. ಹರಿವು ಚಿತ್ರದಲ್ಲಿ ಸಂಚಾರಿ ವಿಜಯ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದರು.

ADVERTISEMENT

ಮಂಸೋರೆ ನಿರ್ದೇಶನದಲ್ಲಿ, ಶ್ರುತಿ ಹರಿಹರನ್ ಮತ್ತು ಸಂಚಾರಿ ವಿಜಯ್ ನಟಿಸಿ, 2018ರಲ್ಲಿ ಬಿಡುಗಡೆಯಾಗಿದ್ದ ‘ನಾತಿಚರಾಮಿ’ ಚಿತ್ರಕ್ಕೆ ಉತ್ತಮ ಪ್ರಾದೇಶಿಕ ಚಿತ್ರ ರಾಷ್ಟ್ರಪ್ರಶಸ್ತಿ ದೊರಕಿದೆ. ಅದೇ ಚಿತ್ರದ ನಿರ್ದೇಶನಕ್ಕಾಗಿ ಮಂಸೋರೆ ಅವರಿಗೆ ಉತ್ತಮ ನಿರ್ದೇಶಕ ಫಿಲ್ಮ್ ಫೇರ್ ಪ್ರಶಸ್ತಿಯ ಗರಿ ಸಿಕ್ಕಿದೆ.

ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ನೇತೃತ್ವದ, ‘ಬದಲಾದ ಭಾರತ’ ಎಂಬ ಯೋಜನೆಯಡಿಯಲ್ಲಿ ಆಯ್ಕೆಯಾದ ಸಿನಿಮಾಗಳ ಪಟ್ಟಿಯಲ್ಲಿ ‘ನಾತಿಚರಾಮಿ’ ಚಿತ್ರವೂ ಒಂದಾಗಿದೆ

ಮಂಸೋರೆ ನಿರ್ದೇಶನದ ಮೂರನೇ ಚಲನಚಿತ್ರ ‘ಆಕ್ಟ್-1978’ ಕಳೆದ ವರ್ಷ ದೀರ್ಘಕಾಲದ ಲಾಕ್-ಡೌನ್ ನಂತರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಮೊದಲ ದಕ್ಷಿಣ ಭಾರತದ ಚಲನಚಿತ್ರ ಎಂದೇ ಖ್ಯಾತಿಯಾಗಿದೆ.

ಕೊರೊನಾ ಲಾಕ್-ಡೌನ್ ನಂತರ ಸಿನಿಮಾಗಳನ್ನು ಬಿಡುಗಡೆ ಮಾಡಲು ಚಿತ್ರರಂಗ ಹಿಂದೇಟು ಹಾಕುತ್ತಿದ್ದ ವೇಳೆಯಲ್ಲಿ ಬಿಡುಗಡೆಯಾದ ‘ಆಕ್ಟ್-1978’ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಸದ್ಯಕ್ಕೆ ಮಂಸೋರೆ ಅವರು ‘ರಾಣಿ ಅಬ್ಬಕ್ಕ’ನ ಕುರಿತಾದ ಚಿತ್ರ ಮಾಡುವ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.