ADVERTISEMENT

ಡಾರ್ಲಿಂಗ್ ಕೃಷ್ಣ ಚಿತ್ರಕ್ಕೆ ದೀಪಕ್ ಗಂಗಾಧರ್ ಆ್ಯಕ್ಷನ್ ಕಟ್

​ಪ್ರಜಾವಾಣಿ ವಾರ್ತೆ
Published 12 ಜನವರಿ 2021, 8:14 IST
Last Updated 12 ಜನವರಿ 2021, 8:14 IST
ಡಾರ್ಲಿಂಗ್‌ ಕೃಷ್ಣ
ಡಾರ್ಲಿಂಗ್‌ ಕೃಷ್ಣ   

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿರುವ ‘ಲವ್‌ ಮಾಕ್ಟೇಲ್‌’ ಖ್ಯಾತಿಯ ಡಾರ್ಲಿಂಗ್‌ ಕೃಷ್ಣ ಅವರ ಮತ್ತೊಂದು ಸಿನಿಮಾ ಸದ್ಯದಲ್ಲೇ ಸೆಟ್ಟೇರಲಿದೆ. ಈ ಚಿತ್ರಕ್ಕೆ ದೀಪಕ್‌ ಗಂಗಾಧರ್‌ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ.

‘ಯಜಮಾನ’, ‘ಅಮರ್’, ‘ಸೈರಾ ನರಸಿಂಹ ರೆಡ್ಡಿ’, ‘ಕಾಳಿದಾಸ ಕನ್ನಡ ಮೇಸ್ಟ್ರು’, ‘ನನ್ನ ಪ್ರಕಾರ’ ಸೇರಿದಂತೆ ನೂರಕ್ಕೂ ಹೆಚ್ಚು ಚಲನಚಿತ್ರಗಳನ್ನು ವಿತರಣೆ ಮಾಡಿದ ಚಿತ್ರ ವಿತರಕ ಈ ದೀಪಕ್ ಗಂಗಾಧರ್. ಕೃಷ್ಣ ನಟನೆಯ ಚಿತ್ರದ ಮೂಲಕ ದೀಪಕ್‌ ನಿರ್ದೇಶಕನ ಟೊಪ್ಪಿ ಧರಿಸಲು ಸಜ್ಜಾಗಿದ್ದಾರೆ. ಈ ಚಿತ್ರಕ್ಕೆ ಮದನ್ ಕುಮಾರ್ ಮತ್ತು ಲಕ್ಷ್ಮಿ ನಾರಾಯಣ ರಾಜು ಅರಸ್ ಬಂಡವಾಳ ಹೂಡುತ್ತಿದ್ದಾರೆ.

ಸಹಾಯಕ ನಿರ್ದೇಶಕನಾಗಿ ಚಂದನವನಕ್ಕೆ ಕಾಲಿಟ್ಟ ದೀಪಕ್‌, ತೂಗುದೀಪ ಪ್ರೊಡಕ್ಷನ್ ಬಳಗದಲ್ಲಿ ಹಲವು ವರ್ಷಗಳಿಂದ ಗುರುತಿಸಿಕೊಂಡಿದ್ದಾರೆ. ಎಂ.ಡಿ. ಶ್ರೀಧರ್, ಕವಿರಾಜ್ ಮತ್ತಿತರ ನಿರ್ದೇಶಕರ ಜೊತೆ ಸಹ ನಿರ್ದೇಶಕರಾಗಿ ಅನುಭವ ಗಳಿಸಿಕೊಂಡಿದ್ದಾರೆ. ಬರಹಗಾರರಾಗಿ, ಚಿತ್ರಸಾಹಿತಿಯಾಗಿಯೂ ಗುರುತಿಸಿಕೊಂಡಿದ್ದಾರೆ. ‘ನವೋದಯ ಡೇಸ್’ ಚಿತ್ರದ ಸಹ ನಿರ್ಮಾಪಕರೂ ಹೌದು.

ADVERTISEMENT

ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಅವರು ಬರುವ ಫೆಬ್ರವರಿ 14ರಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈಗಾಗಲೇ ಇಬ್ಬರ ಮನೆಗಳಲ್ಲೂ ಮದುವೆಯ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಕೃಷ್ಣ ಮತ್ತು ಮಿಲನಾ ಇತ್ತೀಚೆಗಷ್ಟೇ ಭರ್ಜರಿಯಾದ ಬ್ಯಾಚುಲರ್‌ ಪಾರ್ಟಿ ಮಾಡಿದ್ದಾರೆ. ಈಗ ಸ್ನೇಹಿತರು, ಬಂಧುಬಳಗ ಹಾಗೂ ಚಿತ್ರರಂಗದ ಗಣ್ಯರಿಗೆ ಮದುವೆ ಆಮಂತ್ರಣ ಪತ್ರಿಕೆ ನೀಡುವುದರಲ್ಲಿ, ಮದುವೆಯ ಶಾಪಿಂಗ್‌ ಮಾಡುವುದರಲ್ಲಿ ನಿರತರಾಗಿದ್ದಾರೆ.

ಇನ್ನು ಮದುವೆ ದಿನವೇ ‘ಲವ್ ಮಾಕ್ಟೇಲ್ 2’ ಸಿನಿಮಾದ ಹಾಡೊಂದನ್ನು ರಿಲೀಸ್ ಮಾಡಲು ತಯಾರಿಯನ್ನೂ ನಡೆಸಿದ್ದಾರೆ ಈ ತಾರಾ ಜೋಡಿ.

ಸದ್ಯ ಡಾರ್ಲಿಂಗ್‌ ಕೃಷ್ಣ ‘ಲವ್‌ ಮಾಕ್ಟೇಲ್‌ 2’, ‘ಶ್ರೀಕೃಷ್ಣ @gimail.com’, ‘ಶುಗರ್‌ಫ್ಯಾಕ್ಟರಿ’ ಹಾಗೂ ‘ವರ್ಜಿನ್‌’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅವರ ತಿಜೋರಿಗೆ ಈಗ ಮತ್ತೊಂದು ಹೆಸರಿಡದ ಚಿತ್ರ ಸೇರ್ಪಡೆಯಾಗಿದೆ. ಇದು ಮದುವೆಯ ನಂತರವೇ ಸೆಟ್ಟೇರುವ ನಿರೀಕ್ಷೆ ಇದೆ.

ದೀಪಕ್‌ ಗಂಗಾಧರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.