ADVERTISEMENT

ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಜನವರಿ 2022, 6:39 IST
Last Updated 9 ಜನವರಿ 2022, 6:39 IST
ಪುಷ್ಪ ಚಿತ್ರದ ಪೋಸ್ಟರ್
ಪುಷ್ಪ ಚಿತ್ರದ ಪೋಸ್ಟರ್   

ಅಲ್ಲು ಅರ್ಜುನ್‌ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ: ದಿ ರೈಸ್ ಗಲ್ಲಾ ಪೆಟ್ಟಿಗೆಯಲ್ಲಿ ಸಖತ್ ಸದ್ದು ಮಾಡುತ್ತಿದೆ. ದಿನಗಳು ಕಳೆದಂತೆ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ. ಈ ಚಿತ್ರಕ್ಕೆ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭಾರತದಲ್ಲಿ ಪುಷ್ಪಾ ಹಿಂದಿ ಅವತರಣಿಕೆಯ ಕಲೆಕ್ಷನ್ ಈಗ ₹ 75 ಕೋಟಿ ಗಡಿ ದಾಟಿದೆ. ಚಿತ್ರ ಬಿಡುಗಡೆಯಾದ ಮೂರು ವಾರಗಳ ನಂತರವೂ ಚಿತ್ರಮಂದಿರಗಳಲ್ಲಿ ತನ್ನ ಓಟವನ್ನು ಮುಂದುವರಿಸಿದೆ.

ಸುಕುಮಾರ್ ನಿರ್ದೇಶನದ ಪುಷ್ಪ ಸಿನಿಮಾ ಡಿ. 17 ರಂದು ಬಿಡುಗಡೆಯಾಯಿತು. ಈ ಚಿತ್ರವು ಕ್ರಿಸ್‌ಮಸ್ ಸಮಯದಲ್ಲೇ ಬಿಡುಗಡೆಯಾಗಬೇಕಿತ್ತು. ಆದರೆ, ಬಾಕ್ಸ್ ಆಫೀಸ್‌ನಲ್ಲಿ ರಣವೀರ್ ಸಿಂಗ್ ಅಭಿನಯದ '83' ಸಿನಿಮಾದೊಂದಿಗೆ ಘರ್ಷಣೆಯನ್ನು ತಪ್ಪಿಸಲು ಚಿತ್ರದ ಬಿಡುಗಡೆಯನ್ನು ಒಂದು ವಾರ ಮುಂದೂಡಲು ನಿರ್ಧರಿಸಲಾಗಿತ್ತು.

ಮಾರುಕಟ್ಟೆ ವಿಶ್ಲೇಷಕ ತರಣ್ ಆದರ್ಶ್ ಈ ಕುರಿತು ಟ್ವೀಟ್ ಮಾಡಿದ್ದು, ಚಿತ್ರದ ಹಿಂದಿ ಅವತರಣಿಕೆಯು ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ₹ 75 ಕೋಟಿಗೂ ಅಧಿಕ ಬಾಚಿಕೊಂಡಿದೆ ಎಂದಿದ್ದಾರೆ. ಹೊಸ ಸಿನಿಮಾಗಳ ಬಿಡುಗಡೆಯ ಪೈಪೋಟಿಯ ಹೊರತಾಗಿಯೂ ಬಾಕ್ಸ್ ಆಫೀಸ್‌ನಲ್ಲಿ ಪ್ರಾಬಲ್ಯ ಸಾಧಿಸಿರುವುದು ಪ್ರಾದೇಶಿಕ ಚಿತ್ರರಂಗಕ್ಕೆ ನಿಜಕ್ಕೂ ದೊಡ್ಡ ಸಾಧನೆ.

ADVERTISEMENT

'ಯಾವುದೇ ಹೊಸ ಸಿನಿಮಾಗಳು ಬಿಡುಗಡೆಯಾಗದಿರುವುದೇ ಪುಷ್ಪ ಸಿನಿಮಾದ ತಡೆರಹಿತ ಓಟಕ್ಕೆ ಸಹಾಯ ಮಾಡುತ್ತಿದೆ. ಮುಖ್ಯವಾಗಿ ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ನಾಲ್ಕನೇ ವಾರದಲ್ಲಿ ಒಟ್ಟು ₹ 74.44 ಕೋಟಿ ಬಾಚಿಕೊಂಡಿದೆ' ಎಂದಿದ್ದಾರೆ.

ಪುಷ್ಪ ಸಿನಿಮಾವು ಆಂಧ್ರಪ್ರದೇಶದ ಶೇಷಾಚಲಂ ಪ್ರದೇಶದಲ್ಲಿನ ರಕ್ತ ಚಂದನ ಕಳ್ಳಸಾಗಣೆದಾರರ ಜೀವನವನ್ನು ಆಧರಿಸಿದೆ. ಪುಷ್ಪ ರಾಜ್ ಪಾತ್ರದಲ್ಲಿ ಅಲ್ಲು ಅರ್ಜುನ್ ನಟಿಸಿದ್ದರೆ, ಭನ್ವರ್ ಸಿಂಗ್ ಶೇಖಾವತ್ ಆಗಿ ಫಹಾದ್ ಫಾಸಿಲ್ ಕಾಣಿಸಿಕೊಂಡಿದ್ದಾರೆ. ಶ್ರೀವಲ್ಲಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಇವರಲ್ಲದೆ ಸುನೀಲ್, ಧನಂಜಯ, ರಾವ್ ರಮೇಶ್, ಅನಸೂಯ ಭಾರಧ್ವಾಜ್ ಮತ್ತು ಅಜಯ್ ಘೋಷ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.