ADVERTISEMENT

ಚಾರ್ಲಿ ಇನ್ನಷ್ಟು ಜನರನ್ನು ತಲುಪಲಿದೆ: ಸಿಎಂಗೆ ರಕ್ಷಿತ್ ಶೆಟ್ಟಿ ಧನ್ಯವಾದ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಜೂನ್ 2022, 5:44 IST
Last Updated 19 ಜೂನ್ 2022, 5:44 IST
‘777 ಚಾರ್ಲಿ’ ಸಿನಿಮಾವನ್ನು ವೀಕ್ಷಿಸಿದ ಬಳಿಕ ಭಾವುಕರಾದ ಸಿಎಂ ಬೊಮ್ಮಾಯಿ, ನಟ ರಕ್ಷಿತ್ ಶೆಟ್ಟಿ ಜತೆಗಿದ್ದಾರೆ – ಸಂಗ್ರಹ ಚಿತ್ರ
‘777 ಚಾರ್ಲಿ’ ಸಿನಿಮಾವನ್ನು ವೀಕ್ಷಿಸಿದ ಬಳಿಕ ಭಾವುಕರಾದ ಸಿಎಂ ಬೊಮ್ಮಾಯಿ, ನಟ ರಕ್ಷಿತ್ ಶೆಟ್ಟಿ ಜತೆಗಿದ್ದಾರೆ – ಸಂಗ್ರಹ ಚಿತ್ರ   

ಬೆಂಗಳೂರು: ‘777 ಚಾರ್ಲಿ’ ಸಿನಿಮಾಕ್ಕೆ ರಾಜ್ಯ ಸರಕು ಮತ್ತು ಸೇವಾ ತೆರಿಗೆ (ಎಸ್‌ಜಿಎಸ್‌ಟಿ) ವಿನಾಯಿತಿ ನೀಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿರುವುದಕ್ಕೆ ನಟ, ನಿರ್ಮಾಪಕ ರಕ್ಷಿತ್ ಶೆಟ್ಟಿ ಹರ್ಷ ವ್ಯಕ್ತಪಡಿಸಿದ್ದಾರೆ.

‘ನಮ್ಮ ಚಿತ್ರಕ್ಕೆ ಶೇಕಡ 100ರಷ್ಟು ತೆರಿಗೆ ವಿನಾಯಿತಿ ಕಲ್ಪಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಹಾಗೂ ಕರ್ನಾಟಕ ಸರ್ಕಾರಕ್ಕೆ ತುಂಬು ಹೃದಯದ ಧನ್ಯವಾದಗಳು’ ಎಂದು ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.

‘ನಮ್ಮ ಸಿನಿಮಾದ ಸುಂದರ ಸಂದೇಶವೀಗ ಇನ್ನಷ್ಟು ಪ್ರೇಕ್ಷಕರನ್ನು ತಲುಪಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅವರ ಸಂಪುಟ ಸಹೋದ್ಯೋಗಿಗಳಿಗೆ ನಮ್ಮ ತುಂಬು ಹೃದಯದ ಧನ್ಯವಾದಗಳು’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಅವರು ಉಲ್ಲೇಖಿಸಿದ್ದಾರೆ.

ಜೂನ್ 19ರಿಂದ ಮೊದಲ್ಗೊಂಡು ಆರು ತಿಂಗಳವರೆಗೆ ‘777 ಚಾರ್ಲಿ’ ಸಿನಿಮಾಗೆ ಕೆಲವು ಷರತ್ತುಗಳೊಂದಿಗೆ ಎಸ್‌ಜಿಎಸ್‌ಟಿ ವಿನಾಯಿತಿ ನೀಡಲಾಗುತ್ತದೆ ಎಂದು ರಾಜ್ಯ ಹಣಕಾಸು ಇಲಾಖೆ ಶನಿವಾರ ಆದೇಶ ಹೊರಡಿಸಿತ್ತು.

ಚಿತ್ರ ಪ್ರದರ್ಶನಕ್ಕೆ ಶೇ 100ರ ತೆರಿಗೆ ವಿನಾಯಿತಿ ಕೋರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ರಕ್ಷಿತ್ ಶೆಟ್ಟಿ ಮನವಿ ಸಲ್ಲಿಸಿದ್ದರು. ಇನ್‌ಬ್ರೀಡಿಂಗ್‌ನಿಂದಾಗಿ ಶ್ವಾನಗಳ ಸ್ವಾಸ್ಥ್ಯದ ಮೇಲಾಗುವ ಪರಿಣಾಮದ ಬಗ್ಗೆ ಸಿನಿಮಾದಲ್ಲಿ ಜಾಗೃತಿ ಮೂಡಿಸಲಾಗಿದ್ದು, ಬೀದಿ ನಾಯಿಗಳನ್ನು ದತ್ತು ಪಡೆಯುವ ಸಂದೇಶವನ್ನೂ ಸಾರಲಾಗಿದೆ. ಪ್ರಾಣಿ ಹಿಂಸೆಯ ಸೂಕ್ಷ್ಮವನ್ನೂ ಎತ್ತಿಹಿಡಿಯಲಾಗಿದೆ ಎಂದು ಮನವಿ ಪತ್ರದಲ್ಲಿ ಅವರು ಉಲ್ಲೇಖಿಸಿದ್ದರು. ಇದನ್ನು ಪರಿಗಣಿಸಿದ್ದ ಮುಖ್ಯಮಂತ್ರಿಗಳು, ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡುವಂತೆ ಸೂಚಿಸಿದ್ದರು ಎಂದು ಹಣಕಾಸು ಇಲಾಖೆ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.