ADVERTISEMENT

ಇದು ಕಲಿಯುಗದ ನಾರಾಯಣನ ಕಥೆ

ವಿಜಯ್ ಜೋಷಿ
Published 27 ಡಿಸೆಂಬರ್ 2019, 3:42 IST
Last Updated 27 ಡಿಸೆಂಬರ್ 2019, 3:42 IST
ರಕ್ಷಿತ್‌ ಶೆಟ್ಟಿ
ರಕ್ಷಿತ್‌ ಶೆಟ್ಟಿ   

‘ಕಿರಿಕ್ ಪಾರ್ಟಿ’ಯ ಕರ್ಣನ ನಂತರ ರಕ್ಷಿತ್ ಶೆಟ್ಟಿ ಎತ್ತಿರುವ ಅವತಾರ ನಾರಾಯಣನದು! ರಕ್ಷಿತ್ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಚಿತ್ರ ಶುಕ್ರವಾರ ತೆರೆಗೆ ಬರುತ್ತಿದೆ. ಅಂದರೆ, ಬರೋಬ್ಬರಿ ಮೂರು ವರ್ಷಗಳ ನಂತರ ಅವರು ನಾಯಕ ನಟನಾಗಿ ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಹೊತ್ತಿನಲ್ಲಿ ಮಾತಿಗೆ ಸಿಕ್ಕಿದ್ದ ರಕ್ಷಿತ್, ‘ಈ ಶೈಲಿಯು ಕಮರ್ಷಿಯಲ್ ಸಿನಿಮಾ ಕನ್ನಡಕ್ಕೆ ಹೊಸದಾಗಿರುವ ಕಾರಣ, ‘ಉಳಿದವರು ಕಂಡಂತೆ’ ಚಿತ್ರದ ರೀತಿಯಲ್ಲಿ ಶ್ರೀಮನ್ನಾರಾಯಣ ಚಿತ್ರ ಕೂಡ ಅಭಿಮಾನಿಗಳ ದೊಡ್ಡ ಸಮೂಹವನ್ನು ಸೃಷ್ಟಿಸಿಕೊಳ್ಳಲಿದೆ’ ಎಂಬ ವಿಶ್ವಾಸದಲ್ಲಿ ಇದ್ದರು.

ಈ ಚಿತ್ರದ ನಾಯಕ ನಾರಾಯಣನ ಪಾತ್ರ ರಕ್ಷಿತ್ ಅವರ ಮನಸ್ಸಿನಲ್ಲಿ ಐದಾರು ವರ್ಷಗಳಿಂದಲೂ ಇತ್ತು. ‘ಆ ಪಾತ್ರವನ್ನು ನಾನು ಸ್ಕ್ರಿಪ್ಟ್‌ ಬರೆಯುವ ಮುನ್ನವೇ ಆಲೋಚಿಸಿದ್ದೆ’ ಎನ್ನುತ್ತಾರೆ ರಕ್ಷಿತ್.

