
‘ಅಯ್ಯನ ಮನೆ’, ‘ಶೋಧ’ ವೆಬ್‌ಸರಣಿಗಳ ಮೂಲಕ ಕನ್ನಡ ವೆಬ್‌ಸರಣಿಯ ರುಚಿ ಹಚ್ಚಿಸಿರುವ ಜೀ5 ಇದೀಗ ಮತ್ತೊಂದು ವೆಬ್‌ಸರಣಿಯೊಂದಿಗೆ ಬಂದಿದೆ. ‘ಪಿಆರ್‌ಕೆ ಪ್ರೊಡಕ್ಷನ್ಸ್’ ಸಹಯೋಗದಲ್ಲಿ ನಿರ್ಮಾಣವಾಗಿರುವ ‘ಮಾರಿಗಲ್ಲು’ ಅ.31ರಿಂದ ಜೀ5ನಲ್ಲಿ ಸ್ಟ್ರೀಮ್ ಆಗಲಿದ್ದು, ಈ ಮೂಲಕ ನಟ ರಂಗಾಯಣ ರಘು ಅವರು ವೆಬ್‌ಸರಣಿ ಲೋಕಕ್ಕೆ ಮೊದಲ ಹೆಜ್ಜೆ ಇಡಲಿದ್ದಾರೆ. ರಂಗಭೂಮಿ, ಕಿರುತೆರೆ, ಬೆಳ್ಳಿತೆರೆಯಲ್ಲಿ ಮಿಂಚಿರುವ ರಘು ಅವರಿಗೆ ಇದು ಹೊಸ ಲೋಕ. ಆ ಲೋಕದ ಅನುಭವವನ್ನು ಅವರಿಲ್ಲಿ ಬಿಚ್ಚಿಟ್ಟಿದ್ದಾರೆ.
‘ಕಲಾವಿದರಾದ ನಾವು ಒಂಥರಾ ರೈತರ ರೀತಿ. ಬದನೆಕಾಯಿನೂ ಬೆಳಿತೀವಿ, ತೆಂಗಿನಕಾಯಿನೂ ಬೆಳಿತೀವಿ. ಭತ್ತನೂ, ರಾಗಿನೂ ಬೆಳಿತೀವಿ. ವೇದಿಕೆ ಯಾವುದೇ ಆಗಿದ್ದರೂ ನಟನೆ ಮಾಡುತ್ತಲೇ ಇರುತ್ತೇವೆ. ನಾನು ರಂಗಭೂಮಿ ಹಿನ್ನೆಲೆಯಿಂದ ಬಂದವನು. ನಾಟಕಗಳನ್ನೂ ಮಾಡಿದ್ದೇನೆ, ಬೀದಿ ನಾಟಕಗಳಲ್ಲೂ ಅಭಿನಯಿಸಿದ್ದೇನೆ. ನಂತರದಲ್ಲಿ ಧಾರಾವಾಹಿಗಳಲ್ಲಿ ಕಾಣಿಸಿಕೊಂಡು ಸಿನಿಮಾ ಕ್ಷೇತ್ರಕ್ಕೆ ಹೆಜ್ಜೆ ಇಟ್ಟೆ. ಈ ವೆಬ್‌ಸರಣಿಗಾಗಿ ಸುಮಾರು ಹದಿನೈದು ದಿನ ಬಣ್ಣಹಚ್ಚಿದ್ದೆ. ಸಿನಿಮಾಗೆ ಹೋಲಿಸಿದರೆ ಒಟಿಟಿಯಲ್ಲಿ ಸಮಯದ ಮಿತಿ ಇಲ್ಲ. ಒಂದು ಕಥೆ ಹೇಳಲು ನಾಲ್ಕೈದು ಗಂಟೆ ಸಿಗುತ್ತದೆ. ಸೂಕ್ಷ್ಮತೆಗೆ ಹಾಗೂ ವಿಸ್ತಾರಕ್ಕೆ ಇಲ್ಲಿ ಅವಕಾಶವಿದೆ’ ಎನ್ನುತ್ತಾ ತಮ್ಮೊಳಗಿನ ಆಸೆಯತ್ತ ಮಾತು ಹೊರಳಿಸಿದರು ರಘು.
