ADVERTISEMENT

ಪ್ರಜಾವಾಣಿ ಕ್ಲಬ್‌ಹೌಸ್‌ ‘ಆಲದ ಮರ’ದ ವೇದಿಕೆಯಲ್ಲಿ ಅಭಿಮತ: ಯುಗಳ ಗೀತೆಗಳು ಶಾಶ್ವತ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2021, 19:31 IST
Last Updated 29 ಆಗಸ್ಟ್ 2021, 19:31 IST
ಕೆ. ಕಲ್ಯಾಣ್, ವಿ.ನಾಗೇಂದ್ರ ಪ್ರಸಾದ್, ಜಯಮಾಲಾ, ಎಚ್.ಆರ್.ಸುಜಾತಾ, ಎಚ್.ಆರ್.ಸುಜಾತಾ
ಕೆ. ಕಲ್ಯಾಣ್, ವಿ.ನಾಗೇಂದ್ರ ಪ್ರಸಾದ್, ಜಯಮಾಲಾ, ಎಚ್.ಆರ್.ಸುಜಾತಾ, ಎಚ್.ಆರ್.ಸುಜಾತಾ   

ಆಲದಮರ (ಪ್ರಜಾವಾಣಿ ಕ್ಲಬ್‌ ಹೌಸ್‌): ಯುಗಯುಗಗಳೇ ಸಾಗಲಿ ಸಿನಿಮಾ ಇರುವವರೆಗೂ ಯುಗಳಗೀತೆಗಳು ಶಾಶ್ವತವಾಗಿರುತ್ತವೆ. ಅವುಗಳಿಗೆ ಅಳಿವಿಲ್ಲ...

– ಇದು ಭಾನುವಾರ ಪ್ರಜಾವಾಣಿ ಕ್ಲಬ್‌ಹೌಸ್‌ ‘ಆಲದ ಮರ’ದ ಅಡಿ ಸೇರಿದ ಚಿತ್ರ ಸಾಹಿತಿ, ಗಾಯಕರು ಮತ್ತು ಕಲಾವಿದರ ಒಕ್ಕೊರಲಿನ ಮಾತು.

‘ಸಿನಿಮಾ ಯುಗಳ ಗೀತೆಗಳ ಕಾಲ ಮುಗಿಯಿತೇ? – ಒಂದು ನಾಸ್ಟಾಲ್ಜಿಕ್‌ ನೋಟ’ ವಿಷಯದ ಕುರಿತ ಮಾತುಕತೆಯಲ್ಲಿ ಚಿತ್ರ– ಸಂಗೀತ ಕ್ಷೇತ್ರದ ಪ್ರಮುಖರು ಈ ಶೀರ್ಷಿಕೆಯ ಕುರಿತೇ ಚರ್ಚೆ ಆರಂಭಿಸಿದರು. ಯುಗಳ ಗೀತೆಗಳ ಕಾಲ ಮುಗಿಯಿತು ಎಂದು ನಿರ್ಧಾರಕ್ಕೆ ಬರಲಾಗದು ಎಂದು ಗಟ್ಟಿ ನಿಲುವು ವ್ಯಕ್ತಪಡಿಸಿದ ಚಿತ್ರಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್‌ ತಮ್ಮದೇ ಸಾಲೊಂದನ್ನು ಉಲ್ಲೇಖಿಸಿ, ‘ಏಳು ಸ್ವರವು ಮುಗಿದ ಮೇಲೂ ಕಾಡುವಂತ ನನ್ನ ನಿನ್ನ ಯುಗಳಗೀತೆ ಮುಗಿಯೋದಿಲ್ಲ...

ADVERTISEMENT

ಎಂದು ಹಾಡೇ ಬರೆದಿದ್ದೇನೆ. ಅಭಿವ್ಯಕ್ತಿ ಬೇರೆ ಆಗಬಹುದು. ಆದರೆ ಮುಗಿದೇ ಹೋಯಿತು ಎನ್ನಲಾಗದು. ನಾಯಕ ನಟನ ವೈಭವೀಕರಣ ಬಂದ ಮೇಲೆ ಇದು ಸ್ವಲ್ಪ ಬದಿಗೆ ಸರಿದಿದೆ ಎನ್ನಬಹುದು’ ಎಂದರು.

ಈ ಮಾತಿಗೆ ಸಹಮತ ವ್ಯಕ್ತಪಡಿಸಿದವರುಇನ್ನೊಬ್ಬ ಚಿತ್ರಸಾಹಿತಿ ಹಾಗೂ ಸಂಗೀತ ನಿರ್ದೇಶಕ ಕೆ.ಕಲ್ಯಾಣ್.

