ADVERTISEMENT

‘ಅಂದೊಂದಿತ್ತು ಕಾಲ’ ಚಿತ್ರೀಕರಣಕ್ಕೆ ಪುನೀತ್‌ ಕ್ಲ್ಯಾಪ್‌

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2021, 11:38 IST
Last Updated 15 ಫೆಬ್ರುವರಿ 2021, 11:38 IST
ಹೊಸ ಚಿತ್ರ ಅಂದೊಂದಿತ್ತು ಕಾಲ
ಹೊಸ ಚಿತ್ರ ಅಂದೊಂದಿತ್ತು ಕಾಲ   

ಬೆಂಗಳೂರು: ‘ನಮ್ಮ ಬಸವ’ ಚಿತ್ರದಲ್ಲಿ ‘ಅಂದೊಂದಿತ್ತು ಕಾಲ’ಕ್ಕೆ ಹೆಜ್ಜೆ ಹಾಕಿದ್ದ ನಟ ಪುನೀತ್‌ ರಾಜ್‌ಕುಮಾರ್‌ ಸೋಮವಾರ, ಅಣ್ಣ ರಾಘವೇಂದ್ರ ರಾಜ್‌ಕುಮಾರ್‌ ಅವರ ಹಿರಿಯ ಪುತ್ರ ನಟ ವಿನಯ್‌ ರಾಜ್‌ಕುಮಾರ್‌ ಅವರ ಹೊಸ ಚಿತ್ರ ‘ಅಂದೊಂದಿತ್ತು ಕಾಲ’ಕ್ಕೆ ಕ್ಲ್ಯಾಪ್‌ ಮಾಡುವ ಮುಖಾಂತರ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದಾರೆ.

ನಾಗರಬಾವಿಯ ವಿನಾಯಕ ವೆಂಕಟೇಶ್ವರ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಕಾರ್ಯಕ್ರಮ ನಡೆಯಿತು. ರಾಘವೇಂದ್ರ ರಾಜ್‌ಕುಮಾರ್‌, ನಿರ್ದೇಶಕ ಪ್ರೇಮ್‌ ಸೇರಿದಂತೆ ಗಣ್ಯರು ಹಾಜರಿದ್ದರು. ಅದಿತಿ ಪ್ರಭುದೇವ ಹಾಗೂ ಕಿರುತೆರೆಯಿಂದ ಚಂದನವನಕ್ಕೆ ಹೆಜ್ಜೆ ಇಡುತ್ತಿರುವ ಗಟ್ಟಿಮೇಳ ಧಾರವಾಹಿ ಖ್ಯಾತಿಯ ನಿಶಾ ತಾರಾಗಣದ ಈ ಚಿತ್ರವು ಈ ವರ್ಷವೇ ತೆರೆಯ ಮೇಲೆ ಬರಲು ಸಜ್ಜಾಗಿದೆ.

ಕೀರ್ತಿ ಅವರು ನಿರ್ದೇಶಕರಾಗಿ ರಚಿಸಿರುವ ಈ ಚಿತ್ರವನ್ನು ಭುವನ್‌, ಲೋಕೇಶ್‌.ಎನ್‌, ಶಿವಣ್ಣ ಎಸ್‌ ನಿರ್ಮಿಸಿದ್ದಾರೆ. ಅಭಿಷೇಕ್‌ ಜಿ.ಕಾಸರಗೋಡು ಅವರ ಛಾಯಾಗ್ರಹಣವಿದ್ದು, ರಾಘವೇಂದ್ರ ವಿ. ಸಂಗೀತ ನೀಡಿದ್ದಾರೆ.

ADVERTISEMENT

ತಾತನ ಕಾಲನೇ ಬೆಸ್ಟ್‌ ಕಾಲ

ಚಿತ್ರದಲ್ಲಿನ ಪಾತ್ರದ ಕುರಿತು ಮಾತನಾಡಿದ ವಿನಯ್‌ ರಾಜ್‌ಕುಮಾರ್‌, ‘ಚಿತ್ರದಲ್ಲಿ ನಿರ್ದೇಶಕನ ಪಾತ್ರ ನನ್ನದು. 1990ರಿಂದ 2005ರವರೆಗೆ ನಡೆಯುವ ಚಿತ್ರಕಥೆ ಇದು. ಚಿತ್ರಕಥೆ ನನಗೆ ಬಹಳ ಇಷ್ಟವಾಯಿತು. ಹೀಗಾಗಿ ಒಪ್ಪಿಕೊಂಡೆ. ಚಿತ್ರವು ಹಿಂದಿನ ಕಾಲದ ನೆನಪುಗಳನ್ನು ಮೆಲುಕು ಹಾಕುತ್ತದೆ. ಅಂದು ಶಾಲೆಗಳು ಹೇಗಿತ್ತು, ಮೊಬೈಲ್‌ ಇರಲಿಲ್ಲ, ಸಂಬಂಧಗಳು ಹೇಗಿತ್ತು, ಮೊಬೈಲ್‌ ಹಾಗೂ ತಂತ್ರಜ್ಞಾನ ಬಂದ ಮೇಲೆ ಸಂಬಂಧಗಳಲ್ಲಿ ಆದ ಬದಲಾವಣೆ ಮುಂತಾದ ವಿಷಯಗಳು ಚಿತ್ರದಲ್ಲಿದೆ. ಯಾವುದೇ ಕಾಲ ಬಂದರೂ, ತಾತನ ಕಾಲವೇ ಬೆಸ್ಟ್‌’ ಎಂದರು.

