'ಸೂಪರ್‌ಸ್ಟಾರ್' ರಜನಿಕಾಂತ್ ಹಾಗೂ 'ದಳಪತಿ' ವಿಜಯ್
ಕೃಪೆ: X – @actorvijay, @rajinikanth
ತಮಿಳು ಸಿನಿಮಾ ರಂಗದ (ಕಾಲಿವುಡ್) ದಿಗ್ಗಜರಾದ 'ಸೂಪರ್‌ಸ್ಟಾರ್' ರಜನಿಕಾಂತ್ ಹಾಗೂ 'ದಳಪತಿ' ವಿಜಯ್ ಅವರು, ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ರಜನಿಕಾಂತ್ ಅವರು ದಶಕಗಳ ಕಾಲ ಕಾಲಿವುಡ್ ಚಿತ್ರೋದ್ಯಮದ ಮುಂಚೂಣಿ ನಾಯಕನಟರಾಗಿದ್ದರು. ಆದರೆ, ಇದೀಗ ಚಿತ್ರಣ ಬದಲಾಗಿದ್ದು, ವಿಜಯ್ ಅವರು ಆ ಸ್ಥಾನವನ್ನು ಆಕ್ರಮಿಸಿಕೊಂಡಿದ್ದಾರೆ ಎಂಬ ಚರ್ಚೆಗಳು ಸಾಮಾಜಿಕ ಮಾದ್ಯಮಗಳಲ್ಲಿ ನಡೆಯುತ್ತಿವೆ.
ಸ್ಟಾರ್ ನಟರ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಈ ರೀತಿ ವಾದ ಮಾಡುವುದು ಸಾಮಾನ್ಯ. ಆದರೆ, ಕೆಲವೊಮ್ಮೆ ಮಾತಿನ ಸಮರ ತಾರಕಕ್ಕೇರಿ, ಅಹಿತಕರ ಸನ್ನಿವೇಶಗಳು ಸೃಷ್ಟಿಯಾಗುತ್ತವೆ. ಇದೀಗ, ರಜನಿ ಮತ್ತು ವಿಜಯ್ ಅಭಿಮಾನಿಗಳ ನಡುವೆ ಅಂತಹದ್ದೇ ವಾತಾವರಣ ಸಾಮಾಜಿಕ ಮಾಧ್ಯಮಗಳಲ್ಲಿ ನಿರ್ಮಾಣವಾಗಿದೆ.
ರಜನಿಕಾಂತ್ ಅವರ ಅಭಿಮಾನಿಗಳು, ವಿಜಯ್ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎನ್ನಲಾದ ವಿಡಿಯೊವೊಂದು ಎಕ್ಸ್/ಟ್ವಿಟರ್‌ನಲ್ಲಿ ಹರಿದಾಡುತ್ತಿದೆ. ಅದರ ಬೆನ್ನಲ್ಲೇ, ಉಭಯ ನಾಯಕರ ಅಭಿಮಾನಿಗಳ ನಡುವೆ ಮಾತಿನ ಸಮರ ಆರಂಭವಾಗಿದೆ. ಪರಸ್ಪರರು, ತೀಕ್ಷ್ಣ ಟೀಕೆಗಳನ್ನು, ಅವಮಾನಕರ ಹೇಳಿಕೆಗಳನ್ನು ನೀಡಿದ್ದಾರೆ.
ಪರಿಸ್ಥಿತಿ ಕೈಮೀರುವುದನ್ನು ಅರಿತ ರಜನಿಕಾಂತ್ ಅವರ ಸಾಮಾಜಿಕ ಮಾಧ್ಯಮ ತಂಡ, ತಕ್ಷಣವೇ ಔಪಚಾರಿಕ ಹೇಳಿಕೆ ಬಿಡುಗಡೆ ಮಾಡಿದೆ. 'ಈ (ವಿಜಯ್ ವಿರುದ್ಧದ) ಹೇಳಿಕೆಗಳು ಒಪ್ಪುವಂತಹವಲ್ಲ. ರಜನಿಕಾಂತ್ ಅವರ ನಿಜವಾದ ಅಭಿಮಾನಿಗಳು ಅನುಸರಿಸುತ್ತಿರುವ ತತ್ವಗಳಿಗೆ ಇವು ವಿರುದ್ಧವಾಗಿವೆ. ಇಂತಹ ಹಾನಿಕಾರಕ ವಿಚಾರಗಳನ್ನು ಮತ್ತೆ ಮತ್ತೆ ಹಂಚಿಕೊಳ್ಳುವುದರಿಂದ ಒಡಕು ಮೂಡುತ್ತದೆ ಮತ್ತು ದ್ವೇಷ ಹರಡುತ್ತದೆ. ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳು ಕೂಡಲೇ ಎಚ್ಚೆತ್ತುಕೊಳ್ಳಬೇಕು. ಇಂತಹ ಘಟನೆಗಳು ಮುಂದುವರಿಯಲು ಬಿಡಬಾರದು' ಎಂದು ಹೇಳಿದೆ.
ವಿಜಯ್ ಹಾಗೂ ರಜನಿಕಾಂತ್ ಅಭಿಮಾನಿಗಳ ಸಂಘರ್ಷ ತಾರಕಕ್ಕೇರಿರುವುದು ಇದೇ ಮೊದಲೇನಲ್ಲ. ಪರಸ್ಪರರು (ಅಭಿಮಾನಿಗಳು), ನಕಾರಾತ್ಮಕ ಹೇಳಿಕೆಗಳನ್ನು ನೀಡಿದ ಹಾಗೂ ಒಬ್ಬರನ್ನೊಬ್ಬರು ನಿಂದಿಸಿದ ಸಾಕಷ್ಟು ನಿದರ್ಶನಗಳಿವೆ.
ಈ ವಿವಾದ ಬಿಟ್ಟು ಸಿನಿಮಾದ ಕಡೆಗೆ ನೋಡುವುದಾದರೆ, ರಜನಿಕಾಂತ್ ಅವರು ಲೋಕೇಶ್ ಕನಕರಾಜ್ ನಿರ್ದೇಶನದ 'ಕೂಲಿ' ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಸಿನಿಮಾ ತೊರೆದು, ಸಂಪೂರ್ಣ ರಾಜಕೀಯದಲ್ಲಿ ತೊಡಗಿಕೊಳ್ಳುವುದಾಗಿ ಘೋಷಿಸಿರುವ ವಿಜಯ್, ವೃತ್ತಿ ಬದುಕಿನ ಕೊನೇ ಸಿನಿಮಾ 'ಜನ ನಾಯಗನ್' ಶೂಟಿಂಗ್‌ನಲ್ಲಿ ಬ್ಯುಸಿ ಆಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.