ADVERTISEMENT

‘ಈ ಸಿನಿಮಾ ಸಂಪೂರ್ಣ ಕಾಲ್ಪನಿಕ ಕಥೆ ಹೊಂದಿದೆ. ಹಾಗಾಗಿ, ನಮಗೆ ಪಾತ್ರ ಕೂಡ ಸಂಪೂರ್ಣ ಕಾಲ್ಪನಿಕವೇ ಆಗಿರಬೇಕಿತ್ತು. ನಿಜ ಜೀವನದಲ್ಲಿ ನೋಡಿದ ಪಾತ್ರಗಳು ನಮಗೆ ಬೇಡವಾಗಿದ್ದವು. ಒಬ್ಬ ಬುದ್ಧಿವಂತ ಹಾಗೂ ಚೇಷ್ಟೆ ಮಾಡುವ ಪೊಲೀಸ್ ಅಧಿಕಾರಿ ಈ ನಾರಾಯಣ. ನಾನು ಚಿಕ್ಕಂದಿನಿಂದ ನೋಡಿದ ಸಿನಿಮಾಗಳಲ್ಲಿ ಕಂಡ ಪಾತ್ರಗಳು, ರಾಮ್‌ ಲಖನ್‌ ಸಿನಿಮಾದಲ್ಲಿ ಅನಿಲ್‌ ಕ‍ಪೂರ್‌ ನಿಭಾಯಿಸಿದ ಪಾತ್ರ... ಇಂಥವು ನಾರಾಯಣನ ಪಾತ್ರ ಸೃಷ್ಟಿಯ ಹಿಂದೆ ಅಪ್ರಜ್ಞಾಪೂರ್ವಕವಾಗಿ ಕೆಲಸ ಮಾಡಿರಬಹುದು. ಆದರೆ, ಪಾತ್ರವನ್ನು ಕಟ್ಟುವಾಗ ಇವ್ಯಾವುದನ್ನೂ ತಲೆಯಲ್ಲಿ ಇರಿಸಿಕೊಂಡಿರಲಿಲ್ಲ’ ಎನ್ನುವ ವಿವರಣೆಯನ್ನು ರಕ್ಷಿತ್ ನೀಡುತ್ತಾರೆ.

ಈ ಚಿತ್ರದ ನಿರ್ದೇಶಕ ಸಚಿನ್ ರವಿ ಅವರು ನಿರ್ದೇಶನ ಕ್ಷೇತ್ರಕ್ಕೆ ಹೊಸಬರು. ರಕ್ಷಿತ್ ಅವರು ಈ ಮೊದಲೇ ನಿರ್ದೇಶಕರಾಗಿ ಕೆಲಸ ಮಾಡಿದವರು. ಹೀಗಿರುವಾಗ, ‘ಶ್ರೀಮನ್ನಾರಾಯಣ’ ಚಿತ್ರದ ನಿರ್ದೇಶನದಲ್ಲಿ ಯಾರ ಪ್ರಭಾವ ಹೆಚ್ಚು ಎಂಬ ಪ್ರಶ್ನೆ ಮೂಡಬಹುದು. ಈ ಪ್ರಶ್ನೆಗೆ ಕೂಡ ಸುದೀರ್ಘ ಉತ್ತರ ನೀಡಿದರು ರಕ್ಷಿತ್: ‘ನಾವು ಕಥೆ ಬರೆಯಲು ಒಂದು ವರ್ಷ ತೆಗೆದುಕೊಂಡೆವು. ಆ ಪ್ರಕ್ರಿಯೆಯಲ್ಲಿ ಸಚಿನ್ ಕೂಡ ಭಾಗಿಯಾಗಿದ್ದರು. ಅವರಿಗೆ ಈ ಸಿನಿಮಾ ಹೇಗೆ ಚಿತ್ರೀಕರಿಸಬೇಕು ಎಂಬ ಆಲೋಚನೆ ಸ್ಪಷ್ಟವಾಗಿ ಇತ್ತು. ಕಥೆ ಬರೆಯುವಾಗಲೇ ಅದನ್ನೂ ನಾವು ಚರ್ಚಿಸಿದ್ದೆವು. ಚರ್ಚೆಯ ಪ್ರಭಾವ ಸಚಿನ್ ಮೇಲೆ ಆಗಿರಬಹುದು. ಚಿತ್ರೀಕರಣದ ವೇಳೆ ನಾನು ಅಲ್ಲಿ ಇರುತ್ತಿದ್ದ ಕಾರಣ, ಅಗತ್ಯ ಇದ್ದಾಗಲೆಲ್ಲ ನನ್ನ ಸಲಹೆಗಳನ್ನು ಸಚಿನ್‌ಗೆ ನೀಡಿರುವೆ. ನಾನು ಒಬ್ಬ ಬರಹಗಾರನಾಗಿ ಅವರ ಮೇಲೆ ಪ್ರಭಾವ ಬೀರಿರುವೆ. ಇಷ್ಟನ್ನು ಹೊರತುಪಡಿಸಿದರೆ, ನಾನು ನಿರ್ದೇಶಕನ ನಟ ಎಂಬಂತೆ ಕೆಲಸ ಮಾಡಿರುವೆ’ ಎನ್ನುತ್ತಾರೆ.

