ADVERTISEMENT

ವನ್ನಿಯಾರ್‌ ಸಮುದಾಯದ ಅವಹೇಳನ ಆರೋಪ: ಜೈ ಭೀಮ್‌ ಚಿತ್ರ ತಂಡಕ್ಕೆ ನೋಟಿಸ್‌

ಐಎಎನ್ಎಸ್
Published 15 ನವೆಂಬರ್ 2021, 13:02 IST
Last Updated 15 ನವೆಂಬರ್ 2021, 13:02 IST
ಜೈ ಭೀಮ್‌ ಚಿತ್ರದ ಸನ್ನಿವೇಶದಲ್ಲಿ ನಟ ಸೂರ್ಯ (ಐಎಎನ್‌ಎಸ್‌ ಚಿತ್ರ)
ಜೈ ಭೀಮ್‌ ಚಿತ್ರದ ಸನ್ನಿವೇಶದಲ್ಲಿ ನಟ ಸೂರ್ಯ (ಐಎಎನ್‌ಎಸ್‌ ಚಿತ್ರ)    

ಚೆನ್ನೈ: ನಟ ಸೂರ್ಯ ನಟನೆಯ ತಮಿಳಿನ 'ಜೈ ಭೀಮ್' ಚಿತ್ರದಲ್ಲಿ ವನ್ನಿಯಾರ್ ಸಮುದಾಯವನ್ನು ತಪ್ಪಾಗಿ ಚಿತ್ರಿಸಲಾಗಿದೆ ಎಂದು ‘ವನ್ನಿಯಾರ್ ಸಂಘ’ದ ಅಧ್ಯಕ್ಷ ಪು. ತಾ. ಅರುಲ್ಮೋಳಿ ಎಂಬುವವರು ಆರೋಪಿಸಿದ್ದಾರೆ. ಅಲ್ಲದೇ, ನಿರ್ಮಾಪಕರು, ನಿರ್ದೇಶಕರು ಮತ್ತು ಚಿತ್ರ ಪ್ರದರ್ಶಿಸುತ್ತಿರುವ ಒಟಿಟಿ ವೇದಿಕೆ ‘ಅಮೆಜಾನ್‌ ಪ್ರೈಮ್‌’ಗೆ ನೋಟಿಸ್ ಕಳುಹಿಸಿದ್ದಾರೆ.

5 ಕೋಟಿ ರೂಪಾಯಿ ಪರಿಹಾರ ಮತ್ತು ಬಹಿರಂಗ ಕ್ಷಮೆಯಾಚನೆಗೆ ಸೂಚಿಸಿ, ಸಿನಿಮಾ ನಿರ್ಮಾಣ ಸಂಸ್ಥೆ ‘2ಡಿ ಎಂಟರ್‌ಟೈನ್‌ಮೆಂಟ್’, ಸಿನಿಮಾದ ಸಹ ನಿರ್ಮಾಣ ಸಂಸ್ಥೆ ಸೂರ್ಯ ಶಿವಕುಮಾರ್ ಮತ್ತು ಪತ್ನಿ ಜ್ಯೋತಿಕಾ ಅವರ ಎ.ಕೆ. ಇಂಟರ್‌ನ್ಯಾಶನಲ್‌, ನಿರ್ದೇಶಕ ಟಿ.ಜೆ. ಜ್ಞಾನವೇಲ್ ಮತ್ತು ಅಮೆಜಾನ್‌ಗೆ ನೋಟಿಸ್‌ ಕೊಡಲಾಗಿದೆ.

