‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ಮೂರನೇ ಆವೃತ್ತಿಯ ಸಮಾರಂಭ ಜೂನ್ 27ರಂದು ನಡೆಯಲಿದೆ. 19 ವಿಭಾಗಗಳಲ್ಲಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರ ಹೆಸರುಗಳನ್ನು, ನಾಮನಿರ್ದೇಶನಗೊಂಡ ಸಿನಿಮಾಗಳ ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ. ಇದೀಗ ‘ಅತ್ಯುತ್ತಮ ನಿರ್ದೇಶನ’ ವಿಭಾಗದಲ್ಲಿ ನಾಮನಿರ್ದೇಶನ ಗೊಂಡವರನ್ನು ಪರಿಚಯಿಸುವ ಸಮಯ.
ಇನ್ನಷ್ಟು ಮಾಹಿತಿಗಳಿಗಾಗಿ ವೆಬ್‌ಸೈಟ್ ನೋಡಿ https://www.prajavani.net/cinesamman/season3
ಸಂತೋಷ್ ಆನಂದರಾಮ್
ಇವರು ‘ಯುವ’ ಚಿತ್ರದ ನಿರ್ದೇಶನಕ್ಕಾಗಿ ನಾಮನಿರ್ದೇಶನಗೊಂಡಿದ್ದಾರೆ. ರಾಕಿ ಚಿತ್ರದ ಮೂಲಕ ಗೀತರಚನೆಕಾರರಾಗಿ ಚಿತ್ರರಂಗ ಪ್ರವೇಶಿಸಿದರು. ‘ಚಿಂಗಾರಿ’ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆಕಾರರಾಗಿ, ಜತೆಗೆ ನಿರ್ದೇಶನ ವಿಭಾಗದಲ್ಲಿಯೂ ಕೆಲಸ ಮಾಡಿದರು. 2014ರಲ್ಲಿ ತೆರೆ ಕಂಡ ಇವರ ನಿರ್ದೇಶನದ ಮೊದಲ ಚಿತ್ರ ‘ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ’ ಸೂಪರ್ ಹಿಟ್. ಇದಾದ ಬಳಿಕ ಪುನೀತ್ ರಾಜ್‌ಕುಮಾರ್ ಅವರ ‘ರಾಜಕುಮಾರ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದರು. ಈ ಚಿತ್ರ ಕೂಡ ಬ್ಲಾಕ್ ಬಸ್ಟರ್ ಪಟ್ಟಿ ಸೇರಿತು. ನಂತರ ಇದೇ ಜೋಡಿಯ ‘ಯುವರತ್ನ’ ತೆರೆ ಕಂಡಿತು. ಪುನೀತ್ ನಿಧನದ ಬಳಿಕ ‘ಯುವ’ ಚಿತ್ರ ಕೈಗೆತ್ತಿಕೊಂಡರು. ಇದು ಯುವರಾಜ್ ಕುಮಾರ್ ಅವರನ್ನು ನಾಯಕನಾಗಿ ಬೆಳ್ಳಿತೆರೆಗೆ ಪರಿಚಯಿಸಿದ ಚಿತ್ರ.
ಸಿಂಪಲ್ ಸುನಿ
ನಿರ್ದೇಶಕ, ನಿರ್ಮಾಪಕ, ಚಿತ್ರಕಥೆಗಾರ ಮತ್ತು ಗೀತರಚನೆಕಾರನಾಗಿ ಗುರುತಿಸಿಕೊಂಡಿರುವ ಇವರು ‘ಒಂದು ಸರಳ ಪ್ರೇಮಕಥೆ’ ಚಿತ್ರಕ್ಕಾಗಿ ನಾಮನಿರ್ದೇಶಿತರಾಗಿದ್ದಾರೆ. ತಮ್ಮ ಮೊದಲ ಚಿತ್ರ ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಯಶಸ್ವಿಯಾದ ಬಳಿಕ ಇವರು ಚಿತ್ರರಂಗದಲ್ಲಿ ಸಿಂಪಲ್ ಸುನಿ ಎಂದೇ ಜನಪ್ರಿಯರಾದರು. ‘ಉಳಿದವರ ಕಂಡಂತೆ’ ಚಿತ್ರದ ನಿರ್ಮಾಪಕರಲ್ಲೊಬ್ಬರು. ‘ಆಪರೇಷನ್ ಅಲಮೇಲಮ್ಮ’, ‘ಚಮಕ್’ ಸೇರಿದಂತೆ ಒಂದಷ್ಟು ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸದ್ಯ ‘ಗತವೈಭವ’, ‘ದೇವರು ರುಜು ಮಾಡಿದನು’ ಸೇರಿದಂತೆ ನಾಲ್ಕು ಸಿನಿಮಾಗಳು ಇವರ ಬತ್ತಳಿಕೆಯಲ್ಲಿವೆ.