ಈ ಚಿತ್ರಕ್ಕೆ ದೊಡ್ಡ ಮೊತ್ತ ಹೂಡಿಕೆ ಆಗಿದೆ. ಇಷ್ಟನ್ನು ಮರಳಿ ತಂದುಕೊಡುವ ಶಕ್ತಿ ಕನ್ನಡದ ಸಿನಿಮಾ ಮಾರುಕಟ್ಟೆಗೆ ಇದೆ ಎಂಬ ನಂಬಿಕೆ ರಕ್ಷಿತ್‌ ಅವರದ್ದು. ‘ನಾವು ಹೂಡಿರುವ ಬಂಡವಾಳ ವಾಪಸ್ ಬರುವಂತೆ ಮಾಡಲು ನಮ್ಮಲ್ಲಿ ಆಲೋಚನೆಗಳು ಇವೆ. ಚಿತ್ರೀಕರಣದ ವೇಳೆಯಲ್ಲೇ ಇದರ ಉಪಗ್ರಹ ಮತ್ತು ಡಿಜಿಟಲ್ ಹಕ್ಕುಗಳ ಮಾರಾಟ ಆಯಿತು. ಇನ್ನು, ಚಿತ್ರಮಂದಿರಗಳಿಂದ ಎಷ್ಟು ಮೊತ್ತ ನಮಗೆ ಸಿಗಬಹುದು ಎಂಬ ಅಂದಾಜು ಇದೆ’ ಎಂದು ಸಿನಿಮಾದ ಖರ್ಚು–ಆದಾಯಗಳ ಬಗ್ಗೆ ಹೇಳುತ್ತಾರೆ.

ಸೆಟ್ ಹಾಕಿದ್ದು ಏಕೆ?
‘ಮೊದಲು ನೈಜ ಸ್ಥಳಗಳಲ್ಲೇ ಚಿತ್ರೀಕರಿಸಬೇಕು ಎಂಬ ಆಲೋಚನೆ ಇತ್ತು. ಇದಕ್ಕಾಗಿ ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದ ಕೆಲವು ಕೋಟೆಗಳನ್ನು ನೋಡಿಬಂದೆವು. ಎಲ್ಲ ದೃಶ್ಯಗಳನ್ನೂ ಒಂದೇ ಕೋಟೆಯಲ್ಲಿ ಚಿತ್ರೀಕರಿಸಬೇಕು ಎಂಬ ಯೋಚನೆಯೇನೂ ಇರಲಿಲ್ಲ. ಒಂದೊಂದು ಕೋಟೆಯಲ್ಲಿ ಒಂದಿಷ್ಟು ದೃಶ್ಯಗಳನ್ನು ಸೆರೆಹಿಡಿಯಬೇಕು ಎಂಬ ಉದ್ದೇಶ ಇತ್ತು. ಆದರೆ, ಎಲ್ಲ ಕೋಟೆಗಳೂ ಒಂದೇ ರೀತಿಯಲ್ಲಿ ಇಲ್ಲ. ಇದು ತೆರೆಯ ಮೇಲೆ ಬಂದರೆ ಅಷ್ಟೊಂದು ಚೆನ್ನಾಗಿ ಕಾಣಿಸಲಿಕ್ಕಿಲ್ಲ ಎಂಬ ಕಾರಣಕ್ಕೆ ದೊಡ್ಡ ಸೆಟ್ ಹಾಕುವ ತೀರ್ಮಾನ ಮಾಡಿದೆವು’ ಎನ್ನುತ್ತಾರೆ ರಕ್ಷಿತ್. ಈ ಚಿತ್ರದ ಬಹುತೇಕ ಭಾಗಗಳನ್ನು ಸೆಟ್‌ನಲ್ಲೇ ಚಿತ್ರೀಕರಿಸಲಾಗಿದೆ.

