ADVERTISEMENT

ರಜನಿಕಾಂತ್‌ಗೆ ಮಂಗಳಮುಖಿಯಾಗಿ ನಟಿಸುವಾಸೆ!

ಮರಾಠಿ ಸಿನಿಮಾದಲ್ಲೂ ನಟನೆಗೆ ತಲೈವ ಒಲವು

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2019, 9:18 IST
Last Updated 18 ಡಿಸೆಂಬರ್ 2019, 9:18 IST
   

‘ಸೂಪರ್‌ಸ್ಟಾರ್‌’ ರಜನಿಕಾಂತ್‌ ತಮ್ಮ ನಾಲ್ಕೂವರೆ ದಶಕದ ವೃತ್ತಿಬದುಕಿನಲ್ಲಿ 160ಕ್ಕೂ ಹೆಚ್ಚು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ಹಲವು ಪಾತ್ರಗಳಿಗೆ ಜೀವ ತುಂಬಿದ ಹೆಮ್ಮೆ ಅವರದ್ದು. ಆದರೆ, ರಜನಿಗೆ ‘ಮಂಗಳಮುಖಿ’ ಪಾತ್ರದಲ್ಲಿ ನಟಿಸುವ ಆಸೆ ಇನ್ನೂ ಈಡೇರಿಲ್ಲವಂತೆ.

ಮುಂಬೈನಲ್ಲಿ ನಡೆದ ‘ದರ್ಬಾರ್‌’ ಚಿತ್ರದ ಟ್ರೇಲರ್‌ ಬಿಡುಗಡೆ ಸಮಾರಂಭದಲ್ಲಿ ‘ತಲೈವ’ ಈ ಆಸೆಯನ್ನು ಮಾಧ್ಯಮದವರ ಮುಂದೆ ಹಂಚಿಕೊಂಡಿದ್ದಾರೆ. ನಿಮ್ಮ ಕನಸಿನ ಪಾತ್ರವೇನಾದರು ಇದೆಯೇ? ಎನ್ನುವ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ವಿವಿಧ ಪಾತ್ರಗಳಿಗೆ ಬಣ್ಣ ಹಚ್ಚಿದ ಖುಷಿಯಿದೆ. ಮನದ ಮೂಲೆಯಲ್ಲಿ ಮಂಗಳಮುಖಿಯಾಗಿ ತೆರೆಯ ಮೇಲೆ ಕಾಣಿಸಿಕೊಳ್ಳಬೇಕೆಂಬ ಆಸೆ ಜೀವಂತವಾಗಿ ಉಳಿದಿದೆ. ಆದರೆ, ಯಾವೊಬ್ಬ ನಿರ್ಮಾಪಕ ಕೂಡ ಇಲ್ಲಿಯವರೆಗೂ ಈ ಪಾತ್ರದಲ್ಲಿ ನಟಿಸುವಂತೆ ನನ್ನ ಬಳಿಗೆ ಬಂದಿಲ್ಲ. ಒಂದು ವೇಳೆ ಇಂತಹ ಅವಕಾಶ ಲಭಿಸಿದರೆ ನಾನು ಇಲ್ಲ ಎನ್ನಲಾರೆ’ ಎಂದು ರಜನಿ ತನ್ನ ಮನದ ಇಂಗಿತವನ್ನು ಹೇಳಿಕೊಂಡಿದ್ದಾರೆ.

‘ನಾನು ಮನೆಯಲ್ಲಿ ಮರಾಠಿ ಮಾತನಾಡುತ್ತೇನೆ. ಹಿಂದೊಮ್ಮೆ ಮರಾಠಿ ಚಿತ್ರದಲ್ಲಿಯೂ ನಟಿಸುವ ಅವಕಾಶವೂ ನನಗೆ ಒದಗಿಬಂದಿತ್ತು. ದುರಾದೃಷ್ಟವಶಾತ್‌ ಅದು ಈಡೇರಲಿಲ್ಲ. ನನಗೂ ಮರಾಠಿ ಚಿತ್ರದಲ್ಲಿ ನಟಿಸುವ ಆಸೆಯಿದೆ. ಅಂತಹ ಅವಕಾಶ ಯಾವಾಗ ಬರುತ್ತದೆಯೋ ಕಾದು ನೋಡೋಣ’ ಎಂದಿದ್ದಾರೆ.

