ADVERTISEMENT

ಪದ್ಮ ಪ್ರಶಸ್ತಿ 2026: ಧರ್ಮೇಂದ್ರ, ಮಮ್ಮುಟ್ಟಿ ಸೇರಿ ಹಲವು ತಾರೆಯರಿಗೆ ಪ್ರಶಸ್ತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಜನವರಿ 2026, 16:06 IST
Last Updated 25 ಜನವರಿ 2026, 16:06 IST
   

2026ನೇ ಸಾಲಿನ ಪದ್ಮ ಪ್ರಶಸ್ತಿ ಪಟ್ಟಿ ಪ್ರಕಟವಾಗಿದ್ದು, ವಿವಿಧ ಕ್ಷೇತ್ರದ ಹಲವು ಸಾಧಕರಿಗೆ ಗೌರವ ಒಲಿದು ಬಂದಿದೆ. ಆ ಪೈಕಿ 5 ಸಾಧಕರಿಗೆ 'ಪದ್ಮವಿಭೂಷಣ', 13 ಸಾಧಕರಿಗೆ 'ಪದ್ಮಭೂಷಣ' ಹಾಗೂ 113 ಮಂದಿಗೆ ತಮ್ಮ ಕ್ಷೇತ್ರಗಳಲ್ಲಿನ ಗಣನೀಯ ಸಾಧನೆಗಾಗಿ 'ಪದ್ಮಶ್ರಿ' ಪ್ರಶಸ್ತಿ ಲಭಿಸಿದೆ. ಸಿನಿಮಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ಪ್ರಮುಖರಿಗೆ ಪ್ರಶಸ್ತಿ ಒಲಿದಿದೆ. ಯಾರಿಗೆಲ್ಲಾ ಬಂದಿದೆ ಎಂಬುದರ ಮಾಹಿತಿ ಇಲ್ಲಿದೆ. 

ಧರ್ಮೇಂದ್ರ 

ಬಾಲಿವುಡ್‌ ಚಿತ್ರರಂಗದ ‘ಹೀ ಮ್ಯಾನ್‌’ ಎಂದೇ ಖ್ಯಾತಿ ಪಡೆದ ಧರ್ಮೇಂದ್ರ ಅವರಿಗೆ ಮರಣೋತ್ತರವಾಗಿ ‘ಪದ್ಮವಿಭೂಷಣ ಪ್ರಶಸ್ತಿ’ಯನ್ನು ನೀಡಲಾಗಿದೆ. 2025ರ ನವೆಂಬರ್‌ 24ರಂದು ಧರ್ಮೇಂದ್ರ ಅವರು ನಿಧನರಾದರು. ಆರು ದಶಕಗಳಲ್ಲಿ 250ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಅವರು ಸಾಹಸ ಪ್ರಧಾನ ಚಿತ್ರಗಳಿಂದ ಜನಮನ ಗೆದ್ದಿದ್ದರು. 'ದಿಲ್ ಭಿ ತೇರಾ ಹಮ್ ಭಿ ತೇರೆ' ಸಿನಿಮಾ ಮೂಲಕ ಅಭಿನಯ ಲೋಕಕ್ಕೆ ಕಾಲಿಟ್ಟ ಅವರು ಕೊನೆಯ ಚಿತ್ರ ‘ಇಕ್ಕೀಸ್‌’ ಬಿಡುಗಡೆಗೆ ಮುನ್ನ ನಿಧನರಾದರು.

ADVERTISEMENT

ಮಮ್ಮುಟ್ಟಿ 

ಮಲಯಾಳಂನ ಪ್ರಮುಖ ನಟನಾಗಿರುವ ಮಮ್ಮುಟ್ಟಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ಲಭಿಸಿದೆ. 5 ದಶಕಗಳಿಂದಲೂ ಸಿನಿಮಾ ಕ್ಷೇತ್ರದಲ್ಲಿರುವ ಇವರು 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತರೆ ಗೌರವಗಳಾದ ರಾಷ್ಟ್ರಪ್ರಶಸ್ತಿ, ಕೇರಳ ರಾಜ್ಯ ಪ್ರಶಸ್ತಿ ಹಾಗೂ ಪದ್ಮಶ್ರೀ ಪಡೆದಿದ್ದಾರೆ. ‘ಅನುಭವಂಗಲ್ ಪಾಲಿಚಕಲ್‘ ಚಿತ್ರದ ಮೂಲಕ ಸಿನಿಮಾಗೆ ಪಾದಾರ್ಪಣೆ ಮಾಡಿದರು. ತಮಿಳು, ತೆಲುಗು, ಹಿಂದಿ ಮತ್ತು ಕನ್ನಡ ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ. 

ಗದ್ದೆ ರಾಜೇಂದ್ರ ಪ್ರಸಾದ್

ತೆಲುಗಿನ ಪ್ರಮುಖ ಹಾಸ್ಯ ನಟರಾದ ‘ಗದ್ದೆ ರಾಜೇಂದ್ರ ಪ್ರಸಾದ್’ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಇವರು ಸಂತೋಷಮ್ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. 1977ರಲ್ಲಿ ‘ಸ್ನೇಹಂ’ ಸಿನಿಮಾದ ಮೂಲಕ ಪಾದಾರ್ಪಣೆ ಮಾಡಿದರು. ಅಂತರರಾಷ್ಟ್ರೀಯ ಮಟ್ಟದ 'ರಾಯಲ್ ರೀಲ್' ಪ್ರಶಸ್ತಿಗೂ ಭಾಜನರಾಗಿದ್ದಾರೆ. 

ರಂಗನಾಥನ್ ಮಾಧವನ್

ನಟ, ನಿರ್ಮಾಪ ಹಾಗೂ ಬರಹಗಾರರಾಗಿರುವ ರಂಗನಾಥನ್ ಮಾಧವನ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಇವರು ತಮಿಳು, ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ನಟಿಸಿದ್ದಾರೆ. ‘3 ಈಡಿಯಟ್ಸ್’, ‘ವಿಕ್ರಮ್ ವೇದ’ ಮುಂತಾದ ಸಿನಿಮಾಗಳ ಮೂಲಕ ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ. ಇವರು 48ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಫಿಲ್ಮ್‌ಫೇರ್ ಪ್ರಶಸ್ತಿ ಸಹ ಪಡೆದಿದ್ದಾರೆ.

ಮಾಗಂಟಿ ಮುರಳಿ ಮೋಹನ್ 

ನಟ ನಿರ್ಮಾಪಕ ಹಾಗೂ ಉದ್ಯಮಿಯಾದ ಮಾಗಂಟಿ ಮುರಳಿ ಮೋಹನ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಇವರು ‘ಜಯಕೃಷ್ಣ ಮೂವೀಸ್' ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಪಕರಾಗಿದ್ದಾರೆ. ಇವರು ಸುಮಾರು 164 ಸಿನಿಮಾಗಳಲ್ಲಿ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.