‘ಕಳೆದ ಒಂದು ವರ್ಷದಲ್ಲಿ ಯಾವುದೇ ಚಿತ್ರೀಕರಣದಲ್ಲಿ ನಾನು ಭಾಗವಹಿಸಿರಲಿಲ್ಲ. ಕಥೆ ವಿಭಿನ್ನವಾಗಿತ್ತು. ಹೀಗಾಗಿ ಫ್ರೆಶ್‌ ಮೂಡ್‌ನಲ್ಲಿ ಚಿತ್ರೀಕರಣಕ್ಕೆ ಇಳಿದಿದ್ದೇನೆ. ಚಿತ್ರದಲ್ಲಿ ಮೂರು ಲುಕ್‌ ಇದೆ. 16, 21 ಹಾಗೂ 26 ವರ್ಷದ ಯುವಕನಾಗಿ ನಾನು ಕಾಣಿಸಿಕೊಳ್ಳುತ್ತಿದ್ದು, ಇದು ನನಗೆ ಸವಾಲಾಗಿದೆ’ ಎಂದರು ವಿನಯ್‌.

ಉಪ್ಪಿ ನನ್ನ ಫೇವರೇಟ್‌ ಡೈರೆಕ್ಟರ್‌

ಚಿತ್ರದಲ್ಲಿ ನನಗೆ ನಿರ್ದೇಶಕನ ಪಾತ್ರ, ನಿಜಜೀವನದಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ನನಗೆ ಉಪೇಂದ್ರ ಅವರು ನನ್ನ ಫೇವರೇಟ್‌ ನಿರ್ದೇಶಕರು. ಮೊದಲಿನಿಂದಲೂ ಅವರು ನಟಿಸಿರುವ ಹಾಗೂ ನಿರ್ದೇಶಿಸಿರುವ ಎಲ್ಲ ಚಿತ್ರಗಳನ್ನೂ ನೋಡಿಕೊಂಡು ಬಂದಿದ್ದೇನೆ ಎಂದು ವಿನಯ್‌ ಹೇಳಿದರು.

‘ನಾನು ರಾಜ್‌ಕುಮಾರ್‌ ಅವರ ಅಭಿಮಾನಿ. ಅವರ ಕುಟುಂಬದವರ ಜೊತೆ ಮೊದಲು ತೆರೆಯ ಮೇಲೆ ಕಾಣಸಿಕೊಳ್ಳುವ ಅವಕಾಶ ದೊರೆತಿರುವುದು ಖುಷಿಯಾಗಿದೆ. ನಿಜ ಜೀವನದಲ್ಲಿ ಹಾಗೂ ಸಿನಿಮಾದಲ್ಲೂ ಇಲ್ಲಿಯವರೆಗೂ ಹೆಚ್ಚು ಮಾತನಾಡುವ ಪಾತ್ರಗಳೇ ನನಗೆ ಸಿಗುತ್ತಿದ್ದವು. ಆದರೆ ಈ ಚಿತ್ರದಲ್ಲಿ ನನ್ನ ಪಾತ್ರ ವಿಭಿನ್ನವಾಗಿದೆ. ಭಾವನೆಯೇ ಇದರಲ್ಲಿ ಪ್ರಮುಖವಾಗಿದೆ. ಮಧ್ಯಮ ವರ್ಗದ ಹುಡುಗಿಯ ಪಾತ್ರ ನನ್ನದು. ಎರಡು ಲುಕ್‌ನಲ್ಲಿ ನಾನು ಇಲ್ಲಿ ಕಾಣಿಸಿಕೊಳ್ಳಲಿದ್ದೇನೆ’ ಎನ್ನುತ್ತಾರೆ ನಟಿ ಅದಿತಿ ಪ್ರಭುದೇವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.