ADVERTISEMENT

ಕೆರಿಯರ್‌ ಬದಲಿಸುವ ಆಲೋಚನೆಯಲ್ಲಿ ರಾಧಿಕಾ ಆಪ್ಟೆ: ರೆಸ್ಟೊರೆಂಟ್ ತೆರೆಯಲು ಚಿಂತನೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2020, 7:58 IST
Last Updated 9 ಜೂನ್ 2020, 7:58 IST
ರಾಧಿಕಾ ಆಪ್ಟೆ
ರಾಧಿಕಾ ಆಪ್ಟೆ   

‘ಅಂಧಾದುನ್’ ಸಿನಿಮಾ ಎಂದಾಗ ನಟಿ ರಾಧಿಕಾ ಆಪ್ಟೆ ಮುಖ ಕಣ್ಮುಂದೆ ಬರುತ್ತದೆ. ‘ಪ್ಯಾಡ್‌ಮ್ಯಾನ್’‌, ‘ಪಾರ್ಚ್ಡ್’, ‘ಬದ್ಲಾಪುರ್‌’, ‘ಲಸ್ಟ್‌ ಸ್ಟೋರಿಸ್’‌ನಲ್ಲಿ ಅವರ ನಟನೆಯನ್ನು ಮೆಚ್ಚದವರೇ ಇಲ್ಲ. ಅವರು ಸಿನಿಮಾ ರಂಗದಲ್ಲಿ ಹಾಗೂ ಅಭಿಮಾನಿಗಳಲ್ಲಿ ಭರವಸೆಯ ನಟಿ ಎಂದು ಗುರುತಿಸಿಕೊಂಡವರು.

ಇಷ್ಟೆಲ್ಲ ಹೆಸರುಗಳಿಸಿರುವ ರಾಧಿಕಾ, ಈಚೆಗಿನ ಒಂದು ಸಂದರ್ಶನದಲ್ಲಿ ‘ಲಾಕ್‌ಡೌನ್‌ ನಂತರ ಕೆರಿಯರ್‌ ಬದಲಾಯಿಸಬೇಕು ಎಂದು ಅಂದುಕೊಂಡಿದ್ದೇನೆ. ಬಹುಶಃ ಸ್ವಂತ ರೆಸ್ಟೊರೆಂಟ್‌ ‌ಆರಂಭಿಸಬಹುದು‘ ಎಂದು ಹೇಳಿಕೊಂಡಿದ್ದರು. ಆದರೆ ಈ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ರಾಧಿಕಾ ಅವರ ಈ ಮಾತುಗಳು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿವೆ. ಜತೆಗೆ ಹೆಚ್ಚಿನ ಮಾಹಿತಿಗಾಗಿ ಕಾಯುವಂತೆ ಮಾಡಿವೆ.

ಕೈತುಂಬಾ ಸಿನಿಮಾಗಳು..

ADVERTISEMENT

ಸದ್ಯ ಹಿಂದಿ, ಇಂಗ್ಲಿಷ್‌ ಸಿನಿಮಾಗಳು ರಾಧಿಕಾ ಕೈಯಲ್ಲಿವೆ. ಅನೇಕ ನೆಟ್‌ಫ್ಲಿಕ್ಸ್‌ ಸರಣಿಗಳಲ್ಲೂ ನಟಿಸುತ್ತಿದ್ದಾರೆ. ಇಷ್ಟೆಲ್ಲ ಇದ್ದೂ, ಅವರು ಲಾಕ್‌ಡೌನ್‌ ತೆರವಾದ ನಂತರ ರೆಸ್ಟೊರೆಂಟ್‌ ಆರಂಭಿಸುವ ಬಗ್ಗೆ ಮಾತನಾಡಿರುವುದು, ಅಭಿಮಾನಿಗಳಲ್ಲಿ ಅವರು ನಟನೆಯಿಂದ ದೂರ ಸರಿಯಲಿದ್ದಾರೆಯೇ ಎಂಬ ಅನುಮಾನ ಹುಟ್ಟುಹಾಕಿದೆ.

