ADVERTISEMENT

ಅಜಯ್‌ ದೇವಗನ್‌ ‘ಥ್ಯಾಂಕ್‌ ಗಾಡ್‌’ಗೂ ಸಂಕಷ್ಟ!

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2022, 6:34 IST
Last Updated 14 ಅಕ್ಟೋಬರ್ 2022, 6:34 IST
ಥ್ಯಾಂಕ್‌ ಗಾಡ್‌ ಚಿತ್ರದ ಪೋಸ್ಟರ್‌
ಥ್ಯಾಂಕ್‌ ಗಾಡ್‌ ಚಿತ್ರದ ಪೋಸ್ಟರ್‌   

ಸಿನಿಮಾಗಳನ್ನು ಬ್ಯಾನ್‌ ಮಾಡುವ, ಬಹಿಷ್ಕರಿಸುವ, ಚಿತ್ರಗಳ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುವ ಟ್ರೆಂಡ್‌ ಇತ್ತೀಚೆಗೆ ಹೆಚ್ಚುತ್ತಿದೆ. ಮೊನ್ನೆ ತಾನೆ ಪ್ರಭಾಸ್‌ ಅಭಿನಯದ ‘ಆದಿಪುರುಷ್‌’ ಸಿನಿಮಾಗೆ ತಡೆ ಕೋರಿ ಕೆಲವರು ಕೋರ್ಟ್‌ ಮೆಟ್ಟಿಲೇರಿದ್ದರು. ಈಗ ಅಜಯ್‌ ದೇವಗನ್‌ ಅವರ ‘ಥ್ಯಾಂಕ್‌ ಗಾಡ್‌’ ಸಿನಿಮಾಗೂ ಅದೇ ಸಂಕಷ್ಟ ಎದುರಾಗಿದೆ.

ಶ್ರೀ ಚಿತ್ರಗುಪ್ತ ಕಲ್ಯಾಣ ಟ್ರಸ್ಟ್‌ ಈ ಸಿನಿಮಾಗೆ ತಡೆಕೋರಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದೆ. ಸಿನಿಮಾದಲ್ಲಿ ಚಿತ್ರಗುಪ್ತನಿಗೆ ಅವಮಾನಿಸಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಸಿನಿಮಾದ ಪೋಸ್ಟರ್‌ ಮತ್ತು ಟ್ರೇಲರ್‌ ಅನ್ನು ಯೂಟ್ಯೂಬ್‌ ಹಾಗೂ ಇತರ ವೇದಿಕೆಗಳಿಂದ ಹಿಂಪಡೆಯಲು ನ್ಯಾಯಾಲಯ ನಿರ್ದೇಶನ ನೀಡಬೇಕು. ಚಿತ್ರಮಂದಿರ ಹಾಗೂ ಒಟಿಟಿಯಲ್ಲಿ ಸಿನಿಮಾ ಬಿಡುಗಡೆಯಾಗದಂತೆ ತಡೆ ನೀಡಬೇಕು ಎಂದು ಅರ್ಜಿದಾರರು ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಸಿನಿಮಾದಲ್ಲಿ ಸಂವಿಧಾನದ ವಿಧೇಯಕ 14 ಮತ್ತು 25ರ ಉಲ್ಲಂಘನೆಯಾಗಿದೆ. ಜೊತೆಗೆ ಛಾಯಾಚಿತ್ರಗ್ರಹಣ ಕಾಯ್ದೆ 5ಬಿಯನ್ನು ಉಲ್ಲಂಘಿಸಲಾಗಿದೆ ಎಂದು ಅರ್ಜಿದಾರರ ಪರ ವಕೀಲ ಲೊಕೇಶ್‌ ಕುಮಾರ್‌ ಮನವಿಯಲ್ಲಿ ತಿಳಿಸಿದ್ದಾರೆ.

ADVERTISEMENT

ಕಾಯಸ್ಥ ಸಮುದಾಯದ ಧಾರ್ಮಿಕ ನಂಬಿಕೆಯನ್ನು ಸಿನಿಮಾದಲ್ಲಿ ಅವಹೇಳನ ಮಾಡಲಾಗಿದೆ. ಹೀಗಾಗಿ ಸಿನಿಮಾ ತೆರೆಗೆ ಬಾರದಂತೆ ನ್ಯಾಯಾಲಯ ನಿರ್ದೇಶನ ನೀಡಬೇಕು ಎಂಬುದು ಅರ್ಜಿದಾರರ ವಾದ.

ಅಜಯ್‌ ದೇವಗನ್‌ ಮುಖ್ಯಭೂಮಿಕೆಯಲ್ಲಿರುವ ಸಿನಿಮಾ ಅ.25ರಂದು ತೆರೆಗೆ ಬರಲಿದೆ. ಸಿದ್ದಾರ್ಥ್‌ ಮಲ್ಹೋತ್ರ ಹಾಗೂ ರಾಕುಲ್‌ ಪ್ರೀತ್‌ ಸಿಂಗ್‌ ಕೂಡ ಸಿನಿಮಾದಲ್ಲಿದ್ದು, ಇಂದ್ರ ಕುಮಾರ್‌ ನಿರ್ದೇಶಕರು. ಟಿ–ಸಿರಿಸ್‌ ಚಿತ್ರವನ್ನು ನಿರ್ಮಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.