ಇಂದು(ಅ.3) ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್ ಜನ್ಮದಿನ. ಇದೇ ಸಂದರ್ಭದಲ್ಲಿ ಅವರು ನಟಿಸಿರುವ ಜಡೇಶ್ ಕೆ.ಹಂಪಿ ನಿರ್ದೇಶನದ ‘ಲ್ಯಾಂಡ್ ಲಾರ್ಡ್’ ಸಿನಿಮಾದ ಟೀಸರ್, ಫಸ್ಟ್‌ಲುಕ್ ಬಿಡುಗಡೆಯಾಗಲಿದೆ. ಜೊತೆಗೆ ಝೈದ್ ಖಾನ್ ಜೊತೆಗಿನ ‘ಕಲ್ಟ್’ ಸಿನಿಮಾದಲ್ಲಿ ರಚಿತಾ ರಾಮ್ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದೂ ರಿವೀಲ್ ಆಗಲಿದೆ.
2013ರಲ್ಲಿ ತೆರೆಕಂಡ ‘ಬುಲ್ ಬುಲ್’ ಸಿನಿಮಾದ ಮೂಲಕ ನಾಯಕಿಯಾಗಿ ಚಂದನವನದಲ್ಲಿ ಹೆಜ್ಜೆ ಇಟ್ಟ ನಟಿ ರಚಿತಾ ರಾಮ್ ಸಿನಿ ಗ್ರಾಫ್ ಇತ್ತೀಚೆಗೆ ತೆರೆಕಂಡ ತಮಿಳಿನ ‘ಕೂಲಿ’ ಸಿನಿಮಾ ಬಳಿಕ ಬದಲಾಗಿದೆ. ‘ಡಿಂಪಲ್ ಕ್ವೀನ್ ನೋಡಿದಷ್ಟು ಸಿಂಪಲ್ ಅಲ್ಲ’ ಎನ್ನುವಂಥ ಭಿನ್ನವಾದ ಪಾತ್ರಗಳಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಜಡೇಶ್ ಕೆ.ಹಂಪಿ ನಿರ್ದೇಶನದ, ‘ದುನಿಯಾ ವಿಜಯ್’ ನಟನೆಯ ‘ಲ್ಯಾಂಡ್ ಲಾರ್ಡ್’ನಲ್ಲಿ 18 ವರ್ಷದ ಮಗಳಿರುವ ತಾಯಿಯಾಗಿ ರಚಿತಾ ಕಾಣಿಸಿಕೊಳ್ಳುತ್ತಿದ್ದು, ತಮ್ಮ ಈ ಹೊಸ ಹೆಜ್ಜೆಯ ಬಗ್ಗೆ ‘ಸಿನಿಮಾ ರಂಜನೆ’ ಜೊತೆಗೆ ಮಾತಿಗೆ ಸಿಕ್ಕಾಗ...
‘ಕಳೆದ ನಾಲ್ಕು ವರ್ಷಗಳಿಂದ ಭಿನ್ನವಾದ ಪಾತ್ರಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಯೋಚನೆಯಲ್ಲಿದ್ದೆ. ‘ಆಯುಷ್ಮಾನ್‌ಭವ’ ಸಿನಿಮಾದಲ್ಲಿ ಹೊಸ ಪಾತ್ರದ ಮೂಲಕ ಜನರಿಗೆ ಮನರಂಜನೆ ನೀಡಿದ್ದೆ. ಈ ಪಾತ್ರ ನನಗೆ ಬ್ರೇಕ್ ನೀಡಿತ್ತು. ಅದಕ್ಕೂ ಮುನ್ನ ನನ್ನ ಪಾತ್ರಗಳಲ್ಲಿ ಏಕತಾನತೆ ಇತ್ತು. ಕ್ಯೂಟ್ ಆಗಿರುವ ನಾಯಕಿ, ಮೂರು ಹಾಡುಗಳಿಗೆ ಸೀಮಿತವಾಗಿತ್ತು. ನಟನೆಯಲ್ಲಿ ನನ್ನ ಸಾಮರ್ಥ್ಯವನ್ನು ಪ್ರದರ್ಶಿಸುವ ಅವಕಾಶ ಸಿಕ್ಕಿರಲಿಲ್ಲ. ಆವಾಗಿನಿಂದ ಪಾತ್ರಗಳ ಮೇಲೆ ಪ್ರಯೋಗ ಮಾಡಬೇಕು ಎಂದೆನಿಸಿತ್ತು’ ಎಂದು ಮಾತು ಆರಂಭಿಸಿದರು ರಚಿತಾ.