‘ಸೋಲೋ ಹಾಡುಗಳಲ್ಲೂ ಯುಗಳ ಗೀತೆಯ ಭಾವ ಇದೆ. ಪ್ರಣಯಭರಿತ ಗೀತೆಗಳು ಇಲ್ಲದೇ ಹೋದರೆ ಚಿತ್ರರಂಗ ದೀರ್ಘಕಾಲ ಉಳಿಯದು’ ಎಂದು ಕಲ್ಯಾಣ್‌ ವಿಶ್ಲೇಷಿಸಿದರು.

ನಟಿ, ನಿರ್ಮಾಪಕಿ, ರಾಜಕಾರಣಿ ಜಯಮಾಲಾ ಮಾತನಾಡಿ, ‘ಮನುಷ್ಯ ಬದುಕಿರುವಷ್ಟು ಕಾಲ ಚಿತ್ರಗಳಲ್ಲಿ ಯುಗಳ ಗೀತೆ ಇದ್ದೇ ಇರುತ್ತದೆ. ಏಕೆಂದರೆ ನಮ್ಮ ಸಿನಿಮಾ ಸಂಸ್ಕೃತಿ ಅಂಥದ್ದು. ಯುಗಳ ಗೀತೆಗಳೆಂದರೆ ಅವು ನೆನಪುಗಳ ಸರಮಾಲೆಯನ್ನೇ ಹೊತ್ತು ತರುತ್ತವೆ. ಆದರೆ, ಪ್ರತಿ 10 ವರ್ಷಗಳಿಗೊಮ್ಮೆ ಸಾಹಿತ್ಯ, ತಂತ್ರಜ್ಞಾನ, ಅಭಿವ್ಯಕ್ತಿಯ ಟ್ರೆಂಡ್‌ ಬದಲಾಗುತ್ತದೆ’ ಎಂದರು.

ಹಾಡುಗಳ ನೆನಪಿನ ಓಘದಲ್ಲಿ ಬರಿಯ ಮಾತಷ್ಟೇ ಉಳಿಯದಂತೆ ಮಾಡಿದವರು ಗಾಯಕಿ ಎಚ್‌.ಜಿ. ಚೈತ್ರಾ ಅವರು. ಬೆಳ್ಳಿ ಮೋಡ ಚಿತ್ರದ ದ.ರಾ.ಬೇಂದ್ರೆ ಅವರ ರಚನೆಯ ‘ಮೂಡಲ ಮನೆಯ ಮುತ್ತಿನ ನೀರಿನ ಎರಕವಾ ಹೊಯ್ದ...’ ಹಾಡಿನಿಂದ ಆರಂಭ ಮಾಡಿದರು. ಚರ್ಚೆ ಏರುಗತಿ ಪಡೆಯುತ್ತಿದ್ದಂತೆಯೇ ‘ಬಿಡು ಬಿಡು ಕದ್ದು ಕದ್ದು ನೋಡೋದನ್ನ...’ ಎನ್ನುತ್ತಾ ಸಂಗೀತದ ಸಿಂಚನ ಹರಿಸಿದರು. ಮಾತಿನ ಮಂಟಪಕ್ಕೆ ತೆರೆ ಎಳೆದದ್ದೂ ಅವರದ್ದೇ ಹಾಡು.

ಈ ಮಧ್ಯೆ ಎಚ್.ಆರ್.ಸುಜಾತಾ ಅವರು, ಹಂಸಲೇಖ– ರವಿಚಂದ್ರನ್‌ ಜೋಡಿ ಯುಗಳಗೀತೆಯ ಸಾಹಿತ್ಯ ಹಾಗೂ ಪ್ರಸ್ತುತಿಯ ಶೈಲಿಯನ್ನೇ ಬದಲಾಯಿಸಿದ್ದನ್ನು ನೆನಪಿಸಿದರು. ಯುಗಳ ಗೀತೆಗೆ ಪೋಲಿ ಶೈಲಿಯಲ್ಲೂ ಹೊಸ ಸ್ಪರ್ಶ ಕೊಟ್ಟದ್ದೇ ಈ ಜೋಡಿ ಎಂಬ ‘ಶ್ಲಾಘನೆ’ಯೂ ವ್ಯಕ್ತವಾಯಿತು.

