ಬೆಂಗಳೂರಿನಲ್ಲಿ ಜೂನ್27ರಂದು ನಡೆದ ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ ಮೂರನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಅತ್ಯುತ್ತಮ ಸಂಕಲನ ಪ್ರಶಸ್ತಿ ಪಡೆದ ಜ್ಞಾನೇಶ್ ಬಿ.ಮಠದ್: ಕೆರೆಬೇಟೆ
ಪ್ರಜಾವಾಣಿ ಚಿತ್ರ
ಅತ್ಯುತ್ತಮ ಸಂಕಲನ: ಜ್ಞಾನೇಶ್ ಬಿ. ಮಠದ್
ಸಿನಿಮಾ– ಕೆರೆಬೇಟೆ
ನಾಮನಿರ್ದೇಶನಗೊಂಡವರು
ಅರವಿಂದ ಶಾಸ್ತ್ರಿ– ಬಿಸಿಬಿಸಿ ಐಸ್‌ಕ್ರೀಂ
ರಿಕಿ ಮಾರ್ಟಿನ್– ಅಂಶು
ಜ್ಞಾನೇಶ್ ಬಿ.ಮಠದ್_ ಕೆರೆಬೇಟೆ
ಶಶಾಂಕ್ ನಾರಾಯಣ್– ಶಾಖಾಹಾರಿ
ಸಂಜೀವ್ ಜಾಗೀರ್‌ದಾರ್– ಬ್ಲಿಂಕ್
ಮನು ಶೆಡ್ಗಾರ್– ಫಾರ್ ರಿಜಿಸ್ಟ್ರೇಷನ್
ಮಲೆನಾಡಿನ ಸೊಗಡು, ಅಲ್ಲಿನ ಆಚರಣೆ, ಭಾಷೆಯ ಜೊತೆಗೆ ವಿಶಿಷ್ಟ ಕಥಾ ನಿರೂಪಣಾ ಶೈಲಿಯಿಂದ ಗಮನಸೆಳೆದಿದ್ದ ಸಿನಿಮಾ ‘ಕೆರೆಬೇಟೆ’. ಕಥೆಯೊಂದಿಗೆ ದೃಶ್ಯ ನಿರೂಪಣಾ ವೈವಿಧ್ಯದಿಂದಲೂ ಸಿನಿಪ್ರಿಯರ ಮನ ಗೆದ್ದಿತ್ತು. 2024ರ ಮಾರ್ಚ್ ತಿಂಗಳಿನಲ್ಲಿ ತೆರೆಕಂಡ ಈ ಸಿನಿಮಾ ಹಲವು ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡಿದ್ದು, ಹೊಸ ಪ್ರಯತ್ನವಾಗಿ ಹೆಸರು ಮಾಡಿತು.
2025ರ ಸಿನಿ ಸಮ್ಮಾನ ಅತ್ಯುತ್ತಮ ಧ್ವನಿಗ್ರಹಣ, ಶಬ್ದವಿನ್ಯಾಸ ವಿಭಾಗದಲ್ಲಿಯೂ ಪ್ರಶಸ್ತಿ ಗಳಿಸಿಕೊಂಡ ಈ ಸಿನಿಮಾದ ‘ಅತ್ಯುತ್ತಮ ಸಂಕಲನ’ಕ್ಕಾಗಿ ಜ್ಞಾನೇಶ್ ಬಿ. ಮಠದ್ ಅವರಿಗೆ ಪ್ರಶಸ್ತಿ ನೀಡಲಾಯಿತು. ಚಂದನವನದ ಸಂಕಲನಕಾರರಾದ ಕೆಂಪರಾಜ್ ಹಾಗೂ ಬಸವರಾಜ ಅರಸ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಸಿನಿಮಾದ ಸಂಕಲನ ಕುರಿತು ಮಾತನಾಡಿದ ಬಸವರಾಜ್ ಅರಸ್ ಅವರು, ‘ಎಡಿಟಿಂಗ್ ಎನ್ನುವುದು ಸವಾಲಿನ ಕೆಲಸ. ಅದನ್ನು ಕಲಿತು ಉತ್ತಮವಾಗಿ ದುಡಿಸಿಕೊಳ್ಳುವುದು ಒಂದು ಸವಾಲು. ಸಿನಿಮಾವನ್ನು ಎಷ್ಟು ಪರಿಣಾಮಕಾರಿಯಾಗಿ ರೂಪಿಸಿಕೊಡಬೇಕು ಎಂಬ ಜವಾಬ್ದಾರಿ ಸಂಕಲನಕಾರನದ್ದು. ಸಿನಿಮಾದ ಪ್ರತಿ ಫ್ರೇಮ್ ಅನ್ನೂ ಜವಾಬ್ದಾರಿಯುತವಾಗಿ ನಿರ್ಧರಿಸಬೇಕಾಗುತ್ತದೆ. ನಮ್ಮ ಸಂಕಲನದ ಮೇಲೆ ನಂಬಿಕೆ ಇಟ್ಟು ಕೆಲಸ ಕೊಟ್ಟ ನಿರ್ದೇಶಕರು, ನಿರ್ಮಾಪಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಜ್ಞಾನೇಶ್ ಬಿ. ಮಠದ್, ‘ಪ್ರಶಸ್ತಿ ನೀಡಿದ ಪ್ರಜಾವಾಣಿಗೆ ಧನ್ಯವಾದ. ನಿರ್ದೇಶಕ ರಾಜ್‌ಗುರು ಹಾಗೂ ನಾಯಕ ಗೌರಿಶಂಕರ್, ಇಡೀ ಸಿನಿಮಾ ತಂಡಕ್ಕೆ ಧನ್ಯವಾದಗಳು. ಹಿರಿಯ ಸಂಕಲನಕಾರರಿಂದ ಈ ಪ್ರಶಸ್ತಿ ಪಡೆದುಕೊಂಡಿರುವುದು ಬಹಳ ಹೆಮ್ಮೆ ಎನಿಸುತ್ತಿದೆ’ ಎಂದು ಸಂತಸ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.