‘ನನಗೆ ಬಹಳ ಖುಷಿಯಾಗಿದ್ದೇನೆಂದರೆ, ಅಪ್ಪು(ಪುನೀತ್ ರಾಜ್‌ಕುಮಾರ್) ಅವರ ಜೊತೆಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದೇನೆ. ಇದೀಗ ಅವರದೇ ಹೆಸರಿನಲ್ಲಿರುವ ನಿರ್ಮಾಣ ಸಂಸ್ಥೆಯ ವೆಬ್ ಸರಣಿಯಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ರಘು ಒಟಿಟಿಗಿನ್ನೂ ಮಗು. ಇದು ನನ್ನ ಮೊದಲ ಪಾದಾರ್ಪಣೆ. ಜೀ5 ಕನ್ನಡದಲ್ಲಿ ವೆಬ್‌ಸೀರೀಸ್‌ನ ಸರಣಿ ಆರಂಭಿಸಿದೆ. ನಮ್ಮ ಕನ್ನಡ ಸಾಹಿತ್ಯ ಬಹಳ ಶ್ರೀಮಂತವಾಗಿದೆ. ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ನಾಡು ನಮ್ಮದು. ಸಾಕಷ್ಟು ಕಾದಂಬರಿಕಾರರ ಕಾದಂಬರಿಗಳು ಇವೆ. ಸಣ್ಣಕಥೆಗಳು ಸಾವಿರಾರಿವೆ. ಇವೆಲ್ಲಾ ಕಥೆಗಳು ಈ ವೆಬ್‌ಸರಣಿಗಳ ಮುಖಾಂತರ ಜನರಿಗೆ ತಲುಪಬೇಕು ಎನ್ನುವ ಸಣ್ಣ ಆಸೆ ನನಗಿದೆ. ಇದರಿಂದ ಸ್ಥಳೀಯ ಕಲಾವಿದರಿಗೂ ಹೆಚ್ಚಿನ ಅವಕಾಶಗಳು ದೊರೆಯುತ್ತವೆ. ಅಪ್ಪು ಅವರ ಕನಸುಗಳನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ನನಸು ಮಾಡುತ್ತಿರುವುದು ಮತ್ತೊಂದು ಖುಷಿಯ ವಿಚಾರ’ ಎಂದರು.
‘ದೇವರಾಜ್ ಪೂಜಾರಿ ‘ಮಾರಿಗಲ್ಲು’ ಸರಣಿಗೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸರಣಿಯೊಳಗಿನ ಪಾತ್ರವೊಂದನ್ನು ನಾನೇ ಮಾಡಬೇಕು ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಬಯಸಿದ್ದರು. ಇದು ಹೊಸಬರ ತಂಡ. ನಾನು, ಗೋಪಾಲಕೃಷ್ಣ ದೇಶಪಾಂಡೆ, ಪ್ರಶಾಂತ್ ಸಿದ್ದಿ ಅವರಷ್ಟೇ ಹಳಬರು. ಇಂತಹ ತಂಡದ ಜೊತೆಗೂಡಿ ಹೊಸ ಪ್ರಯೋಗಗಳನ್ನು, ಸುಧಾರಣೆಗಳನ್ನು ಮಾಡಿಕೊಂಡ ಅನುಭವ ಚೆನ್ನಾಗಿತ್ತು. ಚಿತ್ರೀಕರಣದ ಸಮಯದಲ್ಲಿ ಶಿರಸಿಯ ಮಳೆ ಭಯಬೀಳಿಸಿತು. ಮೂರ್ನಾಲ್ಕು ಗಂಟೆ ಸತತ ಮಳೆಯಾಗುವುದನ್ನು ಕಂಡು ‘ಗಾಳಿಪಟ’ದ ನನ್ನದೇ ಡೈಲಾಗ್ ನೆನಪಾಯಿತು. ‘ಟಗರುಪಲ್ಯ’ ಸಿನಿಮಾದ ಛಾಯಾಚಿತ್ರಗ್ರಹಣ ಮಾಡಿದ್ದ ಎಸ್.