ADVERTISEMENT

ಸಂದರ್ಶನ | ಕೊತ್ತಲವಾಡಿ ಮೇಲೆ ಭರವಸೆ ಇದೆ: ಪೃಥ್ವಿ ಅಂಬಾರ್‌ 

ವಿನಾಯಕ ಕೆ.ಎಸ್.
Published 1 ಆಗಸ್ಟ್ 2025, 1:18 IST
Last Updated 1 ಆಗಸ್ಟ್ 2025, 1:18 IST
<div class="paragraphs"><p>ಪೃಥ್ವಿ ಅಂಬಾರ್‌&nbsp;</p></div>

ಪೃಥ್ವಿ ಅಂಬಾರ್‌ 

   

ಪೃಥ್ವಿ ಅಂಬಾರ್ ನಟನೆಯ ‘ಕೊತ್ತಲವಾಡಿ’ ಸಿನಿಮಾ ಇಂದು (ಆ.1 ರಂದು) ತೆರೆ ಕಾಣುತ್ತಿದೆ. ಚಿತ್ರ ಹಾಗೂ ತಮ್ಮ ಸಿನಿ ಪಯಣ ಕುರಿತು ಅವರು ಮಾತನಾಡಿದ್ದಾರೆ.

ಪಾತ್ರದ ಬಗ್ಗೆ ಹೇಳಿ…

ADVERTISEMENT

ಹಳ್ಳಿಯಲ್ಲಿ ಸ್ವಯಂ ಸೇವಕನಂತೆ ಕೆಲಸ ಮಾಡುವ ಹುಡುಗನ ಪಾತ್ರ. ಮೋಹನ್‌ಕುಮಾರ್‌ ಪಾತ್ರದ ಹೆಸರು. ಹಳ್ಳಿಯಲ್ಲಿನ ರಾಜಕೀಯ ನಾಯಕರ ಹಿಂದೆ ಇರುವಾತ. ಅವನ ಮಾತು ಊರಲ್ಲಿ ಚೆನ್ನಾಗಿ ನಡೆಯುತ್ತಿರುತ್ತದೆ. ಹೀಗಾಗಿ ಎಲ್ಲರೂ ರಾಜಕೀಯವಾಗಿ ಅವನನ್ನು ಬಳಸಿಕೊಳ್ಳುತ್ತ ಇರುತ್ತಾರೆ.

ಮುಗ್ಧ ಪಾತ್ರಗಳಿಗೆ ಹೆಸರಾಗಿರುವ ನೀವು ರಗಡ್‌ ಆಗಿರುವ ಪಾತ್ರ ಆಯ್ದುಕೊಂಡಿರುವುದೇಕೆ?

ಇಷ್ಟು ವರ್ಷ ನಾನು ಕೋಪ ಮಾಡಿಕೊಳ್ಳಲ್ಲ, ಪಾಪದ ಪಾತ್ರ ಮಾಡುತ್ತಾನೆ ಎಂಬ ಭಾವನೆ ಇತ್ತು. ನನ್ನೊಳಗೆ ಒಬ್ಬ ಪಾಪಿ ಇದ್ದಾನೆ ಎಂಬುದನ್ನು ನಿರ್ದೇಶಕರು ಈ ಪಾತ್ರದ ಮೂಲಕ ಪರಿಚಯಿಸುತ್ತಿದ್ದಾರೆ. ನಿರ್ದೇಶಕರು ಬಹಳ ವರ್ಷದ ಸ್ನೇಹಿತರು. ಹೀಗಾಗಿ ನಾನು ಈ ಪಾತ್ರ ಮಾಡಬಲ್ಲೆ ಎನ್ನಿಸಿ ಪಾತ್ರ ನೀಡಿದ್ದಾರೆ. ಆಕ್ಷನ್‌ ಮಾಡಿದ್ದು ಕಡಿಮೆ. ಆ ರೀತಿ ಪಾತ್ರವನ್ನು ಪ್ರಯತ್ನಿಸೋಣ ಎಂದು ಮಾಡಿದ್ದು.

