ADVERTISEMENT

‘ಜಂಟಲ್‌ಮನ್‌’ ಗೇಮ್

ಪ್ರಜಾವಾಣಿ ವಿಶೇಷ
Published 6 ಫೆಬ್ರುವರಿ 2020, 19:30 IST
Last Updated 6 ಫೆಬ್ರುವರಿ 2020, 19:30 IST
ಪ್ರಜ್ವಲ್‌ ದೇವರಾಜ್
ಪ್ರಜ್ವಲ್‌ ದೇವರಾಜ್   

‘ಸಿಕ್ಸರ್’ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪರಿಚಿತರಾದ ಪ್ರಜ್ವಲ್‌ ದೇವರಾಜ್‌ ಅವರ ಬಣ್ಣದ ಬದುಕಿಗೀಗ ಹದಿಮೂರು ವರ್ಷ. ಅವರೀಗ ಸವಾಲಿನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಮೊದಲ ಬಾರಿಗೆ ವಿಭಿನ್ನ ಪಾತ್ರದಲ್ಲಿ ನಟಿಸಿರುವ ‘ಜಂಟಲ್‌ಮನ್‌’ ಚಿತ್ರ ಇದೇ ಶುಕ್ರವಾರ ತೆರೆ ಕಾಣುತ್ತಿದೆ. ‘ಸ್ಲೀಪಿಂಗ್‌ ಬ್ಯೂಟಿ ಸಿಂಡ್ರೋಮ್’ ಮತ್ತು ಮಾನವ ಕಳ್ಳಸಾಗಣೆ ಸುತ್ತ ಇದರ ಕಥೆ ಹೆಣೆಯಲಾಗಿದೆ.

ಅಪ್ಪ ದೇವರಾಜ್‌ ನಟಿಸಿದ ‘ಹುಲಿಯಾ’ ಚಿತ್ರದಂತಹ ಪಾತ್ರದಲ್ಲಿ ನಟಿಸಬೇಕೆಂಬ ಆಸೆ ಹೊತ್ತಿರುವ ಅವರೊಟ್ಟಿಗೆ ನಡೆಸಿದ ಮಾತುಕತೆಯ ಅಕ್ಷರರೂಪ ಇಲ್ಲಿದೆ.

‘ಜಂಟಲ್‌ಮನ್‌’ ಚಿತ್ರದ ಪಾತ್ರ ನಿರ್ವಹಣೆಗೆ ತಯಾರಿ ಹೇಗಿತ್ತು?

ADVERTISEMENT

ಈ ಪಾತ್ರಕ್ಕಾಗಿ ನಾನು ಸಂಶೋಧನೆಗೆ ಇಳಿಯಬೇಕಾಯಿತು. ಇದು ನಿಜಜೀವನಕ್ಕೂ ಹತ್ತಿರವಾದ ಪಾತ್ರ. ಇಂತಹ ಪಾತ್ರ ನಿರ್ವಹಿಸುವಾಗ ಸಿನಿಮ್ಯಾಟಿಕ್‌ ಲಿಬರ್ಟಿ ಕಡಿಮೆ. ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್‌ನಿಂದ ಬಳಲುತ್ತಿರುವವರ ಬಗ್ಗೆ ಸಂಶೋಧನೆ ಮಾಡಿದೆ. ಅವರೊಟ್ಟಿಗೆ ಚರ್ಚಿಸಿದೆ. ಆಗ ಅವರ ವರ್ತನೆ, ಸಾಮರ್ಥ್ಯದ ಅರಿವಾಯಿತು. ಅವರಿಗೆ ಕೋಪ ಹೆಚ್ಚಿರುತ್ತದೆಯೋ, ಇಲ್ಲವೋ ಎನ್ನುವುದನ್ನು ಅರ್ಥಮಾಡಿಕೊಂಡೆ.

ಅವರು ದಿನದ 18 ಗಂಟೆಗಳ ಕಾಲ ಮಲಗಿರುತ್ತಾರೆ. ಹಾಗಾಗಿ, ಉಳಿದ ಅವಧಿಯಲ್ಲಿ ತುಂಬಾ ಚುರುಕಾಗಿರುತ್ತಾರೆ. ಇಡೀ ದಿನ ಕಳೆದುಕೊಂಡಿರುವುದನ್ನು ಕಡಿಮೆ ಸಮಯದಲ್ಲಿ ಮಾಡಲು ಪ್ರಯತ್ನಿಸುತ್ತಾರೆ. ಎಲ್ಲವನ್ನೂ ತ್ವರಿತವಾಗಿ ಮಾಡುತ್ತಾರೆ. ಎಚ್ಚರವಿದ್ದಾಗ ಘಟಿಸಿದ ಪ್ರತಿಯೊಂದು ಘಟನೆಯೂ ಅವರ ನೆನಪಿನಲ್ಲಿ ಉಳಿದಿರುತ್ತದೆ.

ದಿನಕ್ಕೆ ನೀವೆಷ್ಟು ಹೊತ್ತು ನಿದ್ದೆ ಮಾಡುತ್ತೀರಿ?

ಬಾಲ್ಯದಲ್ಲಿ ನನಗೆ ಕತ್ತಲು ಎಂದರೆ ಭಯವಾಗುತ್ತಿತ್ತು. ನಿದ್ದೆ ಮತ್ತು ರಾತ್ರಿ ಎಂದರೆ ಆಗುತ್ತಿರಲಿಲ್ಲ. ಈಗ ಪರವಾಗಿಲ್ಲ. ದಿನಕ್ಕೆ 6ರಿಂದ 7 ಗಂಟೆಗಳವರೆಗೆ ನಿದ್ರೆಗೆ ಜಾರುತ್ತೇನೆ.

ನೀವು ಮತ್ತು ನಿಮ್ಮ ಪತ್ನಿ ಒಟ್ಟಾಗಿ ನಟಿಸುವ ಆಸೆ ಇಲ್ಲವೇ?

ನಾನು ಮತ್ತು ಪತ್ನಿ ರಾಗಿಣಿ ಚಂದ್ರನ್ ಒಟ್ಟಾಗಿ ನಟಿಸುವ ಆಸೆಯಿದೆ. ಆ ನಿಟ್ಟಿನಲ್ಲಿ ಎರಡು ಕಥೆಗಳನ್ನೂ ಕೇಳಿದ್ದೆವು. ಆದರೆ, ಒಪ್ಪಿಗೆಯಾಗಲಿಲ್ಲ. ಒಳ್ಳೆಯ ಕಥೆ ಸಿಕ್ಕಿದರೆ ಖಂಡಿತ ನಟಿಸುತ್ತೇವೆ. ಆದರೆ, ಒತ್ತಾಯಪೂರ್ವಕವಾದ ಕಥೆಗಳಲ್ಲಿ ನಟಿಸಲು ಇಬ್ಬರಿಗೂ ಇಷ್ಟವಿಲ್ಲ. ನಮಗೋಸ್ಕರ ಕಥೆ ಬೇಡ; ಕಥೆಗೆ ನಾವಿಬ್ಬರೂ ಅಗತ್ಯವಿರಬೇಕು. ಆಗಷ್ಟೇ ಸಿನಿಮಾ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.