ADVERTISEMENT

ಆಸ್ಕರ್‌ ಕನಸ ಬೆನ್ನೇರಿ

ಕೆ.ಎಂ.ಸಂತೋಷ್‌ ಕುಮಾರ್‌
Published 1 ನವೆಂಬರ್ 2019, 6:08 IST
Last Updated 1 ನವೆಂಬರ್ 2019, 6:08 IST
ಅದಿತಿ ಪ್ರಭುದೇವ
ಅದಿತಿ ಪ್ರಭುದೇವ   

ಒಮ್ಮೆಯಾದರೂ ಆಸ್ಕರ್‌ ಪ್ರಶಸ್ತಿ ಗೆಲ್ಲಬೇಕೆಂದು ಗುರಿ ಇಟ್ಟುಕೊಂಡು ಚಲನಚಿತ್ರಗಳನ್ನು ಮಾಡುವವರು ಕನ್ನಡ ಚಿತ್ರರಂಗದಲ್ಲಿ ವಿರಳ. ಅಂಥವರಲ್ಲಿ ದಯಾಳ್‌ ಪದ್ಮನಾಭನ್‌ ಪ್ರಮುಖವಾಗಿ ಎದ್ದುಕಾಣುತ್ತಾರೆ.

ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಒಮ್ಮೆ ‘ಇವರು ಹೆಸರಿಗಷ್ಟೇ ದಯಾಳ್‌, ಆದರೆ, ಸಿನಿಮಾದಲ್ಲಿ ದಯೆ ಇಲ್ಲ, ಅಷ್ಟೊಂದುನಿರ್ದಯವಾಗಿರುತ್ತವೆ ಇವರ ಸಿನಿಮಾಗಳು’ ಎನ್ನುವ ಮಾತನ್ನು ನಿರ್ದೇಶಕ ದಯಾಳ್‌ ಪದ್ಮನಾಭನ್ ಬಗ್ಗೆ ಹೇಳಿದ್ದರು. ಇದು ವ್ಯಂಗ್ಯದ ಮಾತಲ್ಲ, ನಿಜವಾಗಿಯೂ ಕಾಡುವ ವಿಷಯಗಳನ್ನು ಇಟ್ಟುಕೊಂಡು ಸಮಾಜವನ್ನು ಇರುವಂತೆಯೇ ತೋರಿಸುವಾಗ ಯಾರಿಗಾದರೂ ಎಷ್ಟೊಂದು ನಿರ್ದಯಿ ಅನಿಸುವುದು ಸಹಜವೇ. ಕಂಟೆಂಟ್‌ ಓರಿಯಂಟೆಡ್‌ ಜಾಡಿನ ಸಿನಿಮಾಗಳನ್ನು ಮಾಡುತ್ತಿರುವ ನಿರ್ದೇಶಕ ದಯಾಳ್‌ ಪದ್ಮನಾಭನ್‌ ಬಗ್ಗೆ ನಾಗತಿಹಳ್ಳಿ ಮೆಚ್ಚುಗೆಯ ಮಾತನ್ನೇ ಈ ರೀತಿಯಾಗಿ ಹೇಳಿದ್ದರು.

ಇಂತಹ ದಯಾಳ್‌ ಈ ಬಾರಿ ನಿರ್ದೇಶಿಸಿರುವಅವರದೇ ಕಾದಂಬರಿ ಆಧರಿತ ‘ರಂಗನಾಯಕಿ ವರ್ಜಿನ್‌ ವಾಲ್ಯೂಮ್‌–1’ ಸಿನಿಮಾ ಈಗ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಬಿಡುಗಡೆಗೂ ಮುನ್ನವೇ ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ನವೆಂಬರ್‌ 24ರಂದು ಸಂಜೆ 5.30ಕ್ಕೆ ಇಂಡಿಯನ್‌ ಪನೋರಮಾ ವಿಭಾಗದಲ್ಲಿ ಈ ಚಿತ್ರ ಪ್ರದರ್ಶನ ಕಾಣಲಿದೆ.ನಿರ್ದೇಶಕರು, ನಿರ್ಮಾಪಕರು ಹಾಗೂ ಇನ್ನಿಬ್ಬರು ಕಲಾವಿದರು ರೆಡ್‌ ಕಾರ್ಪೆಟ್‌ ಆತಿಥ್ಯ ಸ್ವೀಕರಿಸಲಿದ್ದಾರೆ. ‘ರಂಗನಾಯಕಿ’ ಚಿತ್ರ ಶುಕ್ರವಾರ (ನ. 1) ರಾಜ್ಯದಾದ್ಯಂತ ತೆರೆಕಾಣುತ್ತಿದೆ.