ಪೃಥ್ವಿ ಕೊಣನೂರು
ಗಟ್ಟಿಯಾದ ಸಾಮಾಜಿಕ ಸಂದೇಶವುಳ್ಳ ಕಲಾತ್ಮಕ ಸಿನಿಮಾಗಳಿಗೆ ಹೆಸರುವಾಸಿಯಾಗಿರುವ ಇವರು ‘ಹದಿನೇಳೆಂಟು’ ಚಿತ್ರಕ್ಕಾಗಿ ನಾಮನಿರ್ದೇಶನಗೊಂಡಿದ್ದಾರೆ. ಮಾಡಿದ್ದು ನಾಲ್ಕು ಸಿನಿಮಾಗಳಾದರೂ, ಎಲ್ಲವೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಂಥವು. ಇವರ ಮೊದಲ ಸಿನಿಮಾ ‘ಅಲೆಗಳು’ ಕೆಲ ಅಂತರರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಗೊಂಡಿತ್ತು. ನಿರ್ದೇಶಕನಾಗಿ ಗಮನ ಸೆಳೆದಿದ್ದು ‘ರೈಲ್ವೆ ಚಿಲ್ಡ್ರನ್’ ಚಿತ್ರದಿಂದ. ಮಕ್ಕಳ ಕುರಿತಾದ ವಿಭಿನ್ನ ಕಥೆಯನ್ನು ಹೊಂದಿರುವ ಚಿತ್ರವಿದು. ಇವರ ‘ಪಿಂಕಿ ಎಲ್ಲಿ’ ಚಿತ್ರ 2020ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಒಂದಷ್ಟು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತು. ನಂತರದ ‘ಹದಿನೇಳೆಂಟು’ ಚಿತ್ರ ಕೂಡ ಬೂಸಾನ್ ಸೇರಿದಂತೆ ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಒಂದಷ್ಟು ಪ್ರಶಸ್ತಿಗಳನ್ನು ಮೂಡಿಗೇರಿಸಿಕೊಂಡಿತು. ಈ ಚಿತ್ರದಿಂದ ನಿರ್ದೇಶನದ ಜತೆಗೆ ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿದರು. ಸದ್ಯ ಹೊಸ ಚಿತ್ರವೊಂದರ ಸಿದ್ಧತೆಯಲ್ಲಿದ್ದಾರೆ.
ಸಿದ್ದು ಪೂರ್ಣಚಂದ್ರ
‘ತಾರಿಣಿ’ ಚಿತ್ರಕ್ಕಾಗಿ ನಾಮನಿರ್ದೇಶನಗೊಂಡಿದ್ದಾರೆ. ಕಲಾತ್ಮಕ ಸಿನಿಮಾಗಳಿಂದಲೇ ಗುರುತಿಸಿಕೊಂಡಿರುವ ಇವರು ‘ದಾರಿ ಯಾವುದಯ್ಯಾ ವೈಕುಂಠಕೆ’ ಚಿತ್ರದ ಮೂಲಕ ನಿರ್ದೇಶಕರಾದರು. ಈ ಚಿತ್ರ ಅಂತರರಾಷ್ಟ್ರೀಯ ಚಿತ್ರೋತ್ಸವದ ಹೆಸರಿನಲ್ಲಿ ನಡೆಯುವ ಇತರ ಕೆಲವು ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಪಡೆಯಿತು. ‘ಬ್ರಹ್ಮಕಮಲ’, ‘ಈ ಪಾದ ಪುಣ್ಯಪಾದ’ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಸದ್ಯ ಇವರು ‘ಪುಟ್ಟಣ್ಣನ ಕತ್ತೆ’ ಎಂಬ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ.
ಎಂ.ಭರತ್ ರಾಜ್
‘ಲಾಫಿಂಗ್ ಬುದ್ಧ’ ಚಿತ್ರಕ್ಕಾಗಿ ನಾಮನಿರ್ದೇಶಿತರಾಗಿದ್ದಾರೆ. ಬಳ್ಳಾರಿಯ ಶಿರಗುಪ್ಪದವರಾದ ಇವರು ಇಂಜಿನಿಯರಿಂಗ್ ಪದವೀಧರ. ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದವರು ಸಿನಿಮಾ ಮೇಲಿನ ಒಲವಿನಿಂದ ಕೆಲಸ ಬಿಟ್ಟು ಚಿತ್ರರಂಗದತ್ತ ಮುಖ ಮಾಡಿದರು. ‘ಯಾನ’ ಚಿತ್ರದ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡುವುದರೊಂದಿಗೆ ಸಿನಿಪಯಣ ಪ್ರಾರಂಭಿಸಿದರು. ಬಳಿಕ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ ಚಿತ್ರದ ಸಹ ನಿರ್ದೇಶಕನಾಗಿ ರಿಷಬ್ ಶೆಟ್ಟಿ ತಂಡ ಸೇರಿಕೊಂಡರು. ‘ಹೀರೋ’ ಇವರ ಚೊಚ್ಚಲ ನಿರ್ದೇಶನದ ಸಿನಿಮಾ. ಸದ್ಯ ಇನ್ನೊಂದು ಚಿತ್ರದ ಬರವಣಿಗೆಯಲ್ಲಿದ್ದಾರೆ.
