ADVERTISEMENT

ರಾಜ್‌ ಜನ್ಮದಿನಕ್ಕೆ ಸ್ಪೆಷಲ್‌ ಗಿಫ್ಟ್‌; ಒಂದೇ ಸಿನಿಮಾದಲ್ಲಿ ಮೂವರೂ ಸಹೋದರರು

ನಟ ರಾಘವೇಂದ್ರ ರಾಜ್‌ಕುಮಾರ್‌ ಘೋಷಣೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2019, 11:39 IST
Last Updated 12 ಏಪ್ರಿಲ್ 2019, 11:39 IST
ಬೆಂಗಳೂರಿನ ಕಂಠೀರವ ಸ್ಟುಡಿಯೊದಲ್ಲಿ ಶುಕ್ರವಾರ ವರನಟ ಡಾ.ರಾಜ್‌ಕುಮಾರ್‌ ಅವರ 13ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ನಟರಾದ ರಾಘವೇಂದ್ರ ರಾಜ್‌ಕುಮಾರ್‌, ಶಿವರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌ ಸೇರಿದಂತೆ ಕುಟುಂಬದ ಸದಸ್ಯರು ರಾಜ್‌ ಸಮಾಧಿಗೆ ಪೂಜೆ ಸಲ್ಲಿಸಿದರು.
ಬೆಂಗಳೂರಿನ ಕಂಠೀರವ ಸ್ಟುಡಿಯೊದಲ್ಲಿ ಶುಕ್ರವಾರ ವರನಟ ಡಾ.ರಾಜ್‌ಕುಮಾರ್‌ ಅವರ 13ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ನಟರಾದ ರಾಘವೇಂದ್ರ ರಾಜ್‌ಕುಮಾರ್‌, ಶಿವರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌ ಸೇರಿದಂತೆ ಕುಟುಂಬದ ಸದಸ್ಯರು ರಾಜ್‌ ಸಮಾಧಿಗೆ ಪೂಜೆ ಸಲ್ಲಿಸಿದರು.   

ಬೆಂಗಳೂರು: ನಗರದ ಕಂಠೀರವ ಸ್ಟುಡಿಯೊದಲ್ಲಿ ಶುಕ್ರವಾರ ನಟಸಾರ್ವಭೌಮ ಡಾ.ರಾಜ್‌ಕುಮಾರ್‌ ಅವರ 13ನೇ ವರ್ಷದ ಪುಣ್ಯಸ್ಮರಣೆ ನಡೆಯಿತು.

ಪುತ್ರರಾದ ಶಿವರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್ ಸೇರಿದಂತೆ ಕುಟುಂಬದ ಸದಸ್ಯರು ರಾಜ್‌ಕುಮಾರ್‌ ಮತ್ತು ಪಾರ್ವತಮ್ಮ ರಾಜ್‌ಕುಮಾರ್‌ ಸಮಾಧಿಗೆ ಪೂಜೆ ಸಲ್ಲಿಸಿದರು. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಟ ರಾಘವೇಂದ್ರ ರಾಜ್‌ಕುಮಾರ್‌, ‘ನಾವು ಮೂವರು ಸಹೋದರರು ಒಟ್ಟಾಗಿ ಸಿನಿಮಾ ಮಾಡುವ ಆಲೋಚನೆಯಲ್ಲಿದ್ದೇವೆ. ಅದಕ್ಕಾಗಿ ಒಳ್ಳೆಯ ಕಥೆಗಾಗಿ ಹುಡುಕಾಟ ನಡೆಸಿದ್ದೇವೆ. ಏಪ್ರಿಲ್‌ 24ರಂದು ಅಪ್ಪಾಜಿಯ ಜನ್ಮದಿನ. ಅಂದು ಅಭಿಮಾನಿಗಳಿಗೆ ಸ್ಪೆಷಲ್‌ ಗಿಫ್ಟ್‌ ನೀಡುತ್ತೇವೆ’ ಎಂದು ಘೋಷಿಸಿದರು.

ADVERTISEMENT

‘ಏಪ್ರಿಲ್‌ ಅಪ್ಪಾಜಿಯ ಮಾಸ. ಕಳೆದ ವರ್ಷ ‘ಅಮ್ಮನ ಮನೆ’ ಚಿತ್ರ ಮಾಡಿ ಅಮ್ಮನಿಗೆ ಅರ್ಪಿಸಿದ್ದೆ. ಈ ವರ್ಷ ‘ಅಪ್ಪನ ಅಂಗಿ’ ಸಿನಿಮಾ ಮಾಡಿ ಅಪ್ಪಾಜಿಗೆ ಅರ್ಪಿಸುತ್ತೇನೆ’ ಎಂದರು.

ನಟ ಶಿವರಾಜ್‌ಕುಮಾರ್‌, ‘ನಾನು ಒತ್ತಾಯ ಮಾಡಿದ್ದರಿಂದ ಅಪ್ಪಾಜಿ ಜೀವನದಲ್ಲಿ ಒಂದು ಬಾರಿ ಮಾತ್ರ ಜೀನ್ಸ್ ಪ್ಯಾಂಟ್‌ ಧರಿಸಿದ್ದರು. ಅವರು ಯಾವಾಗಲೂ ಬಿಳಿಉಡುಪು ತೊಡುತ್ತಿದ್ದರು. ಅವರ ಜೀವನವೂ ಪಾರದರ್ಶಕವಾಗಿತ್ತು. ಅವರು ನಟಿಸಿದ ಸಿನಿಮಾಗಳೂ ಶಾಂತಿಯ ದ್ಯೋತಕವಾಗಿವೆ’ ಎಂದು ಸ್ಮರಿಸಿದರು.

ನಟ ಪುನೀತ್‌ ರಾಜ್‌ಕುಮಾರ್‌, ‘ಅಪ್ಪಾಜಿ ಬಿಳಿಬಣ್ಣದ ಬಟ್ಟೆ ಮಾತ್ರ ಧರಿಸುತ್ತಿದ್ದರು. ದುಬಾರಿಯ ಬೆಲೆಯ ಬಟ್ಟೆಗಳನ್ನು ಅವರು ಇಷ್ಟಪಡುತ್ತಿರಲಿಲ್ಲ. ಅವರ ಸರಳತೆಯೇ ನಮಗೆ ಮಾದರಿ’ ಎಂದು ಹೇಳಿದರು.

‘ರಾಜ್‌ಕುಮಾರ್‌ ಅವರ ಬಯೋಪಿಕ್‌ ಸಿನಿಮಾ ಮಾಡುವುದು ಸುಲಭವಲ್ಲ. ಅಂತಹ ಅವಕಾಶ ಕೂಡಿಬಂದರೆ ಯೋಚಿಸಬಹುದು. ಸದ್ಯಕ್ಕೆ ಆ ಆಲೋಚನೆ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.