ADVERTISEMENT

ಚಿತ್ರದ ಬಗ್ಗೆ ಅನೇಕ ಸಂಗತಿಗಳನ್ನು ದಯಾಳ್‌ ‘ಸಿನಿಮಾ ಪುರವಣಿ’ ಜತೆಗೆ ಹಂಚಿಕೊಂಡಿದ್ದಾರೆ.

‘ಮೊದಲೇ ಹೇಳಿದಂತೆ; ಇಡೀ ದೇಶವನ್ನು ಬೆಚ್ಚಿ ಬೀಳಿಸಿದ ‘ನಿರ್ಭಯ' ಘಟನೆ ನೋಡಿದ ಮೇಲೆ ಆ ನೋವಿನಿಂದ ಹುಟ್ಟಿದ ಕಥೆಯೇ ‘ರಂಗನಾಯಕಿ’. ಒಬ್ಬ ನಿರ್ದೇಶಕನಾಗಿ, ಇಡೀ ಸಮಾಜದ ಮೇಲೆ ಪರಿಣಾಮ ಬೀರುವ ಸಿನಿಮಾ‌ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಹೇಗೆ ಬಳಸಬಹುದು ಮತ್ತು ದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಹತ್ಯೆಯಾದ ಆ ಸಂತ್ರಸ್ಥೆ ಒಂದು ವೇಳೆ
ಬದುಕುಳಿದಿದ್ದು, ಆಕೆ ಗಟ್ಟಿಗಿತ್ತಿಯಾಗಿದ್ದರೆ ಈ ಸಮಾಜವನ್ನು ಹೇಗೆ ಎದುರಿಸುತ್ತಿದ್ದಳು ಎನ್ನುವ ಕಲ್ಪನೆಯ ಎಳೆ ಇಟ್ಟುಕೊಂಡು ನಾನೇ ಬರೆದ ಕಾದಂಬರಿಯನ್ನು ಚಿತ್ರಕಥೆಯಾಗಿಸಿ, ತೆರೆ ಮೇಲೆ ತಂದಿದ್ದೇನೆ. ಇಡೀ ಚಿತ್ರವನ್ನು ಸಾಮಾಜಿಕ ದೃಷ್ಟಿಕೋನದಲ್ಲಿ ನಿರೂಪಿಸಿದ್ದೇನೆ.ಅತ್ಯಾಚಾರಕ್ಕಾಗೀಡಾದ ಸಂತ್ರಸ್ತೆ ತನ್ನ ಸುತ್ತಿನ ವ್ಯಕ್ತಿಗಳನ್ನು ಹೇಗೆ ಎದುರುಗೊಳ್ಳುತ್ತಾಳೆ, ಸಮಾಜವನ್ನು ಹೇಗೆ ಎದುರಿಸಿ ಉಳಿದುಕೊಳ್ಳುತ್ತಾಳೆ ಎನ್ನುವ ಸಾಮಾಜಿಕ ಆಯಾಮದಚಿತ್ರಗಳು ಅಷ್ಟಾಗಿ ಭಾರತೀಯ ಚಿತ್ರರಂಗದಲ್ಲಿ ಬಂದಂತಿಲ್ಲ. ಹಾಗಾಗಿ ‘ರಂಗನಾಯಕಿ’ ತುಂಬಾ ವಿಶೇಷ ಸಿನಿಮಾ’ ಎನ್ನುತ್ತಲೇ ಮಾತಿಗಿಳಿದರು ದಯಾಳ್‌.