‘ಚಲನಚಿತ್ರವು ನಿಜ ಜೀವನದ ಘಟನೆಯನ್ನು ಆಧರಿಸಿದೆ. ಅದರ ಕಥಾಹಂದರವು ಮದ್ರಾಸ್ ಹೈಕೋರ್ಟ್‌ನ ತೀರ್ಪನ್ನು ಆಧರಿಸಿದೆ ಎಂದು ಹೇಳಲಾಗುವ ಚಿತ್ರದಲ್ಲಿ ಬರುವ ರಾಜಾಕಣ್ಣು, ವಕೀಲ ಚಂದ್ರು ಮತ್ತು ಪೊಲೀಸ್ ಅಧಿಕಾರಿ ಪೆರುಮಾಳ್‌ಸಾಮಿ ಅವರ ಹೆಸರುಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಆದರೆ, ಲಾಕಪ್‌ ಡೆತ್‌ನಲ್ಲಿ ಭಾಗಿಯಾಗಿರುವ ಪೊಲೀಸ್ ಸಬ್-ಇನ್ಸ್‌ಪೆಕ್ಟರ್‌ನ ಹೆಸರನ್ನು ಉದ್ದೇಶಪೂರ್ವಕವಾಗಿ ಅಂತೋನಿಸಾಮಿಯ ಬದಲಾಗಿ ಗುರುಮೂರ್ತಿ ಎಂದು ಬದಲಾಯಿಸಲಾಗಿದೆ ಮತ್ತು ಅವರನ್ನು ಆಗಾಗ್ಗೆ ಗುರು ಕರೆಯಲಾಗುತ್ತದೆ,’ ಎಂದು ನೋಟಿಸ್‌ನಲ್ಲಿ ಮೊದಲಿಗೆ ವಿವರಿಸಲಾಗಿದೆ.

ADVERTISEMENT

‘ಚಲನಚಿತ್ರದ ಒಂದು ದೃಶ್ಯದಲ್ಲಿ, ಸಬ್‌–ಇನ್‌ಸ್ಪೆಕ್ಟರ್‌ ಗುರು ಹಿನ್ನೆಲೆಯಲ್ಲಿರುವ ಕ್ಯಾಲೆಂಡರ್‌ನಲ್ಲಿ ಅಗ್ನಿಕುಂಡವನ್ನು ತೋರಿಸಲಾಗಿದೆ. ಅಗ್ನಿ ಕುಂಡವು ವನ್ನಿಯಾರ್‌ ಸಂಘದ ಚಿಹ್ನೆಯಾಗಿದೆ. 1995ರಲ್ಲಿ ಅಗ್ನಿ ಕುಂಡದ ಚಿತ್ರದೊಂದಿಗೆ ಪ್ರಕಟವಾಗಿದ್ದ ಕ್ಯಾಲೆಂಡರ್‌ ಅನ್ನು 'ಜೈ ಭೀಮ್' ನಿರ್ಮಾಪಕರು 'ಉದ್ದೇಶಪೂರ್ವಕವಾಗಿ' ಸಿನಿಮಾಕ್ಕೆ ಬಳಸಿಕೊಂಡಿದ್ದಾರೆ. ಈ ಮೂಲಕ ವನ್ನಿಯರ್ ಸಂಘದ ಸದಸ್ಯರನ್ನು ಮತ್ತು ಇಡೀ ವನ್ನಿಯಾರ್‌ ಸಮುದಾಯವನ್ನು ಅಪಮಾನಿಸಲಾಗಿದೆ’ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.

‘ಖಳನ ಪಾತ್ರದಲ್ಲಿರುವ ಸಬ್‌ ಇನ್‌ಸ್ಪೆಕ್ಟರ್‌ನ ನೈಜ ಹೆಸರನ್ನು ಬದಲಿಸಿ ಗುರುಮೂರ್ತಿ ಎಂದು ಮಾಡಲಾಗಿದೆ. ಈ ಹೆಸರು ನಮ್ಮ ಸಮುದಾಯದ ಪ್ರಮುಖರೊಬ್ಬರನ್ನು ಪ್ರತಿನಿಧಿಸುತ್ತಿದೆ. ಗುರುಮೂರ್ತಿ ಪಾತ್ರ ಬಂದಾಗ ಅವರ ಹಿನ್ನೆಲೆಯಲ್ಲಿ ‘ಅಗ್ನಿ ಕುಂಡ’ದ ಚಿತ್ರವನ್ನು ತೋರಿಸುವ ಮೂಲಕ ಅವರು ವನ್ನಿಯಾರ್‌ ಸಮುದಾಯದವರೇ ಎಂದು ಬಿಂಬಿಸುವ ಪ್ರಯತ್ನ ಸಿನಿಮಾದಲ್ಲಿ ಮಾಡಲಾಗಿದೆ,’ ಎಂದು ಆರೋಪಿಸಲಾಗಿದೆ.

