ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಬಾಂದ್ರಾದ ನಿವಾಸಕ್ಕೆ ಅತಿಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ಘಟನೆ ನಡೆದ ಬೆನ್ನಲ್ಲೇ, ಸಂದರ್ಶಕರ ಪ್ರವೇಶ ಮತ್ತು ನಿರ್ಗಮನಕ್ಕೆ ಕಠಿಣ ನಿಯಮ ಜಾರಿಗೆ ತರುವ ಬಗ್ಗೆ ಮುಂಬೈ ಪೊಲೀಸರು ಯೋಜಿಸುತ್ತಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಲಾರೆನ್ಸ್ ಬಿಷ್ಣೊಯ್ ಗ್ಯಾಂಗ್‌ನಿಂದ ಅವರಿಗೆ ಪ್ರಾಣ ಬೆದರಿಕೆ ಇರುವ ಹಿನ್ನೆಲೆ, ಈಗಾಗಲೇ ವೈ-ಪ್ಲಸ್ ಭದ್ರತೆಯನ್ನು ಒದಗಿಸಲಾಗಿದೆ.
ಮಂಗಳವಾರ ಹಾಗೂ ಬುಧವಾರ ಅವರ ನಿವಾಸಕ್ಕೆ ಅತಿಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ಇಬ್ಬರನ್ನು (ಮಹಿಳೆ ಹಾಗೂ ಪುರುಷ) ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸಲ್ಮಾನ್ ಖಾನ್ ಅವರಿಗೆ ಬರುತ್ತಿರುವ ಬೆದರಿಕೆ ಕರೆಗಳು ಹಾಗೂ ಅತಿಕ್ರಮವಾಗಿ ಪ್ರವೇಶ ಘಟನೆಗಳನ್ನು ಪರಿಗಣಿಸಿ, ಸಂದರ್ಶಕರ ಪ್ರವೇಶವನ್ನು ನಿಯಂತ್ರಿಸುವ ಮತ್ತು ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸುವ ಬಗ್ಗೆ ಪೊಲೀಸರು ಚಿಂತನೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಾಂದ್ರಾದ ನಿವಾಸ ಖಾಸಗಿ ಕಟ್ಟಡವಾಗಿರುವುದರಿಂದ, ಪ್ರತಿಯೊಬ್ಬ ಸಂದರ್ಶಕರನ್ನು ಪರಿಶೀಲಿಸುವುದು ಒಂದು ಸವಾಲಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಸಂದರ್ಶಕರು ಅವರ ನಿವಾಸಕ್ಕೆ ಭೇಟಿ ನೀಡಲು ತಮ್ಮ ಗುರುತನ್ನು ದೃಢೀಕರಿಸಬೇಕಾಗುತ್ತದೆ.
ಸಲ್ಮಾನ್ ಖಾನ್ ಅವರ ಬಾಂದ್ರಾದ ನಿವಾಸಕ್ಕೆ ಅತಿಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ಮಹಿಳೆ ಹಾಗೂ ಪುರುಷನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ಹಾಗೂ ಬುಧವಾರ ನಡೆದ ಪ್ರತ್ಯೇಕ ಘಟನೆಗಳಲ್ಲಿ ಈ ಇಬ್ಬರನ್ನು ಬಂಧಿಸಲಾಗಿದೆ. ಜೀತೇಂದ್ರ ಸಿಂಗ್ ಮತ್ತು ಇಶಾ ಛಾಬ್ರಿಯಾ ಬಂಧಿತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.