ADVERTISEMENT

Ponniyin Selvan | ಕೃತಿಚೌರ್ಯ ಆರೋಪ: ₹2 ಕೋಟಿ ಭದ್ರತೆ ಇಡಲು ರೆಹಮಾನ್‌ಗೆ ಸೂಚನೆ

ಪಿಟಿಐ
Published 26 ಏಪ್ರಿಲ್ 2025, 10:16 IST
Last Updated 26 ಏಪ್ರಿಲ್ 2025, 10:16 IST
   

ನವದೆಹಲಿ: ತಮಿಳಿನ ಪೊನ್ನಿಯನ್ ಸೆಲ್ವನ್–2 ಚಿತ್ರದಲ್ಲಿನ ಗೀತೆ ಸಂಯೋಜನೆಯಲ್ಲಿ ಶಿವ ಸ್ತುತಿಯ ರಾಗದ ಕೃತಿ ಚೌರ್ಯ ನಡೆದಿದೆ ಎಂದು ಆರೋಪಿಸಲಾಗಿದ್ದ ಪ್ರಕರಣದಲ್ಲಿ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಹಾಗೂ ನಿರ್ಮಾಪಕರಿಗೆ ₹2 ಕೋಟಿ ಭದ್ರತಾ ಠೇವಣಿ ಇಡುವಂತೆ ದೆಹಲಿ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ.

ಜೂನಿಯರ್ ಡಾಗರ್‌ ಸೋದರರು ಸಂಯೋಜಿಸಿದ ‘ಶಿವ ಸ್ತುತಿ’ ಶಾಸ್ತ್ರೀಯ ಗೀತೆಯ ರಾಗವನ್ನು, ಪೊನ್ನಿಯನ್ ಸೆಲ್ವನ್‌–2ರ ಗೀತೆ ‘ವೀರ ರಾಜಾ ವೀರ’ದಲ್ಲಿನ ಪ್ರತಿಯೊಂದು ಲಯ, ಭಾವದಲ್ಲೂ ಬಳಸಲಾಗಿದೆ. ಇದು ಶಿವನಿಗೆ ಅರ್ಪಣೆ ಮಾಡಿದ ಗೀತೆಯ ಮೂಲ ಸಂಯೋಜಕರ ಹಕ್ಕು ಸ್ವಾಮ್ಯದ ಉಲ್ಲಂಘನೆಯಾಗಿದೆ’ ಎಂಬ ವಾದವನ್ನು ಪುರಸ್ಕರಿಸಿದ ನ್ಯಾ. ಪ್ರತಿಭಾ ಎಂ. ಸಿಂಗ್‌, ಮಧ್ಯಂತರ ಆದೇಶ ಹೊರಡಿಸಿದ್ದಾರೆ.

‘ಈಗಾಗಲೇ ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗುತ್ತಿರುವ ಈ ಸಿನಿಮಾದ ‘ವೀರ ರಾಜಾ ವೀರ’ ಹಾಡು ಪ್ರಸಾರದ ಸಂದರ್ಭದಲ್ಲಿ ಜೂನಿಯರ್ ಡಾಗರ್ ಸೋದರರು– ದಿ. ಉಸ್ತಾದ್ ಎನ್. ಫಯಾಜುದ್ದೀನ್‌ ಡಾಗರ್‌ ಮತ್ತು ದಿ. ಉಸ್ತಾದ್ ಜಹೀರುದ್ದೀನ್ ಡಾಗರ್ ಅವರ ಹೆಸರುಗಳನ್ನು ಪ್ರಸಾರ ಮಾಡಬೇಕು. ಜತೆಗೆ ಕಲಾವಿದರ ಕುಟುಂಬಗಳಿಗೆ ತಲಾ ₹ 2 ಲಕ್ಷ ಪರಿಹಾರ ನೀಡಬೇಕು’ ಎಂದು ಹೈಕೋರ್ಟ್ ನಿರ್ದೇಶಿಸಿದೆ.

ADVERTISEMENT

ದಿ. ಉಸ್ತಾದ್ ಎನ್. ಫಯಾಜುದ್ದೀನ್‌ ಡಾಗರ್‌ ಅವರ ಪುತ್ರ ಉಸ್ತಾದ್ ಫಯಾಜ್ ವಸಿಫುದ್ದೀನ್ ಡಾಗರ್‌ ಅವರು ಕೃತಿ ಚೌರ್ಯ ಕುರಿತು ನ್ಯಾಯಾಲಯದ ಮೊರೆ ಹೋಗಿದ್ದರು. 