2014ರಿಂದ ಕಂಟೆಂಟ್ ಓರಿಯಂಟೆಡ್ ಸಿನಿಮಾ ಮಾಡಬೇಕು ಎನ್ನುವ ಆಲೋಚನೆ ಇತ್ತು. ಯಾರೂ ಟಚ್ ಮಾಡದೇ ಇದ್ದ ಸಬ್ಜೆಕ್ಟ್ ಆಗಿರಬೇಕು ಕೂಡ ಎಂದುಕೊಂಡಿದ್ದೆ. ಅದನ್ನು ಒಂದೊಂದಾಗಿ ಮಾಡಿಕೊಂಡು ಬರುತ್ತಿದ್ದೇನೆ. ಅದೇ ಆಲೋಚನೆಯ ಜಾಡಿನಲ್ಲಿ ಮಾಡಿರುವ ಸಿನಿಮಾ ಇದುಎನ್ನುವ ಮಾತು ಸೇರಿಸಿದರು.

ಪುಟ್ಟಣ್ಣ ಕಣಗಾಲ್ ಅವರ ಹೆಸರಿನಲ್ಲೇ ‘ರಂಗನಾಯಕಿ’ ಟ್ಯಾಗ್ ಲೈನ್ ಇದೆ, ಮತ್ತೇ ಅದೇ ಹೆಸರಿನ ಸಿನಿಮಾ ಮಾಡುವಾಗ ಅಳುಕು ಎದುರಾಗಲಿಲ್ಲವೇ? ಎಂದರೆ, ‘ಖಂಡಿತಾ ಅಳುಕು ಇತ್ತು. ಏನು ಆಗುತ್ತೋ ಎನ್ನುವ ಭಯವೂ ಇತ್ತು. ಆದರೆ, ಕಂಟೆಂಟ್ ಗಟ್ಟಿ ಇದ್ದಿದ್ದರಿಂದ ಭಯಪಡುವ ಅವಶ್ಯಕತೆ ಇಲ್ಲವೆಂದುಕೊಂಡೆವು.ಚಿತ್ರಬ್ರಹ್ಮನಿಗೆ ಗೌರವ ಸಮರ್ಪಿಸಲು ರಂಗನಾಯಕಿ ಶೀರ್ಷಿಕೆ ಮರು ಬಳಕೆ ಮಾಡಿದೆವು. ನಮ್ಮ ಗುರಿ ಸಾಧನೆಯಾಗಿರುವುದರಿಂದ ಪುಟ್ಟಣ್ಣ ಅವರಿಗೆ ಗೌರವ ಸಲ್ಲಿಸಿದಂತಾಗಿದೆ’ ಎಂದುಆತ್ಮವಿಶ್ವಾಸದಿಂದ ಹೇಳಿಕೊಂಡರು.