ಕೊತ್ತಲವಾಡಿ’ ಹಳ್ಳಿಯಲ್ಲಿನ ಹೋರಾಟದ ಕಥೆಯಾ?

ಹೌದು, ಹಳ್ಳಿಗಾಡಿನ ಕಥೆ. ಕೊತ್ತಲವಾಡಿ ಅಂದ ತಕ್ಷಣ ಎಲ್ಲ ಚಾಮರಾಜನಗರಕ್ಕೆ ಹೋಗುತ್ತಾರೆ. ಆದರೆ ಇದು ಮಂಡ್ಯ ಭಾಷೆಯಲ್ಲಿ ಚಿತ್ರೀಕರಣಗೊಂಡಿದೆ. ನಾವು ಚಿತ್ರೀಕರಣ ಮಾಡಿದ್ದು ಕೊತ್ತಲವಾಡಿಯಲ್ಲಿ. ಊರು, ಅಲ್ಲಿನ ಜನ, ಅವರ ಪ್ರೀತಿ ನೋಡಿ ಅದನ್ನೇ ಶೀರ್ಷಿಕೆಯಾಗಿಸಿಕೊಂಡೆವು. ಗ್ರಾಮೀಣ ಭಾಗದ ಕಥೆಯ ಜತೆಗೆ ಲವ್‌, ದ್ವೇಷ ಎಲ್ಲವೂ ಇದೆ. ಒಂದು ಪೂರ್ಣ ಮನರಂಜನೆ ಚಿತ್ರ. ಆಸೆ ದುರಾಸೆಯಾದಾಗ ಒಂದಷ್ಟು ಘಟನೆಗಳು ನಡೆಯುತ್ತವೆ. ಅದರಿಂದ ಹೊರಬಂದ ಕೆಲ ಪಾತ್ರಗಳು ಹೇಗೆ ಬದಲಾಗುತ್ತವೆ ಎಂಬುದೇ ಕಥೆಯ ಹೂರಣ. ನೈಜಕಥೆಯಲ್ಲ, ಆದರೆ ಕೆಲ ಘಟನೆಗಳಿಂದ ಸ್ಫೂರ್ತಿ ಪಡೆದ ಕಥೆ.

ಹೊಸ ನಾಯಕರ ಆ್ಯಕ್ಷನ್‌ ಸಿನಿಮಾಗಳನ್ನು ಜನ ಒಪ್ಪಿಕೊಳ್ಳುತ್ತಾರೆಯೇ?

ಸ್ವಲ್ಪ ಕಷ್ಟ. ಆದರೆ ನನ್ನ ಯಾವ ಸಿನಿಮಾವೂ ಇಷ್ಟು ತಲುಪಿರಲಿಲ್ಲ. ಈ ಸಿನಿಮಾ ಎಲ್ಲರಿಗೂ ಗೊತ್ತಿದೆ. ಹೀಗಾಗಿ ಒಂದು ಭರವಸೆ ಇದೆ. ಇಲ್ಲಿ ಗೋಪಾಲಕೃಷ್ಣ ದೇಶಪಾಂಡೆ ಅವರ ಪಾತ್ರ ಹೆಚ್ಚಿದೆ. ಅವರು ಪಾತ್ರದಲ್ಲಿ ಜೀವಿಸಿದ್ದಾರೆ. ನಾಯಕನ ಆ್ಯಕ್ಷನ್‌ ಎನ್ನುವುದಕ್ಕಿಂತ ಗಟ್ಟಿಯಾದ ಕಥೆ ಹೊಂದಿರುವ ಚಿತ್ರ. ಚಿತ್ರೀಕರಣ ತುಂಬ ಅಚ್ಚುಕಟ್ಟಾಗಿ ನಡೆಯಿತು. ನಿರ್ಮಾಪಕರು ಯಾರು ಎಂಬುದೇ ಗೊತ್ತಿರಲಿಲ್ಲ. ಪ್ರಚಾರ ಶುರುವಾಗುವಾಗ ಯಶ್‌ ತಾಯಿ ನಿರ್ಮಾಪಕರು ಅಂತ ಗೊತ್ತಾಗಿದ್ದು. ಇದು ಕೂಡ ಸಿನಿಮಾಕ್ಕೆ ಹೊಸ ಶಕ್ತಿ. ಹೀಗಾಗಿ ಜನ ಬರುತ್ತಾರೆಂಬ ನಿರೀಕ್ಷೆಯಲ್ಲಿದ್ದೇವೆ.

