ADVERTISEMENT

ಎರಡನೇ ಹಂತದ ‘ಫ್ಯಾಂಟಮ್’ ಶೂಟಿಂಗ್‌: ಮುತ್ತಿನ ನಗರಿಯಲಿ ಸೆಟ್ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 9 ಜೂನ್ 2020, 19:30 IST
Last Updated 9 ಜೂನ್ 2020, 19:30 IST
ನಟ ಸುದೀಪ್
ನಟ ಸುದೀಪ್    

ಅನೂಪ್‌ ಭಂಡಾರಿ ಮತ್ತು ಸುದೀಪ್‌ ಕಾಂಬಿನೇಷನ್‌ನಡಿ ನಿರ್ಮಾಣವಾಗುತ್ತಿರುವ ‘ಫ್ಯಾಂಟಮ್‌’ ಚಿತ್ರ ಕನ್ನಡ ಚಿತ್ರರಂಗದಲ್ಲಿ ನಿರೀಕ್ಷೆ ಹೆಚ್ಚಿಸಿರುವುದು ಸಹಜ. ಈಗಾಗಲೇ, ಪುಣೆಯ ಮಹಾಬಲೇಶ್ವರ ಮತ್ತು ಬೆಂಗಳೂರಿನಲ್ಲಿ ಮೊದಲ ಹಂತದ ಶೇಕಡ 35ರಷ್ಟು ಶೂಟಿಂಗ್‌ ಪೂರ್ಣಗೊಳಿಸಿರುವ ಚಿತ್ರತಂಡ, ಎರಡನೇ ಹಂತದಲ್ಲಿ ಹೈದರಾಬಾದ್‌ನಲ್ಲಿ ಚಿತ್ರೀಕರಣ ನಡೆಸಲು ನಿರ್ಧರಿಸಿದೆ.

‘ಫ್ಯಾಂಟಮ್’ನಲ್ಲಿ ಸುದೀಪ್ ಅವರ ಪಾತ್ರದ ಹೆಸರು‌ ವಿಕ್ರಾಂತ್ ರೋಣ. ಆದರೆ, ಅವರ ಪಾತ್ರದ ಬಗ್ಗೆ ಚಿತ್ರತಂಡ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಅನೂಪ್ ಭಂಡಾರಿ ಅವರ ಸಹೋದರ ನಿರೂಪ್ ಭಂಡಾರಿ ಕೂಡ ಇದರಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

‘ತೆಲಂಗಾಣ ಸರ್ಕಾರದ ಮುಖ್ಯಮಂತ್ರಿ ಅವರು ಚಿತ್ರೋದ್ಯಮದ ಚಟುವಟಿಕೆಗೆ ಅನುಮತಿ ನೀಡುವುದಾಗಿ ತಿಳಿಸಿದ್ದಾರೆ. ಆದರೆ, ಇನ್ನೂ ಸರ್ಕಾರದಿಂದ ಮಾರ್ಗಸೂಚಿ ರೂಪಿಸಿಲ್ಲ. ಈಗಾಗಲೇ, ಹೈದರಾಬಾದ್‌ನ ಅನ್ನಪೂರ್ಣೇಶ್ವರಿ ಸ್ಟುಡಿಯೊದಲ್ಲಿ ಸೆಟ್‌ ಕೂಡ ನಿರ್ಮಿಸಿದ್ದೇವೆ. ಅಲ್ಲಿನ ಸರ್ಕಾರದ ಮಾರ್ಗಸೂಚಿಯನ್ನು ಅವಲೋಕಿಸಿ ಎರಡನೇ ಹಂತದ ಶೂಟಿಂಗ್‌ ಆರಂಭಿಸಲಾಗುವುದು’ ಎಂದು ಚಿತ್ರದ ನಿರ್ಮಾಪಕ ಜಾಕ್‌ ಮಂಜು ‘ಪ್ರಜಾ ಪ್ಲಸ್‌’ಗೆ ತಿಳಿಸಿದರು.