ನಟ– ನಟಿಯರು ವ್ಯಾಪಾರ, ಉದ್ಯಮದಲ್ಲೂ ತೊಡಗಿಸಿಕೊಳ್ಳುವುದು ಹೊಸದೇನಲ್ಲ. ರಕುಲ್‌ ಪ್ರೀತ್‌ ಸಿಂಗ್‌ ಫಿಟ್‌ನೆಸ್‌‌ ಉದ್ಯಮ, ಸಮಂತಾ ರುತ್‌ ಪ್ರಭು ಪ್ಲೇ ಸ್ಕೂಲ್‌ ಹೊಂದಿದ್ದಾರೆ. ಹಾಗೇ ರಾಧಿಕಾ ಆಪ್ಟೆ ಕೂಡ ರೆಸ್ಟೊರೆಂಟ್‌ ಆರಂಭಕ್ಕೆ ಮುಂದಾಗಿರಬಹುದು. ಹಾಗಾಗಿ, ಅವರ ಮಾತನ್ನು ಅಭಿಮಾನಿಗಳು ಗಂಭೀರವಾಗಿಯೂ ಪರಿಗಣಿಸಿರಬಹುದು.

ಲಾಕ್‌ಡೌನ್ ಅವಧಿ ಸದುಪಯೋಗ

ಇನ್ನು ಲಾಕ್‌ಡೌನ್‌ ಅವಧಿಯನ್ನು ಚೆನ್ನಾಗಿ ಸದುಪಯೋಗ ಮಾಡಿಕೊಂಡಿದ್ದಾರಂತೆ ರಾಧಿಕಾ ಆಪ್ಟೆ. ‘ಈ ಸಮಯದಲ್ಲಿ ಕೆಲ ಕತೆಗಳನ್ನು ಬರೆದಿದ್ದೇನೆ. ಈಗ ನಾನೂ ಬರಹಗಾರ್ತಿಯಾಗಿ ಬದಲಾಗಿದ್ದೇನೆ‘ ಎಂದು ಹೇಳಿಕೊಂಡಿದ್ದಾರೆ. ‘ಎಂಟು ವರ್ಷಗಳಿಂದ ಅಭಿನಯ ಲೋಕದಲ್ಲಿ ನಾನು ಬ್ಯುಸಿಯಾಗಿದ್ದೇನೆ. ಸ್ವಲ್ಪವೂ ಬಿಡುವು ತೆಗೆದುಕೊಳ್ಳಲಾಗಿರಲಿಲ್ಲ. ಈಗ ನನಗಾಗಿ ಕೆಲ ಸಮಯ ಸಿಕ್ಕಿದೆ’ ಎಂದು ಲಾಕ್‌ಡೌನ್ ಅವಧಿಯನ್ನು ಸಮರ್ಪಕವಾಗಿ ಬಳಸಿಕೊಂಡಿರುವ ಬಗ್ಗೆ ಹೇಳಿಕೊಂಡು ಖುಷಿಪಟ್ಟಿದ್ದಾರೆ.

ಹಾಲಿವುಡ್‌ನ ‘ದಿ ವೆಡ್ಡಿಂಗ್‌ ಗೆಸ್ಟ್‌’, ತಮಿಳಿನ ‘ಧೋನಿ’, ‘ವೆಟ್ರಿ ಸೆಲ್ವನ್’‌ ಮೊದಲಾದ ಸಿನಿಮಾಗಳಲ್ಲೂ ರಾಧಿಕಾ ಆಪ್ಟೆ ನಟಿಸಿದ್ದಾರೆ.ಕಾಲಿವುಡ್‌ನಲ್ಲಿ ಅವರಿಗೆ ಭಾರಿ ಹೆಸರು ತಂದುಕೊಟ್ಟಿದ್ದು ‘ಕಬಾಲಿ’ ಸಿನಿಮಾ. ಅದರಲ್ಲಿ ಸೂಪರ್‌ಸ್ಟಾರ್‌ ರಜನಿಕಾಂತ್‌ ಪತ್ನಿಯ ಪಾತ್ರದಲ್ಲಿ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.