ಪಾತ್ರಗಳಿಗೆ ಕಲಾವಿದರ ಆಯ್ಕೆ ಹೇಗಿತ್ತು ಎನ್ನುವ ಪ್ರಶ್ನೆ ಮುಂದಿಟ್ಟಾಗ, ‘ರಂಗನಾಯಕಿಗೆ ಮೊದಲು ನನ್ನ ತಲೆಯಲ್ಲಿ ಮೂಡಿದ್ದು ಅದಿತಿ ಪ್ರಭುದೇವ ಮತ್ತು ಅನುಪಮಾಗೌಡ ಈ ಎರಡೇ ಹೆಸರು. ಅದಿತಿಯ ನಟನೆಯನ್ನು ಎರಡು ಸಿನಿಮಾಗಳಲ್ಲಿ ನೋಡಿದ್ದೆ. ಅದಿತಿ ಅಭಿನಯ ತುಂಬಾ ಸೆನ್ಸಿಬಲ್‌ ಇರುವುದನ್ನೂಗಮನಿಸಿದ್ದೆ. ಅನುಪಮಾಗೌಡ ಅದಾಗಲೇ ನಮ್ಮ ಎರಡು ಸಿನಿಮಾಗಳಲ್ಲಿ ನಟಿಸಿದ್ದರು. ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡುವುದು ಎನ್ನುವ ಪ್ರಶ್ನೆ ಎದುರಾದಾಗ, ಗ್ಲಾಮರ್‌ನಿಂದಅದಿತಿ ಅವರನ್ನು ಆಯ್ಕೆ ಮಾಡಿದೆವು. ಪಾತ್ರಕ್ಕೆ ಸಿನಿಮ್ಯಾಟಿಕ್‌ ಆಗಿಯೂ ಸ್ವಲ್ಪ ಗ್ಲಾಮರ್‌ಬೇಕಾಗಿತ್ತು. ಇನ್ನೂಕಂಟೆಂಟ್‌ ಓರಿಯೆಂಟೆಡ್‌ ಸಿನಿಮಾಗಳಲ್ಲಿ ಸ್ಟಾರ್‌ ನಟರು ನಟಿಸಲಾರರು ಎನ್ನುವುದು ನನ್ನ ತಲೆಯಲ್ಲಿದೆ. ಹಾಗಾಗಿಯೇ ಉದಯೋನ್ಮುಖ ನಟರನ್ನು ಹುಡುಕುತ್ತಿದ್ದೆ. ಉಳಿದ ಎರಡು ಪ್ರಮುಖ ಪಾತ್ರಗಳಿಗೆ ತ್ರಿವಿಕ್ರಮ್‌ ಮತ್ತು ಶ್ರೀನಿ ಆಯ್ಕೆಯಾದರು’ ಎನ್ನುವಅವರು, ಪಾತ್ರಗಳಿಗೆ ಕಲಾವಿದರನ್ನು ಆಯ್ಕೆ ಮಾಡಿದಕುಶಲತೆಯ ಗುಟ್ಟನ್ನುತೆರೆದಿಟ್ಟರು.

ಚಿತ್ರ ಬಿಡುಗಡೆಗೂ ಮುನ್ನ ನಿರ್ಮಾಪಕರಿಗೂ ನಿಶ್ಚಿತ ಆದಾಯ ಮಾಡಿಕೊಡುವ ಜಾಣ್ಮೆ ದಯಾಳ್‌ ಅವರಲ್ಲಿ ತುಸು ಹೆಚ್ಚೇ ಇದೆ. ‘ನಮ್ಮದು ತುಂಬಾ ಕಡಿಮೆ ಬಜೆಟ್‌ ಸಿನಿಮಾ. ಆದರೆ, ಕಂಟೆಟ್‌ನಲ್ಲಿ ತುಂಬಾ ರಿಚ್‌ ಸಿನಿಮಾ. ವಿಷಯಾಧಾರಿತ ಮತ್ತು ಪ್ರಯೋಗಾತ್ಮಕ ಚಿತ್ರಗಳನ್ನು ಮಾಡುವುದು ಇಂದು ದೊಡ್ಡ ಸವಾಲಿನ ಕೆಲಸ. ಇಂತಹ ಸಿನಿಮಾಗಳ ಮೇಲೆ ಬಂಡವಾಳ ಹೂಡಲು ಎಲ್ಲರೂ ನಾಲ್ಕು ಬಾರಿ ಯೋಚಿಸುತ್ತಾರೆ. ಈ ಸಿನಿಮಾ ಮೇಲೆ ಬಂಡವಾಳ ಹೂಡಿದ ನಿರ್ಮಾಪಕ ಎಸ್‌.ವಿ. ನಾರಾಯಣ್‌ ಈಗಾಗಲೇ ಬಹುತೇಕ ಸುರಕ್ಷಿತವಾಗಿದ್ದಾರೆ. ಸಬ್ಸಿಡಿ ಮೊತ್ತ ಕನಿಷ್ಠ ₹18 ಲಕ್ಷ, ದೂರದರ್ಶನದಿಂದ ₹25 ಲಕ್ಷ ಹಾಗೂ ಒಟಿಟಿ ಮತ್ತು ಸ್ಯಾಟಲೈಟ್‌ ರೈಟ್ಸ್‌ನಿಂದ ಸುಮಾರು ₹20 ಲಕ್ಷ ಸಿಗಲಿದೆ’ ಎನ್ನುವುದು ದಯಾಳ್‌ ಲೆಕ್ಕಾಚಾರ.