ಬೆಂಗಳೂರು ಆಕಾಶವಾಣಿಯ ಹಿರಿಯ ಉದ್ಘೋಷಕಿ ಬಿ.ಕೆ. ಸುಮತಿ ಅವರು, ‘ಚಿತ್ರಗೀತೆಗಳು ಜನಜೀವನದ ಅವಿಭಾಜ್ಯ ಅಂಗ. ಇಂದಿಗೂ ಸಾಕಷ್ಟು ಕೇಳುಗರು ಯುಗಳಗೀತೆಗಳನ್ನು ಪ್ರಸಾರ ಮಾಡುವಂತೆ ಕೋರಿಕೆ ಸಲ್ಲಿಸುತ್ತಾರೆ. ಆದರೆ ಇಂದು ಕೇಳುವ ವೇದಿಕೆಗಳು ನೂರಾರು ಇವೆ. ಹಾಗಾಗಿ ಕೇಳುಗರೂ ಚದುರಿ ಹೋಗಿದ್ದಾರೆ’ ಎಂದರು.

ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (ಆಯಿಷ್) ನಿರ್ದೇಶಕಿ ಡಾ.ಎಂ.ಪುಷ್ಪಾವತಿ ಅವರು ಮಾತನಾಡಿ, ‘ಆಟಿಸಂನಿಂದ ಬಳಲುತ್ತಿರುವ ಮಕ್ಕಳಿಗೆ ಸಂಗೀತ ಥೆರಪಿಯೇ ಪರಿಣಾಮಕಾರಿ. ಹಾಗಾಗಿ ಸಂಗೀತದ ಮಹತ್ವವನ್ನು ಅಲ್ಲಗಳೆಯಲಾಗದು’ ಎಂದು ಹೇಳಿದರು.

‘ಇತ್ತೀಚೆಗೆ ಕೇಳುಗರ ಆಸಕ್ತಿ ಮತ್ತು ಅಭಿರುಚಿ ಬದಲಾಗುತ್ತಿದೆ. ಸಿನಿಮಾಗಳು ಹೀರೋ ಕೇಂದ್ರಿತ ಆಗಿರುವುದರಿಂದ ಯುಗಳಗೀತೆಗಳಿಗೆ ಮಹತ್ವ ಕಡಿಮೆ ಆಗುತ್ತಿದೆ. ಹೀಗಾಗಿ ಹಳೆಯ ಯುಗಳ ಗೀತೆಗಳೇ ನಮಗೆ ಆಪ್ತವೆನಿಸುತ್ತವೆ’ ಎಂದು ಕಿನ್ನರಿ ಆಡಿಯೊ ಸಂಸ್ಥೆ ಮಾಲೀಕ ಪದ್ಮಪಾಣಿ ಜೋಡಿದಾರ್‌ ಹೇಳಿದರು.

ಕವಯಿತ್ರಿ ನಂದಿನಿ ಹೆದ್ದುರ್ಗ ಮಾತನಾಡಿ, ‘ನಾಸ್ಟಲ್ಜಿಕ್‌ ಎನ್ನುವ ಎಲ್ಲವೂ ಸೊಗಸೇ. ಬಾಲ್ಯದಲ್ಲಿ ಹೆಚ್ಚು ಕೇಳಿದ ವಿಷಯಗಳು ಮನಸ್ಸಿನಲ್ಲಿ ಗಾಢವಾಗಿ ಉಳಿದುಬಿಡುತ್ತವೆ. ಮುಂದೆ ಬೆಳೆದಾಗ ಹಳೆಯದೇ ಸೊಗಸಾಗಿ ಕಾಣಿಸುತ್ತವೆ. ಇದು ಸಹಜ’ ಎಂದರು.

ಗಾಯಕಿ ಶ್ರೀದೇವಿ, ಕ್ಯಾಲಿಫೋರ್ನಿಯಾದಿಂದ ನೀತಾ ಆರ್.ವಿ., ರವಿಶಂಕರ್ ಪ್ರಭಾಕರ್, ಎ.ಜೆ.ರವಿಚಂದ್ರ, ಕೃಷ್ಣಪ್ರಿಯೇ,ಚೈತ್ರಾ ಮಣಿ ಸಹಿತ ಹಲವು ಕೇಳುಗರು ಅಭಿಪ್ರಾಯಗಳನ್ನು ಹಂಚಿಕೊಂಡರು. ಪ್ರಜಾವಾಣಿ ಸಹ ಸಂಪಾದಕ ಬಿ.ಎಂ. ಹನೀಫ್ ಸಂವಾದ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.