ಇವರ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ, ‘ರೆಹಮಾನ್ ಸಂಯೋಜಿಸಿದ ಗೀತೆಯ ಸಾಹಿತ್ಯ ಬೇರೆಯೇ ಆಗಿದ್ದರೂ, ಸಂಗೀತದ ಲಯ ಒಂದೇ ಆಗಿದೆ. ಸಿನಿಮಾ ಗೀತೆಯಲ್ಲಿ ಆಧುನಿಕತೆ ಇದ್ದರೂ, ಮೂಲ ಸಂಯೋಜಕರ ಶಿವ ಸ್ತುತಿಯ ಲಯವನ್ನು ಹಾಗೆಯೇ ಬಳಸಿಕೊಳ್ಳಲಾಗಿದೆ. ಹೀಗಾಗಿ ಇದು ಅರ್ಜಿದಾರರ ಹಕ್ಕುಗಳ ಉಲ್ಲಂಘನೆಯಾಗಿದೆ’ ಎಂದು ಅಭಿಪ್ರಾಯಪಟ್ಟಿತು.

ಆರೋಪಿಗಳಾದ ಎ.ಆರ್. ರೆಹಮಾನ್, ಮದ್ರಾಸ್ ಟಾಕೀಸ್ ಮತ್ತು ಲೈಕಾ ನಿರ್ಮಾಣ ಸಂಸ್ಥೆಗಳಿಗೆ ₹2 ಕೋಟಿ ಭದ್ರತಾ ಠೇವಣಿಯನ್ನು ನ್ಯಾಯಾಲಯದಲ್ಲಿ ಇಡುವಂತೆ ಹೈಕೋರ್ಟ್ ತನ್ನ ಮಧ್ಯಂತರ ಆದೇಶದಲ್ಲಿ ಹೇಳಿದೆ. ಇದು ಪ್ರಕರಣದ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಹೈಕೋರ್ಟ್ ಹೇಳಿದೆ.

‘ಮೊದಲನೇ ಆರೋಪಿಯಾದ ರೆಹಮಾನ್ ಅವರು ಜಾಗತಿಕ ಮನ್ನಣೆ ಪಡೆದಿದ್ದರೂ, ದೂರುದಾರರ ಕೆಲಸಕ್ಕೆ ಯಾವುದೇ ಮಾನ್ಯತೆ ನೀಡಿದವರಲ್ಲ. ಈ ಪ್ರಕರಣ ಕುರಿತು ರೆಹಮಾನ್ ಅವರನ್ನು ಡಾಗರ್ ಕುಟುಂಬದವರು ಭೇಟಿ ಮಾಡಿದಾಗಲೂ ಒಲ್ಲದ ಮನಸ್ಸಿನಿಂದ ಸಮ್ಮತಿಸಿದ್ದರು. ಈ ಗೀತೆ ಹಾಡಿರುವವರೂ ದೂರುದಾರರ ಶಿಷ್ಯರಾಗಿದ್ದಾರೆ. ಈ ಎಲ್ಲಾ ಸಂಗತಿಗಳು ಶಿವ ಸ್ತುತಿ ಮತ್ತು ವೀರ ರಾಜ ವೀರ ಗೀತೆಗಳ ರಾಗ ಸಂಯೋಜನೆ ಒಂದೇ ಎಂಬುದಕ್ಕೆ ಸಾಕ್ಷಿಯಾಗಿದೆ’ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು.

ರೆಹಮಾನ್ ಪರ ವಕೀಲರು ವಾದ ಮಂಡಿಸಿ, ‘ಶಿವ ಸ್ತುತಿಯು ಮೂಲತಃ ಶಾಸ್ತ್ರೀಯ ದೃಪದ್‌ ರಾಗದಲ್ಲಿದೆ. ಗೀತೆಯನ್ನು ಹಾಡಿರುವುದು ಮತ್ತು ಗೀತೆಯ ಸಂಯೋಜನೆ ಮೂಲ ಗೀತೆಗೆ ಹೋಲಿಕೆಯಾಗದು. ಹೀಗಾಗಿ ಇದು ಹಕ್ಕುಸ್ವಾಮ್ಯದ ಉಲ್ಲಂಘನೆಯಾಗದು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.