‘ಚಿತ್ರ ಮಾಡುವಾಗ ಒಬ್ಬ ನಿರ್ದೇಶಕನಾಗಿ ಮಾತ್ರ ಗೆಲ್ಲಲು ನೋಡುವುದಿಲ್ಲ, ಇಡೀ ಚಿತ್ರತಂಡ ಗೆಲ್ಲಬೇಕೆಂಬ ಸಂಕಲ್ಪ ಮಾಡಿರುತ್ತೇನೆ. ಆ ದೃಷ್ಟಿಯಲ್ಲಿ ನಾವು ಈಗಾಗಲೇ ಗೆದ್ದಿದ್ದೇವೆ ಎನ್ನುವುದು ಪ್ರೀಮಿಯರ್‌ ಶೋನಲ್ಲಿ ಗೊತ್ತಾಗಿದೆ. ಕುಟುಂಬ ಸಮೇತ ಪ್ರೇಕ್ಷಕರು ಕುಳಿತು ಚಿತ್ರ ನೋಡಿದರು. ಶೇ 60ಕ್ಕೂ ಹೆಚ್ಚು ಪ್ರೇಕ್ಷಕರು ಮಹಿಳೆಯರೇ ಇದ್ದರು.ಮಧ್ಯಂತರದ ಚಿತ್ರವನ್ನು ನೋಡಿದವರೆಲ್ಲರೂ ತಮಗರಿವಿಲ್ಲದೇಕಣ್ಣಂಚಿನಲ್ಲಿ ಜಿನುಗಿದ ನೀರನ್ನು ಒರೆಸಿಕೊಂಡಿದ್ದಾರೆ.ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ, ಒಬ್ಬ ನಿರ್ದೇಶಕನಿಗೆ ಮತ್ತು ಕಲಾವಿದರಿಗೆ ಇದಕ್ಕಿಂತ ಇನ್ನೇನು ಬೇಕು ಹೇಳಿ?’ ಎನ್ನುವ ಅವರ ಮಾತಿನಲ್ಲಿ ಸಾರ್ಥಕತೆ ಇಣುಕಿತು.