ADVERTISEMENT

ಇನ್ನೂ ‘ಫ್ಯಾಂಟಮ್‌’ ಚಿತ್ರದ 70ರಿಂದ 80 ದಿನಗಳ ಶೂಟಿಂಗ್‌ ಬಾಕಿಯಿದೆಯಂತೆ. ‘ಮಹಾಬಲೇಶ್ವರದಲ್ಲಿ ಸೆಟ್‌ ನಿರ್ಮಿಸಿ ಶೂಟಿಂಗ್ ನಡೆಸಲಾಗಿತ್ತು. ಇನ್ನೂ ಪಾತ್ರ ವರ್ಗದ ಆಯ್ಕೆ ಅಂತಿಮಗೊಂಡಿಲ್ಲ’ ಎಂದರು.

ಶ್ರದ್ಧಾ ಶ್ರೀನಾಥ್‌ ನಾಯಕಿ

ಈ ಚಿತ್ರದಲ್ಲಿ ಇಬ್ಬರು ನಾಯಕಿಯರು ಸುದೀಪ್‌ ಜೊತೆಗೆ ರೊಮ್ಯಾನ್ಸ್‌ ಮಾಡಲಿದ್ದಾರೆ. ಜೊತೆಗೆ, ಅತಿಥಿ ಪಾತ್ರದಲ್ಲೂ ನಾಯಕಿಯೊಬ್ಬರು ಬಣ್ಣ ಹಚ್ಚಲಿದ್ದಾರೆ. ಈಗಾಗಲೇ, ಇಬ್ಬರು ನಾಯಕಿಯರ ಪೈಕಿ ಬೆಂಗಳೂರು ಮೂಲದ ರೂಪದರ್ಶಿ ನೀತು ಎಂಬುವರನ್ನು ಹೀರೊಯಿನ್‌ ಆಯ್ಕೆ ಮಾಡಲಾಗಿದೆ. ಆಕೆಯ ಫೋಟೊಶೂಟ್‌ ಕೂಡ ಮಾಡಲಾಗಿದೆ.

ಚಿತ್ರದ ಶೂಟಿಂಗ್‌ಗೂ ಮೊದಲು ನಟಿ ಸಮಂತಾ ಅಕ್ಕಿನೇನಿ ಅವರು ಸುದೀಪ್‌ಗೆ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ಸುದ್ದಿ ಹರಡಿತ್ತು. ಈಗ ಶ್ರದ್ಧಾ ಶ್ರೀನಾಥ್ ಅವರು ನಾಯಕಿಯಾಗಿ ನಟಿಸುವುದು ಪಕ್ಕಾ ಆಗಿದೆ. ಆದರೆ, ಇನ್ನೂ ಚಿತ್ರತಂಡದಿಂದ ಅಧಿಕೃತವಾಗಿ ಮಾಹಿತಿ ಹೊರಬಿದ್ದಿಲ್ಲ. ಪ್ರಸ್ತುತ ಕನ್ನಡದಲ್ಲಿ ಶ್ರದ್ಧಾ ನಟನೆಯ ‘ಗೋದ್ರಾ’ ಸಿನಿಮಾ ಬಿಡುಗಡೆಯ ಹಂತದಲ್ಲಿದೆ.

ಶಿವಕಾರ್ತಿಕ್‌ ನಿರ್ದೇಶನದ ಸುದೀಪ್ ನಟನೆಯ ‘ಕೋಟಿಗೊಬ್ಬ 3’ ಚಿತ್ರದ ಶೂಟಿಂಗ್‌ ಮತ್ತು ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ಕೂಡ ಪೂರ್ಣಗೊಂಡಿದೆ. ಇದಕ್ಕೆ ಸೂರಪ್ಪಬಾಬು ಬಂಡವಾಳ ಹೂಡಿದ್ದಾರೆ.

ಕೊರೊನಾ ಭೀತಿ ಕಾಣಿಸಿಕೊಳ್ಳದಿದ್ದರೆ ಈ ವೇಳೆಗೆ ಸಿನಿಮಾ ತೆರೆ ಕಾಣಬೇಕಿತ್ತು. ಲಾಕ್‌ಡೌನ್‌ ಪರಿಣಾಮ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗಿದೆ. ಚಿತ್ರಮಂದಿರಗಳ ಪ್ರದರ್ಶನಕ್ಕೆ ಸರ್ಕಾರದಿಂದ ಅನುಮತಿ ಸಿಕ್ಕಿದ ಬಳಿಕ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.