
ಸಸ್ಪೆನ್ಸ್, ಕ್ರೈಂ, ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ಪಿಸ್ತೂಲ್’ ಚಿತ್ರದ ಫಸ್ಟ್‌ಲುಕ್ ಪೋಸ್ಟರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ನಟ ವಸಿಷ್ಠ ಸಿಂಹ ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು.
ಆತ್ಮ ಸಿನಿಮಾಸ್ ಬ್ಯಾನರಿನಲ್ಲಿ ಪ್ರಬೀಕ್ ಮೊಗವೀರ್ ಕಥೆ, ಚಿತ್ರಕಥೆ ಬರೆದು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ವೇದ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ವೇದ್ ಈ ಹಿಂದೆ ‘ಸ್ಕೂಲ್ ರಾಮಾಯಣ’, ‘ರಾವೆನ್’ ಚಿತ್ರಗಳನ್ನು ನಿರ್ದೇಶಿಸಿದ್ದರು.
‘ಈ ಚಿತ್ರದಲ್ಲಿ ನಾಯಕ, ನಾಯಕಿ ಎಂಬ ಯಾವುದೇ ಪಾತ್ರಗಳಿಲ್ಲ. ಇದರಲ್ಲಿ ಕಥೆಯೇ ಪ್ರಧಾನ. ಒಂದು ಪಿಸ್ತೂಲ್‌ನಲ್ಲಿ ಆರು ಬುಲೆಟ್‌ಗಳಿರುವಂತೆ, ಈ ಕಥೆಯಲ್ಲಿ ಆರು ಪಾತ್ರಗಳಿರುತ್ತವೆ. ಪ್ರಬೀಕ್ ಮೊಗವೀರ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದು, ಉಳಿದ ಕಲಾವಿದರ ಹುಡುಕಾಟ ನಡೆದಿದೆ. ವಿಶೇಷ ಪಾತ್ರಕ್ಕೆ ದಕ್ಷಿಣ ಭಾರತದ ಜನಪ್ರಿಯ ನಟರೊಬ್ಬರನ್ನು ಅತಿಥಿ ಕಲಾವಿದರನ್ನಾಗಿ ಕರೆತರುವ ಯೋಚನೆಯೂ ಇದೆ’ ಎಂದಿದ್ದಾರೆ ನಿರ್ದೇಶಕ.
‘ಸದ್ಯ ಚಿತ್ರದ ಬಹುತೇಕ ಸ್ಕ್ರಿಪ್ಟ್ ಮತ್ತು ಪ್ರೀ-ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು, ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ನಡೆಯುತ್ತಿದೆ. ಇದೇ ವರ್ಷಾಂತ್ಯದೊಳಗೆ ಸಿನಿಮಾ ಸೆಟ್ಟೇರಲಿದ್ದು, ಮುಂದಿನ ವರ್ಷದ ಮಧ್ಯ ಭಾಗದಲ್ಲಿ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆಯಿದೆ’ ಎಂದಿದೆ ಚಿತ್ರತಂಡ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.