ದಯಾಳ್‌ ಪದ್ಮನಾಭನ್‌

ಪ್ರಶಸ್ತಿಯನ್ನು ಬೆನ್ನತ್ತಿ ಹೊರಟಿರುವ ಬಗ್ಗೆ ಕೆದಕಿದಾಗ, ‘ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ನನ್ನ ಚಿತ್ರಗಳು ಆಯ್ಕೆಯಾಗಬೇಕೆಂಬ ಗುರಿ 2014ರಿಂದಲೂ ಇತ್ತು. ‘ಹಗ್ಗದ ಕೊನೆ’, ‘ಆ್ಯಕ್ಟರ್‌’, ‘ಆ ಕರಾಳ ರಾತ್ರಿ’ ಈ ಮೂರು ಸಿನಿಮಾಗಳು ಆಯ್ಕೆಯಾಗುತ್ತವೆ ಎನ್ನುವ ನಿರೀಕ್ಷೆ ಇಟ್ಟುಕೊಂಡಿದ್ದೆ. ಅದರಲ್ಲೂ ‘ಹಗ್ಗದ ಕೊನೆ’ ಸಿನಿಮಾ ಮೇಲೆ ಎಂದು ತುಂಬಾ ನಿರೀಕ್ಷೆ ಇತ್ತು. ಅದು ಆಯ್ಕೆ ಆಗದಿದ್ದಾಗ ತುಂಬಾ ನಿರಾಸೆಯಾಗಿತ್ತು. ನಾಲ್ಕನೇ ಪ್ರಯತ್ನದಲ್ಲಿ ಗೆಲುವು ದಕ್ಕಿದೆ. ಇದೊಂದು ನಮ್ಮ ಪಾಲಿಗೆ ಗ್ರೇಟ್‌ ಅಚೀವ್‌ಮೆಂಟ್‌’ ಎಂದು ದಯಾಳ್‌ ಬೀಗಿದರು.

ಸಂಗೀತಕಾರ್ಯಕ್ರಮ ನೀಡುವ ಒಬ್ಬ ಸಾಮಾನ್ಯ ಸಂಗೀತಗಾರನಾಗಿದ್ದ ಎ.ಆರ್‌.ರೆಹಮಾನ್‌ ಆಸ್ಕರ್‌ ಅವಾರ್ಡ್‌ ಗೆದ್ದು ತೋರಿಸಿದ್ದಾರೆ.ಕಠಿಣ ಶ್ರಮಪಡುವವರು ಏನುಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ರೆಹಮಾನ್‌ ಸ್ಫೂರ್ತಿ. ಹಾಗಾಗಿ ನನ್ನಲ್ಲೂ ಆಸ್ಕರ್‌ ಅವಾರ್ಡ್‌ ಕನಸುಗಳು ಅರಳಲು ಆರಂಭಿಸಿವೆ.ಹಾಗಾಗಿ ನನ್ನ ಸಿನಿಮಾ ಮೇಕಿಂಗ್‌ ಸ್ಟೈಲ್‌ ಕೂಡ ಬದಲಿಸಿಕೊಂಡೆ. ಕಂಟೆಂಟ್‌ ಓರಿಯಂಟೆಂಡ್‌ ಸಿನಿಮಾಗಳೇ ಇದಕ್ಕೆ ದಾರಿ ಎಂದುಕೊಂಡು, ಇದೇ ಜಾಡಿನಲ್ಲಿ ಸಾಗುತ್ತಿದ್ದೇನೆ ಎಂದು ಹೇಳಲು ಅವರು ಮರೆಯಲಿಲ್ಲ.