ಈ ಚಿತ್ರದ ಚಿತ್ರೀಕರಣದ ವೇಳೆ ‘ತುಸು ಜಾಸ್ತಿ ರಿಸ್ಕ್‌ ತೆಗೆದುಕೊಂಡೆವಲ್ಲಾ’ ಎಂದು ರಕ್ಷಿತ್ ಅವರಿಗೆ ಅನಿಸಿದ್ದು ಇದೆ. ಆದರೆ, ಅವರಿಗೆ ಹಾಗೆ ಅನಿಸಿದಾಗಲೆಲ್ಲ ಅವರಿಗೆ ಸಮಾಧಾನ ಹೇಳುತ್ತಿದ್ದವರು ನಿರ್ಮಾಪಕ ಪುಷ್ಕರ್‌ ಮಲ್ಲಿಕಾರ್ಜುನಯ್ಯ.

ಈ ಸಿನಿಮಾ ತೆಲುಗು, ತಮಿಳು, ಮಲಯಾಳ ಮತ್ತು ಹಿಂದಿ ಆವೃತ್ತಿಗಳು ಜನವರಿಯಲ್ಲಿ ಬಿಡುಗಡೆ ಆಗಲಿವೆ. ಕನ್ನಡ ಹೊರತುಪಡಿಸಿ ಬೇರೆಲ್ಲ ಭಾಷೆಗಳ ಆವೃತ್ತಿಗಳನ್ನು ತಡವಾಗಿ ಬಿಡುಗಡೆ ಮಾಡುತ್ತಿರುವುದಕ್ಕೆ ರಕ್ಷಿತ್ ಒಂದು ಕಾರಣ ನೀಡುತ್ತಾರೆ. ‘ಸಿನಿಮಾ ಪ್ರಚಾರಕ್ಕೆ ದೊಡ್ಡ ಮೊತ್ತದ ಹಣ ಇದ್ದರೆ ಏಕಕಾಲದಲ್ಲಿ ಎಲ್ಲವನ್ನೂ ಬಿಡುಗಡೆ ಮಾಡಬಹುದು. ಬಾಹುಬಲಿ ರೀತಿಯ ಸಿನಿಮಾ ಆದರೂ ಹಾಗೆ ಮಾಡಬಹುದು. ಆದರೆ ನಮ್ಮದು ಅಷ್ಟೊಂದು ದೊಡ್ಡ ಬಜೆಟ್ ಇರುವ ಸಿನಿಮಾ ಅಲ್ಲ. ಹಾಗಾಗಿ ನಮಗೆ ಜನ ನೀಡುವ ಪ್ರಚಾರ ಮಹತ್ವದ್ದಾಗುತ್ತದೆ. ನಮಗೆ ನಮ್ಮ ಕಂಟೆಂಟ್ ಬಗ್ಗೆ ಬಹಳ ವಿಶ್ವಾಸ ಇದೆ. ಇಲ್ಲಿ ಬಿಡುಗಡೆ ಆದ ನಂತರ ಜನರಿಂದಲೇ ಪ್ರಚಾರ ದೊರೆತು, ಬೇರೆ ಕಡೆ ಬಿಡುಗಡೆ ಮಾಡಲು ಭೂಮಿಕೆ ಸಿದ್ಧವಾಗುತ್ತದೆ ಎಂಬ ನಂಬಿಕೆಯಲ್ಲಿ ಬೇರೆ ಭಾಷೆಗಳಲ್ಲಿ ಬಿಡುಗಡೆ ತಡವಾಗಿ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.