Pushpa–2 Reloaded
ಬೆಂಗಳೂರು: ಬ್ಲಾಕ್ ಬಸ್ಟರ್ ಪುಷ್ಪ–2 ಸಿನಿಮಾ ಬಿಡುಗಡೆಯಾಗಿ 44 ದಿನಗಳು ಕಳೆದರೂ ಚಿತ್ರಮಂದಿರಗಳಲ್ಲಿ ಇನ್ನೂ ಸದ್ದು ಮಾಡುತ್ತಿದೆ.
ಇನ್ನೊಂದು ವಿಶೇಷವೆಂದರೆ ಅಲ್ಲು ಅರ್ಜುನ್ ಅಭಿಮಾನಿಗಳಿಗಾಗಿ ಈ ಚಿತ್ರದ ರಿಲೋಡೆಡ್ ವರ್ಷನ್ ಜನವರಿ 17 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ನಿನ್ನೆ ಜನವರಿ 11 ರಂದು ಪುಷ್ಪದ ನಿರ್ದೇಶಕ ಸುಕುಮಾರ್ ಅವರ ಜನ್ಮದಿನವಿತ್ತು. ಈ ಹಿನ್ನೆಲೆಯಲ್ಲಿ ಚಿತ್ರ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀ ಮೇಕರ್ಸ್ ರಿಲೋಡೆಡ್ ವರ್ಷನ್ ಬಿಡುಗಡೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು ಈಗ ಬಿಡುಗಡೆಯಾಗಿದ್ದ ಅವತರಣಿಕೆಯಲ್ಲಿ ಇರಲಾರದ ಹೆಚ್ಚುವರಿ 20 ನಿಮಿಷದ ವಿಶೇಷ ದೃಶ್ಯಗಳನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳಬಹುದು ಎಂದು ಹೇಳಿದೆ.
ಈ ಕುರಿತು 50 ಸೆಕೆಂಡುಗಳ ಪ್ರಿವ್ಯೂವ್ ತುಣಕನ್ನು ಹಂಚಿಕೊಳ್ಳಲಾಗಿದೆ.
ಚಿತ್ರತಂಡದ ಮಾಹಿತಿ ಪ್ರಕಾರ ಇದುವರೆಗೆ ಪುಷ್ಪ–2 ಜಾಗತಿಕವಾಗಿ ₹1,881 ಕೋಟಿ ಗಳಿಕೆ ಕಂಡಿದೆ.
ಚಿತ್ರದಲ್ಲಿ ಎಎ ಜೊತೆ ಕನ್ನಡದ ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಜಗಪತಿ ಬಾಬು, ಡಾಲಿ ಧನಂಜಯ ಸೇರಿದಂತೆ ಅನೇಕ ಖ್ಯಾತನಾಮರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅಲ್ಲದೇ ನಟಿ ಶ್ರೀಲೀಲಾ ಕೂಡ ಚಿತ್ರದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ಪುಷ್ಪ-1 ಚಿತ್ರವು 2021ರ ಡಿಸೆಂಬರ್‌ನಲ್ಲಿ ತೆರೆಕಂಡಿತ್ತು. ಈ ಸಿನಿಮಾದ ಯಶಸ್ಸಿನಿಂದಾಗಿ ನಟ ಅಲ್ಲು ಅರ್ಜುನ್ ಅವರ ಖ್ಯಾತಿಯೂ ಮತ್ತಷ್ಟು ಹೆಚ್ಚಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.