2018ರಲ್ಲಿ ಆಸ್ಕರ್‌ ಅವಾರ್ಡ್‌ಗೆ ಭಾರತೀಯ ಸಿನಿಮಾಗಳ ಪ್ರವೇಶಕ್ಕೆ ಎಫ್‌ಎಫ್‌ಐ (ಭಾರತೀಯ ಚಲನಚಿತ್ರ ಒಕ್ಕೂಟ) ಅರ್ಜಿ ಆಹ್ವಾನಿಸಿದಾಗ ಕನ್ನಡ ಸಿನಿಮಾವಾಗಿ ‘ಆ ಕರಾಳ ರಾತ್ರಿ’ ಒಂದೇ ಸಿನಿಮಾ ಮಾತ್ರ ಅರ್ಜಿ ಸಲ್ಲಿಸಿದ್ದು. ಗೆದ್ದೇ ಗೆಲ್ಲುತ್ತೇನೆಂದು ಅರ್ಜಿ ಹಾಕಲಿಲ್ಲ. ಆದರೆ, ಯಾವ ಸಿನಿಮಾಕ್ಕೆ ಪ್ರಶಸ್ತಿ ಸಿಗುತ್ತದೆ, ಪ್ರಶಸ್ತಿ ಪಡೆದ ಚಿತ್ರಕ್ಕೂ ನಮ್ಮ ಚಿತ್ರಕ್ಕೂ ವ್ಯತ್ಯಾಸಗಳೇನು ಎನ್ನುವುದನ್ನು ಪರಾಮರ್ಶಿಸಿ, ಚಿತ್ರ ನಿರ್ಮಾಣದ ಶೈಲಿ ಬದಲಿಸಿಕೊಳ್ಳಲು, ಹೊಸತನ, ಸೃಜನಶೀಲತೆ ಅಳವಡಿಸಿಕೊಳ್ಳುವ ಉದ್ದೇಶದಿಂದ ಹಾಗೆ ಮಾಡುತ್ತಿದ್ದೇನೆ. ಆಸ್ಕರ್‌ ಗೆಲ್ಲುವ ಕನಸು ಕೈಬಿಟ್ಟಿಲ್ಲ, ಇದರಲ್ಲಿ ನಾನು ನಿರಂತರ ಪ್ರಯತ್ನ ಮಾಡುತ್ತೇನೆ. ದೊಡ್ಡ ಪ್ರಶಸ್ತಿಯ ಗುರಿ ಇಟ್ಟುಕೊಂಡೇ ಹೊಸ ಚಿತ್ರಕಥೆಯನ್ನು ಹೆಣೆಯುತ್ತಿದ್ದೇನೆ ಎನ್ನುವ ಮಾತು ಸೇರಿಸಿದರು.

ತಮ್ಮ ಹೊಸ ಸಿನಿಮಾ ಬಗ್ಗೆಯೂ ಮಾತು ಹೊರಳಿಸಿದ ದಯಾಳ್‌, ‘ಒಂಬತ್ತನೇ ದಿಕ್ಕು’ ಸಿನಿಮಾ ಮೊದಲ ಭಾಗ ಚಿತ್ರೀಕರಣವಾಗಿದೆ. ಎರಡನೇ ಹಂತದ ಶೂಟಿಂಗ್‌ ನವೆಂಬರ್‌ 11ರಿಂದ್ ಶುರುವಾಗಲಿದೆ. ಈ ಸಿನಿಮಾದಲ್ಲಿ ಯೋಗಿ ಮತ್ತು ಅದಿತಿ ಪ್ರಭುದೇವ ನಟಿಸುತ್ತಿದ್ದಾರೆ.ಇನ್ನೂ ರಂಗನಾಯಕಿಯ ಮೂರು ಸರಣಿ ಬರಲಿದ್ದು, ಎರಡನೇ ಭಾಗ ಮುಂದಿನ ವರ್ಷ, ಮೂರನೇ ಭಾಗ 2021ರಲ್ಲಿ ತೆರೆಗೆ ತರುವ ಚಿಂತನೆ ಇದೆ.ಎರಡನೇ ಭಾಗ ‘ಮರ್ಯಾದೆಗೇಡು ಹತ್ಯೆ’ ವಿಷಯ ಆಧರಿಸಿರುತ್ತದೆ ಎನ್ನುವ ಗುಟ್ಟುಬಿಟ್ಟುಕೊಟ್ಟರು.

*
‘ಒಂಬತ್ತನೇ ದಿಕ್ಕು’ ಸಿನಿಮಾ ಮೊದಲ ಭಾಗ ಚಿತ್ರೀಕರಣವಾಗಿದೆ. ಎರಡನೇ ಹಂತದ ಶೂಟಿಂಗ್‌ ನವೆಂಬರ್‌ 11ರಿಂದ್ ಶುರುವಾಗಲಿದೆ. ಈ ಸಿನಿಮಾದಲ್ಲಿ ಯೋಗಿ ಮತ್ತು ಅದಿತಿ ಪ್ರಭುದೇವ ನಟಿಸುತ್ತಿದ್ದಾರೆ.
-ದಯಾಳ್‌ ಪದ್ಮನಾಭನ್‌, ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.