ಬೆಂಗಳೂರು: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕೂಲಿ ಚಿತ್ರ ಇದೇ 14ಕ್ಕೆ ಬಿಡುಗಡೆಯಾಗಲಿದ್ದು, ನೆಚ್ಚಿನ ತಲೈವಾರನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಕೂಲಿ ಚಿತ್ರಕ್ಕೆ ಸಂಬಂಧಿಸಿದಂತೆ ಪೋಸ್ಟರ್‌ಗಳು, ವಿಡಿಯೊಗಳು ಭಾರಿ ಹರಿದಾಡುತ್ತಿದ್ದು, ಕೂಲಿ ಚಿತ್ರದ ಕ್ರೇಜ್ ಹೆಚ್ಚಾಗಿದೆ.
75 ವರ್ಷದಲ್ಲಿಯೂ ರಜನಿಕಾಂತ್ ಅವರ ಸ್ಟೈಲ್, ವಿಭಿನ್ನ ಮ್ಯಾನರಿಸಂ ಅಭಿಮಾನಿಗಳಿಗೆ ರಸದೌತಣವೇ ಸರಿ. ಹೀಗಾಗಿ ಅವರನ್ನು ಬೆಳ್ಳಿ ಪರದೆ ಮೇಲೆ ನೋಡಲು ಅಭಿಮಾನಿಗಳ ಅಭಿಮಾನಕ್ಕೆ ದಿನಗಣನೆ ಶುರುವಾಗಿದೆ.
ಈ ನಡುವೆ ಮಧುರೈನ ಯುಎನ್ ಅಕ್ವಾ ಕೇರ್ - ಆರ್‌ಒ ಸಿಸ್ಟಮ್ಸ್ ಮತ್ತು ಸೇಲ್ಸ್ ಕಂಪನಿಯು ಆಗಸ್ಟ್ 14ರಂದು ಬಿಡುಗಡೆಯಾಗಲಿರುವ ಕೂಲಿ ಸಿನಿಮಾ ವೀಕ್ಷಣೆ ಸಲುವಾಗಿ ಆ ದಿನ ತನ್ನ ಎಲ್ಲಾ ಉದ್ಯೋಗಿಗಳಿಗೆ ರಜೆ ನೀಡಿ, ಸಿನಿಮಾ ವೀಕ್ಷಿಸಲು ಅನುವು ಮಾಡಿಕೊಟ್ಟಿದೆ. ಜತೆಗೆ ಉಚಿತ ಟಿಕೆಟ್‌ಗಳನ್ನು ಒದಗಿಸಲು ಮುಂದಾಗಿದೆ.
ರಜನಿಕಾಂತ್ ಅವರ 50 ವರ್ಷಗಳ ಸಿನಿ ಪ್ರಯಣವನ್ನೂ ಶ್ಲಾಘಿಸಿ, ಅವರ ಹೆಸರಿನಲ್ಲಿ ಅನಾಥರಿಗೆ ಊಟ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಂಪನಿ ತಿಳಿಸಿದೆ.
ಪ್ರತಿ ಸಿನಿಮಾದಲ್ಲಿಯೂ ಹೊಸತೇನೋ ಹೊತ್ತುತರುವ ಲೋಕೇಶ್ ಕನಗರಾಜ್ ನಿರ್ದೇಶನದ ‘ಕೂಲಿ’ ಚಿತ್ರದ ಟ್ರೇಲರ್ ಬಿಡುಗಡೆಗೊಂಡಿತ್ತು. ರಜನಿಕಾಂತ್ ನಟನೆಯ ಚಿತ್ರ ಆ್ಯಕ್ಷನ್ ಜತೆಗೆ ಭರಪೂರ ಮನರಂಜನೆ ಹೊಂದಿದೆ ಎಂಬುದು ಟ್ರೇಲರ್‌ನಿಂದ ಮೇಲ್ನೋಟಕ್ಕೆ ಗೊತ್ತಾಗಿತ್ತು.
ಅಕ್ಕಿನೇನಿ ನಾಗಾರ್ಜುನ, ಅಮೀರ್ ಖಾನ್, ಉಪೇಂದ್ರ, ಸೋಬಿನ್ ಶಾಹಿರ್, ಶ್ರುತಿ ಹಾಸನ್, ಸತ್ಯರಾಜ್, ರಚಿತಾ ರಾಮ್ ಸೇರಿದಂತೆ ದೊಡ್ಡ ತಾರಾಬಳಗವೇ ಕೂಲಿ ಚಿತ್ರದಲ್ಲಿದೆ. ಲೋಕೇಶ್ ಕನಗರಾಜ್ ತಮ್ಮ ಹಿಂದಿನ ಸಿನಿಮಾಗಳಂತೆಯೇ ಇಲ್ಲಿಯೂ ಪ್ರತಿ ಪಾತ್ರಕ್ಕೂ ಒಂದು ಭಿನ್ನ ಹಾವಭಾವ ನೀಡಿದ್ದಾರೆ. ಈ ಚಿತ್ರ ರಜನಿಕಾಂತ್ ಅಭಿಮಾನಿಗಳಿಗೆ ರಸದೌತಣ ಎಂಬುದನ್ನು ಟ್ರೇಲರ್ ಹೇಳುತ್ತಿದೆ.
ನಾಗಾರ್ಜುನ ಸಖತ್ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ. ರಜನಿಕಾಂತ್, ಸತ್ಯರಾಜ್ ಗೆಳೆಯರಾಗಿದ್ದು, ಸತ್ಯರಾಜ್ ಮಗಳ ಪಾತ್ರದಲ್ಲಿ ಶ್ರುತಿ ಹಾಸನ್ ನಟಿಸಿದ್ದಾರೆ. ರಚಿತಾ ರಾಮ್ ಕೂಡ ಟ್ರೇಲರ್‌ನಲ್ಲಿ ಕಾಣಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.