ADVERTISEMENT

ಪೊಲೀಸ್‌ ಸಹಾಯವಾಣಿ '100' ನನ್ನ ಹೊಸ ಚಿತ್ರದ ಹೆಸರು: ನಟ ರಮೇಶ ಅರವಿಂದ್‌

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2021, 13:47 IST
Last Updated 9 ನವೆಂಬರ್ 2021, 13:47 IST
ನಟ ರಮೇಶ ಅರವಿಂದ್‌
ನಟ ರಮೇಶ ಅರವಿಂದ್‌   

ಹೊಸಪೇಟೆ (ವಿಜಯನಗರ): ‘ನನ್ನ ಹೊಸ ಚಿತ್ರ ‘100’. ಸೋಷಿಯಾಲ್‌ ಮೀಡಿಯಾದಿಂದಾಗುವ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದೆ. ಹೀಗಾಗಿ ನನ್ನ ನಟನೆಯ ಚಿತ್ರಕ್ಕೆ ಪೊಲೀಸ್‌ ಸಹಾಯವಾಣಿ ಸಂಖ್ಯೆ 100 ಹೆಸರಿಡಲಾಗಿದೆ’ ಎಂದು ನಟ ರಮೇಶ ಅರವಿಂದ್‌ ಹೇಳಿದರು.

‘ಈ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ಪೂರ್ಣಗೊಂಡಿದೆ. ರಚಿತಾ ರಾಮ್‌, ಪ್ರಕಾಶ್‌ ಬೆಳವಾಡಿ ಸೇರಿದಂತೆ ಹಲವರು ನಟಿಸಿದ್ದಾರೆ. ನ. 19ರಂದು ರಾಜ್ಯದ 120 ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ‘ಫ್ಯಾಮಿಲಿ ಥ್ರಿಲ್ಲರ್‌’ ಚಿತ್ರ ಇದಾಗಿದೆ. ಮೊಬೈಲ್‌ನಲ್ಲಿ ಮಕ್ಕಳು ಯಾರ ಜತೆ ಮಾತನಾಡುತ್ತಾರೆ. ಏನು ನೋಡುತ್ತಾರೆ ಎನ್ನುವುದಕ್ಕೆ ಯಾವುದೇ ನಿಯಂತ್ರಣ ಇಲ್ಲ. ಅಲ್ಲಿನ ಸಂದೇಶಗಳು, ಕರೆಗಳಿಂದ ಒಮ್ಮೊಮ್ಮೆ ಏನೆಲ್ಲಾ ಘಟನೆಗಳು ಸಂಭವಿಸುತ್ತವೆ. ಒಂದು ಕರೆಯಿಂದ ಒಂದು ಕುಟುಂಬದಲ್ಲಿ ಆಗುವ ಸಮಸ್ಯೆಯೇ ಚಿತ್ರದ ಕಥಾಹಂದರ. ನಾನು ಪೊಲೀಸ್‌ ಅಧಿಕಾರಿಯ ಪಾತ್ರ ನಿರ್ವಹಿಸಿದ್ದು, ಪ್ರಕರಣವನ್ನು ಭೇದಿಸುವ ಕೆಲಸ ಮಾಡುತ್ತೇನೆ’ ಎಂದು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ದೃಶ್ಯಂ’, ‘ಶಿವಾಜಿ ಸುರತ್ಕಲ್‌’ ಎರಡೂ ಚಿತ್ರಗಳನ್ನು ಕೂಡಿಸಿ ಮಾಡಿದ ಚಿತ್ರವೆಂದರೆ ತಪ್ಪಾಗಲಾರದು. ನಾಯಕನಾಗಿ ನಟಿಸುತ್ತಿರುವ ನನ್ನ 102ನೇ ಚಿತ್ರವಿದು. ಹತ್ತು ಚಿತ್ರಗಳಲ್ಲಿ ನಿರ್ದೇಶಕನಾಗಿ ಕೆಲಸ ಮಾಡಿರುವೆ. ಆಯಾ ವಯಸ್ಸಿಗೆ ತಕ್ಕಂತೆ ಸಿನಿಮಾ ಮಾಡಬೇಕು. ಇಲ್ಲವಾದರೆ ಜನ ಸ್ವೀಕರಿಸುವುದಿಲ್ಲ’ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ADVERTISEMENT

‘ಅಸುರನ್‌’, ‘ಜೈ ಭೀಮ್‌’ ನಂತಹ ಸಿನಿಮಾಗಳಿಗೆ ಒಟಿಟಿಯಲ್ಲಿ ದೊಡ್ಡ ವೇದಿಕೆ ಇದೆ. ಕನ್ನಡಕ್ಕೆ ಸಿಕ್ಕರೆ ಖಂಡಿತವಾಗಿಯೂ ಅಂತಹ ಚಿತ್ರಗಳನ್ನು ಮಾಡಬಹುದು. ಈ ರೀತಿಯ ಚಿತ್ರಗಳು ನಡೆಯುತ್ತವೆಯೋ ಇಲ್ಲವೋ ಎಂದು ಹೆದರಿ ಕನ್ನಡದಲ್ಲಿ ಈ ರೀತಿಯ ಚಿತ್ರಗಳಲ್ಲಿ ನಟಿಸಲು ಕನ್ನಡ ನಟರು ಮುಂದಾಗುತ್ತಿಲ್ಲ. ಆದರೆ, ದೊಡ್ಡ ನಟರು ಪ್ರಯೋಗಾತ್ಮಕ ಚಿತ್ರಗಳಲ್ಲಿ ನಟಿಸಿದರೆ ಅವುಗಳಿಗೆ ಮಹತ್ವ ಬರುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ನಟ ಪುನೀತ್‌ ರಾಜಕುಮಾರ್‌ ಅವರ ನಿಧನದಿಂದ ದೊಡ್ಡ ಆಘಾತವಾಗಿದೆ. ಅವರ ನಿಧನದ ಹಿಂದಿನ ದಿನ ಅವರೊಂದಿಗೆ ಕಳೆದಿದ್ದೆ. ನಿಧನದ ವಿಷಯ ಕೇಳಿ ಬಹಳ ಆಘಾತವಾಯಿತು. ಕನ್ನಡ ಚಿತ್ರರಂಗಕ್ಕೆ ದೊಡ್ಡ ನಷ್ಟವಾಗಿದೆ. ಅವರ ಸಾವಿನ ಕುರಿತ ವಿವಾದಗಳ ಬಗ್ಗೆ ನಾನೇನೂ ಮಾತನಾಡಲಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.