‘ದಿಯಾ’ದಿಂದ ಇಲ್ಲಿ ತನಕದ ಪಯಣ ಹೇಗಿತ್ತು?

ಚೆನ್ನಾಗಿದೆ. ಸಾಕಷ್ಟು ಹೊಸ ನಿರ್ದೇಶಕರು ನನ್ನನ್ನು ಆಯ್ಕೆ ಮಾಡಿ ಅವಕಾಶ ನೀಡುತ್ತಿದ್ದಾರೆ. ಅದೇ ಖುಷಿ. ನಟನೆ ದೃಷ್ಟಿಕೋನದಿಂದ ಬೇರೆ ಬೇರೆ ರೀತಿಯ ಪಾತ್ರಗಳು ಸಿಗುತ್ತಿವೆ. ಆದರೆ ಈ ತನಕ ಥಿಯೇಟರಿಕಲ್‌ ಹಿಟ್‌ ಸಿಕ್ಕಿಲ್ಲ. ಅದಕ್ಕೆ ಕಾಯುತ್ತಿರುವೆ.

ನಿಮ್ಮ ಮುಂದಿನ ಸಿನಿಮಾಗಳು...

ಚೌಕಿದಾರ್‌ ಸಿನಿಮಾ ಬಿಡುಗಡೆಗೆ ಸಿದ್ಧವಿದೆ. ನಾಗತಿಹಳ್ಳಿ ಚಂದ್ರಶೇಖರ ನಿರ್ದೇಶನದ ಅಮೆರಿಕಾ ಅಮೆರಿಕಾ-2 ಚಿತ್ರ ಕೂಡ ರೆಡಿಯಾಗಿದೆ. ‘ದಿಯಾ ನಿರ್ದೇಶಕರ ಜತೆ ಒಂದು ಸಿನಿಮಾ ಮಾಡುತ್ತಿರುವೆ.

ತುಳು ಸಿನಿಮಾ ನಿರ್ದೇಶನ ಮಾಡುತ್ತಿದ್ದೀರಂತೆ?

ಹೌದು, ಈಗಾಗಲೇ ಸಿನಿಮಾ ಘೋಷಿಸಿದ್ದೇವೆ. ಆದರೆ ಶೀರ್ಷಿಕೆ ಅನಾವರಣವಾಗಿಲ್ಲ. ಬರವಣಿಗೆ ನಡೆಯುತ್ತಿದೆ. ಕನ್ನಡದಲ್ಲಿಯೂ ಈ ಸಿನಿಮಾ ಬಿಡುಗಡೆ ಮಾಡುವ ಪ್ಲಾನ್‌ ಇದೆ. ಇದರಲ್ಲಿ ನಟನೆ ಕೂಡ ಮಾಡುತ್ತಿರುವೆ. ಈ ಸಿನಿಮಾದಿಂದ ಒಂದು ತಂಡ ರಚಿಸಿಕೊಂಡು ಮುಂದಿನ ದಿನಗಳಲ್ಲಿ ಕನ್ನಡದಲ್ಲಿಯೂ ನಿರ್ದೆಶನ ಮಾಡುವ ಇರಾದೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.