ಕೆ.ರಾವ್ ಅವರೇ ಇಲ್ಲಿ ಕ್ಯಾಮೆರಾ ಹಿಡಿದಿದ್ದರು. ವಿರುದ್ಧವಾದ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನಾನು, ಗೋಪಾಲಕೃಷ್ಣ ದೇಶಪಾಂಡೆ ಅವರು ಇಲ್ಲಿ ಬೈದಾಡಿಕೊಂಡು ಲವ್ ಮಾಡಿದ್ದೇವೆ! ಇದನ್ನು ಸರಣಿಯಲ್ಲೇ ನೋಡಿ ಆನಂದಿಸಬೇಕು. ಮಂಡ್ಯದಿಂದ ಬಂದು ಪುರಾತತ್ವ ಇಲಾಖೆಯಲ್ಲಿ ಕೆಲಸ ಮಾಡುವ ಅಧಿಕಾರಿಯಾಗಿ ನಾನು ಕಾಣಿಸಿಕೊಂಡಿದ್ದೇನೆ. ಗೋಪಾಲಕೃಷ್ಣ ದೇಶಪಾಂಡೆ ಅವರು ಸ್ಥಳೀಯ ವ್ಯಕ್ತಿಯಾಗಿ ನಟಿಸಿದ್ದಾರೆ. ಈ ಪ್ರದೇಶದಲ್ಲಿ ಹೆಜ್ಜೆ ಹೆಜ್ಜೆಗೂ ಸಾಕ್ಷಿ ಕಲ್ಲುಗಳು, ಶಿಲಾಶಾಸನಗಳು ಸಿಗುತ್ತವೆ. ನಿಧಿ ಹುಡುಕುವ ಕಥೆ ಸರಣಿಯಲ್ಲಿದ್ದು, ಆ ನಿಧಿಗೆ ದೈವದ ರಕ್ಷಣೆ ಹೇಗಿದೆ? ಆಸೆ–ದುರಾಸೆಯ ವಿಷಯಗಳು ಮಿಳಿತವಾಗಿದೆ. ಮಯೂರವರ್ಮನಾಗಿ ಪುನೀತ್ ಅವರು ಗ್ಲಿಮ್ಸ್‌ನಲ್ಲಿ ಕಾಣಿಸಿಕೊಂಡಿರುವುದು ಸರಣಿಯ ಹೈಲೈಟ್’ ಎಂದು ಮಾತಿಗೆ ವಿರಾಮವಿತ್ತರು ರಘು.
‘ಮಾರಿಗಲ್ಲು’ ಕಥೆಯೇನು?
ಕಾದಂಬರಿ ಸಿರಿ ಸಂಪತ್ತು ಹುಡುಕಿದರೆ ಮತ್ತೆ ಸಿಗಬಹುದೇ ಎನ್ನುವ ಪ್ರಶ್ನೆಯನ್ನೆತ್ತುತ್ತಾ ಈ ಸರಣಿ ಆರಂಭವಾಗುತ್ತದೆ. 4ನೇ ಶತಮಾನದ ಕದಂಬರ ಆಳ್ವಿಕೆಯ ಕಾಲದ ಹಿನ್ನೆಲೆಯಲ್ಲಿ ಕಥೆ ಇದರಲ್ಲಿ ಇದೆ. 1990ರ ಕಾಲಘಟ್ಟದಲ್ಲಿ ಕದಂಬರ ಕಾಲದ ನಿಧಿ ಹುಡುಕಲು ಹೊರಟ ಶಿರಸಿಯ ಹುಡುಗರ ಸುತ್ತ ಕಥೆ ಸಾಗುತ್ತದೆ. ಶಿರಸಿಯ ಪ್ರಖ್ಯಾತ ಬೇಡರ ವೇಷವನ್ನೂ ಈ ಸರಣಿಯಲ್ಲಿ ಕಾಣಬಹುದು. ಶಿರಸಿ ಬಳಿಯ ಮಾರಿಗಲ್ಲು ಎಂಬ ಕಾಲ್ಪನಿಕ ಹಳ್ಳಿಯೊಂದರಲ್ಲಿ ನಡೆದ ಕಥೆಯನ್ನು ಸರಣಿಯಲ್ಲಿ ಕಟ್ಟಿಕೊಡಲಾಗಿದೆ. ರಂಗಾಯಣ ರಘು ಗೋಪಾಲಕೃಷ್ಣ ದೇಶಪಾಂಡೆ ಈ ಸರಣಿ ಮೂಲಕ ವೆಬ್‌ಸರಣಿ ಲೋಕಕ್ಕೆ ಹೆಜ್ಜೆ ಇಟ್ಟಿದ್ದಾರೆ. ಪ್ರವೀಣ್ ತೇಜ್ ಎ.ಎಸ್.ಸೂರಜ್ ಪ್ರಶಾಂತ್ ಸಿದ್ದಿ ನಿನಾದ್ ಹೃತ್ಸಾ ಹಾಗೂ ಸ್ಥಳೀಯ ರಂಗಭೂಮಿ ಕಲಾವಿದರು ಇದರಲ್ಲಿ ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.