‘ತಮಿಳಿನ ‘ಕೂಲಿ’ ಸಿನಿಮಾ ಒಪ್ಪಿಕೊಂಡ ಸಂದರ್ಭದಲ್ಲೇ ‘ಲ್ಯಾಂಡ್ ಲಾರ್ಡ್’ ಚಿತ್ರವನ್ನೂ ಒಪ್ಪಿಕೊಂಡಿದ್ದೆ. ಈ ಸಿನಿಮಾದ ಕಥೆ ವಿವರಿಸುವ ಸಂದರ್ಭದಲ್ಲಿ ನನಗೆ ಮೊದಲು ತೋಚಿದ್ದು, ನನ್ನ ಪಾತ್ರ ‘ಕಾಟೇರ’ದ ಆರಂಭದಲ್ಲಿ ಬರುವ ದರ್ಶನ್ ಅವರ ಪಾತ್ರದಂತೆಯೇ ಇದೆ ಎಂದು. ನಾನು ದರ್ಶನ್ ಅವರಿಗೆ ಕರೆ ಮಾಡಿ ಹೇಳಿದ್ದೆ. ಅವರೂ ಈ ಪಾತ್ರವನ್ನು ತೆಗೆದುಕೊಳ್ಳುವಂತೆ ಹೇಳಿದರು. ‘ಕೂಲಿ’ ಸಿನಿಮಾದ ನಿರ್ದೇಶಕರಾದ ಲೋಕೇಶ್ ಕನಗರಾಜ್ ಅವರೂ ಈ ಪಾತ್ರದ ಬರವಣಿಗೆಯನ್ನು ಮೆಚ್ಚಿಕೊಂಡಿದ್ದರು. ಜನರಿಗೆ ರಚಿತಾ ರಾಮ್ ಯಾರೆಂದು ಗೊತ್ತು. ಆದರೆ ನನ್ನೊಳಗಿನ ನಟನೆಯ ಸಾಮರ್ಥ್ಯವನ್ನು ‘ಕೂಲಿ’ ತೋರಿಸಿದೆ. ‘ಲ್ಯಾಂಡ್‌ಲಾರ್ಡ್’ ಕೂಡಾ ಇದಕ್ಕೆ ಸೇರ್ಪಡೆಯಾಗಲಿದೆ. ‘ಕೂಲಿ’ ಮೂಲಕ ಒಂದು ಶಾಕ್ ನೀಡಿರುವ ನಾನು, ‘ಲ್ಯಾಂಡ್ ಲಾರ್ಡ್’ ಮೂಲಕ ಮತ್ತೊಂದು ಶಾಕ್ ನೀಡಲಿದ್ದೇನೆ’ ಎನ್ನುತ್ತಾರೆ ರಚಿತಾ ರಾಮ್.
‘ಕೂಲಿ ಸಿನಿಮಾ ರಿಲೀಸ್ ಆದ ದಿನ ಸಂಜೆಯೇ ನನಗೆ ತಮಿಳು ಚಿತ್ರರಂಗದಿಂದ ಹಲವರು ಕರೆ ಮಾಡಿದ್ದರು. ಸದ್ಯ ಪಾತ್ರಗಳ ಆಯ್ಕೆಯತ್ತ ನನ್ನ ಗಮನ ಹೆಚ್ಚಿದೆ. ಬಂದಿದ್ದೆಲ್ಲವನ್ನೂ ಒಪ್ಪಿಕೊಳ್ಳುತ್ತಿಲ್ಲ. ಹೊಸ ತಂಡವಾದರೂ ಪರವಾಗಿಲ್ಲ ಪ್ರಯೋಗಾತ್ಮಕವಾಗಿರುವ ಪಾತ್ರಗಳಿಗೆ ಎದುರುನೋಡುತ್ತಿದ್ದೇನೆ. 50 ವರ್ಷ ವಯಸ್ಸಿನ ಪಾತ್ರವೋ, ಯುವತಿಯೋ ಎನ್ನುವುದನ್ನು ನೋಡದೆ ಕೇವಲ ಸಿನಿಮಾದ ವಿಷಯ ಹಾಗೂ ಪಾತ್ರದ ಬರವಣಿಗೆ ಗಮನಿಸಲಿದ್ದೇನೆ. ಡಿಂಪಲ್ ಕ್ವೀನ್ ಎನ್ನುವುದನ್ನು ಕೊಂಚ ಬದಿಗಿಟ್ಟು ಪಾತ್ರಗಳನ್ನಷ್ಟೇ ನೋಡಲಿದ್ದೇನೆ. ಸವಾಲಿನ ಪಾತ್ರಗಳು ಬಂದಾಗ ಅವುಗಳನ್ನು ನಿಭಾಯಿಸುವುದರಲ್ಲಿ ಒಂದು ಖುಷಿ ಇರುತ್ತದೆ’ ಎಂದರು ರಚಿತಾ.
‘ಲ್ಯಾಂಡ್ ಲಾರ್ಡ್‌ನಲ್ಲಿ 18 ವರ್ಷ ವಯಸ್ಸಿನ ಮಗಳಿರುವ ತಾಯಿಯ ಪಾತ್ರವನ್ನು ಮಾಡುತ್ತಿದ್ದೇನೆ. ಒಂದು ಸಣ್ಣ ಫೈಟ್ ಸೀಕ್ವೆನ್ಸ್ ನನಗೆ ಈ ಸಿನಿಮಾದಲ್ಲಿದೆ. ಜಡೇಶ್ ಅವರ ಬರವಣಿಗೆ, ಯೋಚನೆಗಳು ಗಟ್ಟಿಯಾಗಿವೆ. ಮಣ್ಣಿನ ಕಥೆಯಿರುವ ಇವರ ಕಥೆಗಳು ಇಂದಿನ ಪೀಳಿಗೆಗೆ ಸಂಸ್ಕೃತಿ, ಆಚಾರ ವಿಚಾರಗಳನ್ನು ಪಾಠ ಮಾಡುತ್ತವೆ. ಭರವಸೆಯ ನಿರ್ದೇಶಕರಾಗಿ ನನಗೆ ಅವರು ಕಾಣಿಸುತ್ತಾರೆ’ ಎಂದರು ರಚಿತಾ ರಾಮ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.