ADVERTISEMENT

ವಿಷ್ಣು, ಅಂಬಿ, ಅನಂತ್‌, ಶಿವಣ್ಣಗೆ ‘ಪದ್ಮಶ್ರೀ’ ಏಕಿಲ್ಲ? ಅಭಿಮಾನಿಗಳ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2020, 9:12 IST
Last Updated 27 ಜನವರಿ 2020, 9:12 IST
ಕನ್ನಡ ಸ್ಟಾರ್‌ ನಟರು
ಕನ್ನಡ ಸ್ಟಾರ್‌ ನಟರು   
""

ವಿವಿಧ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ಗಣ್ಯರಿಗೆ ಇತ್ತೀಚೆಗೆ ಕೇಂದ್ರ ಸರ್ಕಾರ ದೇಶದ ಉನ್ನತ ನಾಗರಿಕ ಗೌರವವಾದ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿ ಘೋಷಿಸಿದೆ.

ಪದ್ಮವಿಭೂಷಣ 7, ಪದ್ಮಭೂಷಣ 16 ಮತ್ತು 118 ಮಂದಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗುತ್ತಿದೆ. ಕಲಾ ವಿಭಾಗದಲ್ಲಿ ಬಾಲಿವುಡ್‌ ನಟಿ ಕಂಗನಾ ರನೋಟ್‌ಗೂ ಪದ್ಮಶ್ರೀ ಪ್ರಕಟಿಸಲಾಗಿದೆ. ಆಕೆ ಬಣ್ಣದಲೋಕ ಪ್ರವೇಶಿಸಿದ್ದು 2006ರಲ್ಲಿ ತೆರೆಕಂಡ ‘ಗ್ಯಾಂಗ್‌ಸ್ಟರ್‌’ ಚಿತ್ರದ ಮೂಲಕ. ಹಿಂದಿ, ತೆಲುಗು ಮತ್ತು ತಮಿಳು ಸೇರಿದಂತೆ ಇಲ್ಲಿಯವರೆಗೆ ಆಕೆ ನಟಿಸಿರುವ ಚಿತ್ರಗಳ ಸಂಖ್ಯೆ 34.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಬಯೋಪಿಕ್‌ ‘ತಲೈವಿ’ ಚಿತ್ರದಲ್ಲಿ ಆಕೆ ಜಯಲಲಿತಾ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾ ತಮಿಳು, ಹಿಂದಿ ಮತ್ತು ತೆಲುಗಿನಲ್ಲಿ ನಿರ್ಮಾಣವಾಗುತ್ತಿದೆ. ಇದಕ್ಕೆ ಎ.ಎಲ್‌. ವಿಜಯ್‌ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

ADVERTISEMENT

ಕನ್ನಡದಲ್ಲಿ ಕಂಗನಾಗಿಂತಲೂ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ನಟರಿದ್ದರೂ ಅವರಿಗೆ ಏಕೆ ಪದ್ಮಶ್ರೀ ಪ್ರಶಸ್ತಿ ನೀಡಿಲ್ಲ ಎಂಬ ವಿಷಯ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಯಾಗುತ್ತಿದೆ.

‘ನಟ ಶಿವರಾಜ್‌ಕುಮಾರ್ ಅವರು ನಟಿಸಿರುವ ಒಟ್ಟು ಚಿತ್ರಗಳ ಸಂಖ್ಯೆ ಸುಮಾರು 120. ಕಂಗನಾ ನಟಿಸಿರುವ ಚಿತ್ರಗಳು ಸುಮಾರು 30. ಆದರೆ, ಇಂದು ಕೇವಲ ಕಂಗನಾ ಅವರಿಗೆ ಮಾತ್ರ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದೆ’ ಎಂದು ಶಿವಣ್ಣ ಅವರ ಅಭಿಮಾನಿ ಶ್ರೇಯಸ್‌ ಗೌಡ ಎಂಬುವರು ಟ್ವಿಟರ್‌ನಲ್ಲಿ ಪ್ರಶ್ನೆ ಎತ್ತಿದ್ದಾರೆ.