‘ಸಿನಿಮಾ ಮತ್ತು ನಿಜ ಜೀವನದಲ್ಲಿ ಖಳನಾಗಿರುವ ಗುರುಮೂರ್ತಿ ಎಂಬುವವರು ವನ್ನಿಯಾರ್‌ ಸಮುದಾಯಕ್ಕೆ ಸೇರಿದವರು ಎಂದು ವಿವಿಧ ಸಂಕೇತಗಳ ಮೂಲಕ ಸಿನಿಮಾದಲ್ಲಿ ಬಿಂಬಿಸಲು ಹೊರಟಿದ್ದೀರಿ ಎಂದು ನಮ್ಮ ಕಕ್ಷಿದಾರರು ಪ್ರತಿಪಾದಿಸಿದ್ದಾರೆ. ಆದರೆ, ನೈಜವಾಗಿ ಆ ಸಬ್ ಇನ್ಸ್‌ಪೆಕ್ಟರ್ ವನ್ನಿಯಾರ್ ಸಮುದಾಯಕ್ಕೆ ಸೇರಿರಲಿಲ್ಲ" ಎಂದು ನೋಟಿಸ್‌ನಲ್ಲಿ ವಕೀಲರು ಹೇಳಿದ್ದಾರೆ.

‘ಚಲನಚಿತ್ರದಲ್ಲಿ ಆಗಿರುವ ಈ ತಪ್ಪು, ಸಾಂದರ್ಭಿಕ, ಅಜಾಗರೂಕ ಆಥವಾ ಅರಿಯದೇ ಆದದ್ದಲ್ಲ. ಸಮಾಜದಲ್ಲಿ ವನ್ನಿಯಾರ್ ಸಮುದಾಯದ ಜನರ ಬಗೆಗಿನ ಚಿತ್ರಣವನ್ನು ಹಾಳು ಮಾಡುವ ಉದ್ದೇಶದಿಂದ ಮತ್ತು ಇಡೀ ಸಮುದಾಯವನ್ನು ದೂಷಿಸುವ ದೃಷ್ಟಿಯಿಂದ ಮಾತ್ರ ದೃಶ್ಯವನ್ನು ಸೇರಿಸಲಾಗಿದೆ,’ ಎಂದು ವಾದಿಸಲಾಗಿದೆ.

ಆಗಿರುವ ಪ್ರಮಾದಕ್ಕೆ ಪ್ರತಿಯಾಗಿ ವನ್ನಿಯಾರ್‌ ಸಂಘಕ್ಕೆ 5 ಕೋಟಿ ಪರಿಹಾರ ನೀಡಬೇಕು. ಚಿತ್ರದ ಸನ್ನಿವೇಶದಲ್ಲಿ ಬರುವ ಅಗ್ನಿ ಕುಂಡದ ಚಿತ್ರವನ್ನು ತೆಗೆಯಬೇಕು. ನಿರ್ದೇಶಕರು ಬಹಿರಂಗವಾಗಿ ಕ್ಷಮೆ ಕೋರಬೇಕು ಎಂದು ನೋಟಿಸ್‌ನಲ್ಲಿ ಸೂಚಿಸಲಾಗಿದೆ.

ಈ ಹಿಂದೆ, ನಟ ಸೂರ್ಯ ಅವರಿಗೆ ಪತ್ರ ಬರೆದಿದ್ದ ಪಟ್ಟಾಲಿ ಮಕ್ಕಳ್‌ ಕಚ್ಚಿ (ಪಿಎಂಕೆ) ಪಕ್ಷದ ನಾಯಕ, ರಾಜ್ಯಸಭಾ ಸಂಸದ ಅನ್ಬುಮಣಿ ರಾಮದಾಸ್, ಸಿನಿಮಾದಲ್ಲಿ ಉದ್ದೇಶಪೂರ್ವಕವಾಗಿ ವನ್ನಿಯಾರ್‌ ಸಮುದಾಯವನ್ನು ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿದ್ದರು.

ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ನಟ ಸೂರ್ಯ, ‘ಜೈ ಭೀಮ್’ ಚಿತ್ರವು ನೈಜ ಘಟನೆಯಿಂದ ಸ್ಫೂರ್ತಿ ಪಡೆದಿದೆ. ಆದರೆ, ಅದರ ಹೆಸರುಗಳು, ಘಟನೆಗಳು ಕಾಲ್ಪನಿಕ. ಈ ಅಂಶವನ್ನು ಚಿತ್ರದ ಆರಂಭದಲ್ಲೇ ತೋರಿಸಲಾಗಿದೆ,’ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.