ADVERTISEMENT

ಮೀ ಟೂಗೆ ರಕುಲ್ ಬೆಂಬಲ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2018, 19:30 IST
Last Updated 29 ಅಕ್ಟೋಬರ್ 2018, 19:30 IST
ಕಥಾನಾಯಕುಡು ಚಿತ್ರದಲ್ಲಿ ಶ್ರೀದೇವಿಯಾಗಿ ರಕುಲ್ ಪ್ರೀತ್
ಕಥಾನಾಯಕುಡು ಚಿತ್ರದಲ್ಲಿ ಶ್ರೀದೇವಿಯಾಗಿ ರಕುಲ್ ಪ್ರೀತ್   

ತೆಲುಗು ಸಿನಿರಂಗದ ಲೆಜೆಂಡ್ ಎನ್‌ಟಿಆರ್ ಆತ್ಮಕತೆ ಆಧರಿಸಿದ ಚಿತ್ರದಲ್ಲಿ ನಟಿ ಶ್ರೀದೇವಿ ಪಾತ್ರಕ್ಕೆರಕುಲ್ ಪ್ರೀತ್‌ ಸಿಂಗ್ ಬಣ್ಣ ಹಚ್ಚಲಿದ್ದಾರೆ.

‘ಈ ಸಿನಿಮಾದಲ್ಲಿ ಶ್ರೀದೇವಿ ಅವರ ಪಾತ್ರ ನಿರ್ವಹಿಸುತ್ತಿರುವುದು ನನ್ನ ಜೀವನದ ಸಾಧನೆ, ನಿಜಕ್ಕೂ ನನಗೆ ಹೆಮ್ಮೆ ಎನ್ನಿಸುತ್ತಿದೆ. ಜೊತೆಗೆ‍ಪಾತ್ರದ ಕುರಿತು ಉತ್ಸುಕಳಾಗಿದ್ದೇನೆ.ನನ್ನ ಬಳಿ ಈ ಪಾತ್ರ ಮಾಡಬೇಕು ಎಂದು ಕೇಳಿದಾಗ ನಾನು ನಿರ್ಮಾಪಕರಲ್ಲಿ ನನ್ನಿಂದ ಪಾತ್ರ ಮಾಡಲು ಸಾಧ್ಯವೇ ಎಂದು ಕೇಳಿದ್ದೆ. ಏಕೆಂದರೆ ಶ್ರೀದೇವಿ ಭಾರತೀಯ ಸಿನಿರಂಗದ ಮೊದಲ ಮಹಿಳಾ ಸೂಪರ್‌ಸ್ಟಾರ್ ಎನ್ನಿಸಿಕೊಂಡವರು. ಅವರ ಪಾತ್ರಕ್ಕೆ ನನ್ನಿಂದ ನ್ಯಾಯ ಕೊಡಲು ಸಾಧ್ಯವೇ? ಎಂಬ ಅನುಮಾನ ನನ್ನಲ್ಲಿತ್ತು ಎಂದು ರಕುಲ್ ಹೇಳಿಕೊಂಡಿದ್ದಾರೆ.

ಪಾತ್ರಕ್ಕೆ ನ್ಯಾಯ ಒದಗಿಸಿಕೊಡುವಂತಹ ದೊಡ್ಡ ಜವಾಬ್ದಾರಿ ನನ್ನ ಮೇಲಿದೆ ಎಂದೂ ಹೇಳಿದ್ದಾರೆ.

ADVERTISEMENT

ಈ ಸಿನಿಮಾದಲ್ಲಿ ಎನ್‌ಟಿಆರ್ ಪತ್ನಿ ಬಸವತಾರಕಂ ಪಾತ್ರದಲ್ಲಿವಿದ್ಯಾ ಬಾಲನ್ ನಟಿಸುತ್ತಿದ್ದಾರೆ. ಕ್ರಿಶ್ ಜೆ. ಸಿನಿಮಾ ನಿರ್ದೇಶನ ಮಾಡುತ್ತಿದ್ದು ಬಾಲಕೃಷ್ಣ ಎನ್‌ಟಿಆರ್ ಪಾತ್ರವನ್ನು ಮಾಡಲಿದ್ದಾರೆ.

ಇದೇ ವೇಳೆ ಮೀ ಟೂ ಬಗ್ಗೆ ಮಾತನಾಡಿದ ರಕುಲ್ ‘ಇಂತಹ ಅಭಿಯಾನಗಳನ್ನು ಆರಂಭಿಸಿರುವುದು ನಿಜಕ್ಕೂ ಉತ್ತಮ ಬೆಳವಣಿಗೆ. ನನ್ನ ಪ್ರಕಾರ ಯಾವುದು ಸರಿ, ಯಾವುದು ತಪ್ಪು ಎನ್ನುವುದು ನಮಗೆ ಗೊತ್ತಿರಬೇಕು. ನಮ್ಮ ಪರಿಧಿಯಲ್ಲಿ ನಾವಿರುವುದು ಉತ್ತಮ. ನಮ್ಮ ಮೇಲೆ ಉಂಟಾದ ದೌರ್ಜನ್ಯವನ್ನು ಮುಚ್ಚಿಟ್ಟುಕೊಳ್ಳುವುದು ಸರಿಯಲ್ಲ. ಇಂತಹ ಯಾವುದೇ ಪ್ರಕರಣ ಆಗಿರಲಿ ಅದರಲ್ಲಿ ಸತ್ಯವಿದ್ದರೆ ಖಂಡಿತ ಈ ಪ್ರಕರಣಕ್ಕೆ ನ್ಯಾಯ ಸಿಗುತ್ತದೆ. ಜೊತೆಗೆ ಅದರಿಂದ ಇನ್ನಷ್ಟು ಪ್ರಕರಣಗಳು ಬೆಳಕಿಗೆ ಬರುತ್ತವೆ’ ಎಂದು ನಿರ್ಭಿಡೆಯಿಂದ ಹೇಳಿಕೊಂಡಿದ್ದಾರೆ.

ಇಂತಹ ಪ್ರಕರಣಗಳು ಬೆಳಕಿಗೆ ಬರುವುದರಿಂದ ಮಹಿಳೆಯರ ಮೇಲಿನ ಗೌರವ ಹೆಚ್ಚುತ್ತದೆ. ಜೊತೆಗೆ ಅವರು ಕೆಲಸ ಮಾಡುವ ಜಾಗದಲ್ಲಿ ಸುರಕ್ಷಿತರಾಗಿರಬಹುದು ಎಂದಿದ್ದಾರೆ 28 ವರ್ಷದ ಈ ಸುಂದರಿ. ರಕುಲ್‌ ಬಾಲಿವುಡ್‌ನ ದೇ ದೇ ಪ್ಯಾರ್ ದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.