‘ನಮ್ಮ ಕರ್ನಾಟಕದ ಶಿವಣ್ಣ ಅವರಿಗೆ ಏಕೆ ಪ್ರಶಸ್ತಿ ಸಿಕ್ಕಿಲ್ಲ ಎಂದು ಯಾವ ಕನ್ನಡ ಹಾಗೂ ಅಭಿಮಾನಿ ಸಂಘ– ಸಂಸ್ಥೆಗಳು ಪ್ರಶ್ನಿಸುತ್ತಿಲ್ಲ. ಹೀಗೆ ಮುಂದುವರಿದರೆ ಕನ್ನಡ ಚಿತ್ರರಂಗವು ಬೆಳೆಯುವುದು ಹೇಗೆ? ಎಲ್ಲಿಯವರೆಗೂ ಕನ್ನಡಿಗರು ಪ್ರಶ್ನೆ ಮಾಡುವುದಿಲ್ಲವೊ ಅಲ್ಲಿಯವರೆಗೂ ಕನ್ನಡಿಗರಿಗೆ ಯಾವ ಆದ್ಯತೆಗಳು ಸಿಗುವುದಿಲ್ಲ.ಕೇವಲ ಶಿವಣ್ಣ ಮಾತ್ರ ಅಲ್ಲ; ವಿಷ್ಣುವರ್ಧನ್, ಅಂಬರೀಷ್, ಅನಂತನಾಗ್ ಅವರು ಚಿತ್ರರಂಗಕ್ಕೆ ಕೊಡುಗೆ ನೀಡಿದ್ದಾರೆ. ಇವರೆಲ್ಲ ಪ್ರಶಸ್ತಿಯಿಂದ ವಂಚಿತವಾಗಿರೋದು ಏಕೆ ಗೊತ್ತೆ ದಕ್ಷಿಣ ಭಾರತದ ವ್ಯಕ್ತಿಗಳೆಂಬ ತಾರತಮ್ಯದಿಂದ’ ಎಂದು ಅವರು ಹೇಳಿದ್ದಾರೆ.

ಈ ಟ್ವೀಟ್‌ಗೆ ಹಲವು ಮಂದಿ ಪ್ರತಿಕ್ರಿಯಿಸಿದ್ದಾರೆ. ‘ಮೊನ್ನೆ ಅವಳು ದೀಪಿಕಾ ನಡೆಗೆ ವಿರುದ್ಧವಾಗಿದ್ದೀನಿ ಅಂಥ ಹೇಳಿದಳಲ್ಲ; ಅದು ಸಾಕು ಪದ್ಮಶ್ರೀ ಸೀಗೊಕೆ ಇನ್ನೇನು ಬೇಕು’ ಎಂದು ಮಂಜು ಮಧುಗಿರಿ ಪ್ರತಿಕ್ರಿಯಿಸಿದ್ದಾರೆ.

‘ಈ ಕೇಂದ್ರ ಸರ್ಕಾರಗಳಿಗೆ ಬಾಲಿವುಡ್ ಕಲಾವಿದರು ಮಾತ್ರ ಕಣ್ಣಿಗೆ ಬೀಳ್ತಾರೆ. ನಮ್ಮ ಕಲಾವಿದರು ಬೀಳುವುದಿಲ್ಲ...’ ಎಂದು ಶಂಕರ್‌ ಸಿ.ಎಂ. ಪ್ರತಿಕ್ರಿಯೆ ನೀಡಿದ್ದಾರೆ.

ಡಾ.ಶಿವರಾಜ್‌ಕುಮಾರ್‌ ಯುವ ಸೇನೆ ಸಹ ಫೇಸ್‌ಬುಕ್‌ನಲ್ಲಿ ಪ್ರಶಸ್ತಿ ಕುರಿತು ಪ್ರಕಟಿಸಿದೆ–

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.