ADVERTISEMENT

‘90 ದಿನಗಳ ಕಾಲ ಮುಂಬೈನಲ್ಲಿ ದರ್ಬಾರ್‌ ಚಿತ್ರದ ಶೂಟಿಂಗ್‌ ನಡೆಸಿದ್ದೇವೆ. ಮುಂಬೈ ಜನರೆಂದರೆ ನನಗೆ ಅಪಾರ ಪ್ರೀತಿ’ ಎಂದು ಹೇಳುವುದನ್ನು ಸೂಪರ್‌ಸ್ಟಾರ್‌ ಮರೆತಿಲ್ಲ. ಅಂದಹಾಗೆ ರಜನಿ ಹುಟ್ಟಿದ್ದು ಬೆಂಗಳೂರಿನ ಮರಾಠಿ ಕುಟುಂಬದಲ್ಲಿ. ಅವರ ಮೂಲ ಹೆಸರು ಶಿವಾಜಿರಾವ್‌ ಗಾಯಕ್ವಾಡ.

ಸಂವಾದದ ನಡುವೆ ‘ವೃತ್ತಿಬದುಕಿನಲ್ಲಿ ದೊಡ್ಡ ಸಾಧನೆ ಮಾಡಿರುವ ನಿಮಗೆ ಈಗ ನಟನೆ ಬಗ್ಗೆ ಏನನಿಸುತ್ತದೆ’ ಎನ್ನುವ ಪ್ರಶ್ನೆಯೂ ರಜನಿಗೆ ಎದುರಾಯಿತು. ಇದಕ್ಕೆ ನಗುತ್ತಲೇ ಉತ್ತರಿಸಿದ ಅವರು, ‘ನಾನು ಬಣ್ಣದಲೋಕಕ್ಕೆ ಬಂದಿದ್ದು ಹಣಕ್ಕಾಗಿಯೇ. ಇದನ್ನು ಪ್ರಾಮಾಣಿಕವಾಗಿಯೇ ಒಪ್ಪಿಕೊಳ್ಳುತ್ತೇನೆ. ನಾನು ಪಡೆದ ಹಣಕ್ಕೆ ಪಾತ್ರಗಳಿಗೆ ಜೀವ ತುಂಬುವ ಮೂಲಕ ನ್ಯಾಯ ಒದಗಿಸಿದ್ದೇನೆ. ನಾವು ಮಾಡುವ ಕೆಲಸವನ್ನು ಪ್ರೀತಿಸಬೇಕು. ನಟನೆಯೇ ನನ್ನ ಉಸಿರು. ಪ್ರೀತಿಯಿಂದಲೇ ನಾನು ಕ್ಯಾಮೆರಾ ಎದುರು ಕಾಣಿಸಿಕೊಳ್ಳುತ್ತೇನೆ. ನನ್ನೊಳಗಿನ ಶಕ್ತಿಯ ವೃದ್ಧಿಗೆ ಕ್ಯಾಮೆರಾ ಮತ್ತು ಬೆಳಕೇ ಕಾರಣ’ ಎಂದು ಗುಟ್ಟು ಬಿಚ್ಚಿಟ್ಟಿದ್ದಾರೆ.

‘ದರ್ಬಾರ್’ ಚಿತ್ರದಲ್ಲಿ ರಜನಿ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. 27 ವರ್ಷದ ಬಳಿಕ ಅವರು ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿರುವುದು ಈ ಚಿತ್ರದ ವಿಶೇಷ. ‘ನನಗೆ ಪೊಲೀಸ್‌ ಅಧಿಕಾರಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದು ಇಷ್ಟವಿಲ್ಲ. ಜನರಿಗೆ ರಂಜನೆ ನೀಡುವ ಪಾತ್ರಗಳೆಂದರೆ ನನಗಿಷ್ಟ. ಪೊಲೀಸ್‌ ಅಧಿಕಾರಿಯ ಪಾತ್ರವು ಖಳನನ್ನು ಸೆರೆ ಹಿಡಿಯುವುದರಿಂದ ಅಂತ್ಯದವರೆಗೂ ಗಾಂಭೀರ್ಯವಾಗಿಯೇ ಇರುತ್ತದೆ. ಆದರೆ, ನಿರ್ದೇಶಕ ಎ.ಆರ್‌. ಮುರುಗದಾಸ್‌ ಒಳ್ಳೆಯ ಕಥಾವಸ್ತುವಿನೊಂದಿಗೆ ನನ್ನ ಬಳಿಗೆ ಬಂದಾಗ ಚಿತ್ರವನ್ನು ಒಪ್ಪಿಕೊಳ್ಳಲು ಇಲ್ಲ ಎನ್ನಲಾಗಲಿಲ್ಲ’ ಎಂದು ರಜನಿ ವಿವರಿಸಿದ್ದಾರೆ.

ಜನವರಿ 10ರಂದು ‘ದರ್ಬಾರ್’ ಚಿತ್ರವು ತಮಿಳು, ತೆಲುಗು, ಮಲಯಾಳ ಮತ್ತು ಹಿಂದಿಯಲ್ಲಿ ತೆರೆ ಕಾಣುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.