ಜಯಶಂಕರ್ ಆರ್ಯರ್
‘ಶಿವಮ್ಮ ಯರೇಹಂಚಿನಾಳ’ ಚಿತ್ರಕ್ಕಾಗಿ ನಾಮನಿರ್ದೇಶನಗೊಂಡಿದ್ದಾರೆ. ಇಂಜಿನಿಯರ್ ಆಗಿರುವ ಇವರು ಕಿರುಚಿತ್ರಗಳಿಂದ ಚಿತ್ರರಂಗ ಪ್ರವೇಶಿಸಿದರು. ರಿಷಬ್ ಶೆಟ್ಟಿ ನಿರ್ಮಾಣದ ‘ಕಥಾ ಸಂಗಮ’ ಚಿತ್ರದ ಏಳು ನಿರ್ದೇಶಕರಲ್ಲಿ ಒಬ್ಬರು. ಸಹಜತೆಯಿಂದ ಕೂಡಿದ ಚಿತ್ರಗಳಿಗೆ ಒತ್ತುಕೊಡುವ ಇವರು ವಿದೇಶಿ ಚಿತ್ರಗಳ ಕುರಿತು ಸಾಕಷ್ಟು ಅಧ್ಯಯನ ನಡೆಸಿದ್ದಾರೆ. ಇವರ ‘ಶಿವಮ್ಮ ಯರೇಹಂಚಿನಾಳ’ ಬೂಸಾನ್ ಚಿತ್ರೋತ್ಸವ ಸೇರಿದಂತೆ ಸಾಕಷ್ಟು ಪ್ರತಿಷ್ಠಿತ ಚಿತ್ರೋತ್ಸವಗಳಿಗೆ ಆಯ್ಕೆಗೊಂಡು ಕೆಲವೆಡೆ ಪ್ರಶಸ್ತಿಗಳನ್ನೂ ಪಡೆದಿದೆ.
ಉತ್ಸವ್ ಗೋನವಾರ
‘ಫೋಟೊ’ ಚಿತ್ರಕ್ಕಾಗಿ ನಾಮನಿರ್ದೇಶಿತರಾಗಿದ್ದಾರೆ. ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಗೋನವಾರದ ಉತ್ಸವ್, ಚಿತ್ರೋತ್ಸವಗಳಲ್ಲಿ ಹಲವು ಮಾದರಿಯ ಸಿನಿಮಾಗಳನ್ನು ನೋಡುತ್ತಾ, ಅವುಗಳಿಂದ ಪ್ರಭಾವಿತರಾಗಿ, ಪ್ರೇರಣೆಗೊಂಡು ‘ಫೋಟೋ’ ಚಿತ್ರ ನಿರ್ದೇಶಿಸಿದವರು. ವಿಭಿನ್ನ ಕಥಾ ಹಂದರ ಹೊಂದಿರುವ, ಅತ್ಯಂತ ಸಹಜತೆಯಿಂದ ಕೂಡಿರುವ ಈ ಚಿತ್ರ ಸಾಕಷ್ಟು ಚಿತ್ರೋತ್ಸವಗಳಿಗೆ ಆಯ್ಕೆಗೊಂಡಿತು. ಇದು ಇವರ ಮೊದಲ ಸಿನಿಮಾ. ಸದ್ಯ ಇನ್ನೊಂದು ಚಿತ್ರದ ಬರವಣಿಗೆಯಲ್ಲಿದ್ದಾರೆ.
ನರ್ತನ್
‘ಭೈರತಿ ರಣಗಲ್’ ಚಿತ್ರಕ್ಕಾಗಿ ನಾಮನಿರ್ದೇಶಿತರಾಗಿದ್ದಾರೆ. ಇವರು ಕನ್ನಡ ಚಿತ್ರರಂಗದ ಯುವ ಪ್ರತಿಭಾನ್ವಿತ ನಿರ್ದೇಶಕ,ಚಿತ್ರಸಾಹಿತಿ ಮತ್ತು ಸಂಭಾಷಣಾಕಾರ. ಪ್ರಶಾಂತ್ ನೀಲ್ ಅವರ ‘ಉಗ್ರಂ’, ಚಂದ್ರಶೇಖರ ಬಂಡಿಯಪ್ಪ ಅವರ ‘ರಥಾವರ’ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದರು. ಬಳಿಕ ‘ಮಫ್ತಿ’ ಚಿತ್ರದಿಂದ ಸ್ವಂತಂತ್ರ ನಿರ್ದೇಶಕರಾದರು. ಶ್ರೀಮುರಳಿ ನಾಯಕನಾಗಿರುವ ಈ ಚಿತ್ರದ ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು. ಶಿವರಾಜ್‌ಕುಮಾರ್ ‘ಭೈರತಿ ರಣಗಲ್’ ಎಂಬ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದೇ ಪಾತ್ರದ ಹಿನ್ನೆಲೆ ಇಟ್ಟುಕೊಂಡು ಸಿದ್ಧಗೊಂಡ ಚಿತ್ರ ‘ಭೈರತಿ ರಣಗಲ್’.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.