ADVERTISEMENT

ಸಂದರ್ಶನ | ನಟನೆಗಿಂತ ಸಂಗೀತಕ್ಕೆ ಆದ್ಯತೆ: ಚಂದನ್‌ ಶೆಟ್ಟಿ

ಅಭಿಲಾಷ್ ಪಿ.ಎಸ್‌.
Published 1 ಮೇ 2025, 23:02 IST
Last Updated 1 ಮೇ 2025, 23:02 IST
<div class="paragraphs"><p>ಚಂದನ್‌ ಶೆಟ್ಟಿ&nbsp;</p></div>

ಚಂದನ್‌ ಶೆಟ್ಟಿ 

   

ಕನ್ನಡ ರ್‍ಯಾಪರ್‌ ಚಂದನ್‌ ಶೆಟ್ಟಿ ನಾಯಕನಾಗಿ ನಟಿಸಿರುವ ಮೊದಲ ಸಿನಿಮಾ ‘ಸೂತ್ರಧಾರಿ’ ಮೇ 9ರಂದು ತೆರೆಕಾಣುತ್ತಿದೆ. ಅವರು ‘ಸೂತ್ರಧಾರಿ’ಯ ಫಲಿತಾಂಶದ ಮೇಲೆ ನಟನೆಯ ವಿಚಾರದಲ್ಲಿ ಮುಂದಿನ ಹೆಜ್ಜೆ ಇಡುವ ನಿರ್ಧಾರ ಮಾಡಿದ್ದಾರೆ.

ನಟನೆಯತ್ತ ಆಸಕ್ತಿ ಹುಟ್ಟಿದ್ದು ಏಕೆ? 

ADVERTISEMENT

ನನಗೆ ನಟನೆಯತ್ತ ಆಸಕ್ತಿ ಅಥವಾ ನಟನಾಗಬೇಕು ಎಂಬ ಇಚ್ಛೆ ಇರಲಿಲ್ಲ. ಇವತ್ತಿಗೂ ನಾನು ರ್‍ಯಾಪರ್‌ ಆಗಿಯೇ ಗುರುತಿಸಿಕೊಳ್ಳಲು ಅಥವಾ ಇದೇ ಕ್ಷೇತ್ರದಲ್ಲಿ ಇನ್ನಷ್ಟು ಬೆಳೆಯಲು ಇಚ್ಛಿಸುವವ. ಕರ್ನಾಟಕದಲ್ಲಿರುವವರಿಗೆ ಚಂದನ್‌ ಶೆಟ್ಟಿ ಯಾರೆಂದು ತಿಳಿದಿದೆ. ಭಾರತದಲ್ಲಿ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ನನ್ನ ಹಾಡೊಂದು ಹಿಟ್‌ ಆಗಬೇಕು ಎನ್ನುವ ಆಸೆ ಹೊತ್ತವನು. ‘ಸೂತ್ರಧಾರಿ’ ಅವಕಾಶ ನನ್ನನ್ನೇ ಹುಡುಕಿಕೊಂಡು ಬಂದಿತ್ತು. ನನ್ನ ತಂದೆಗೆ ನನ್ನನ್ನು ಹೀರೊ ಆಗಿ ನೋಡಬೇಕು ಎಂಬ ಆಸೆ ಇತ್ತು. ಹೀಗಾಗಿ ಅರಸಿಕೊಂಡು ಬಂದ ಅವಕಾಶವನ್ನು ಕಳೆದುಕೊಳ್ಳಲಿಲ್ಲ. ‘ಸೂತ್ರಧಾರಿ’ ಸಿನಿಮಾ ತಂಡದ ಜೊತೆಗೆ ಕೆಲಸ ಮಾಡಬಹುದು ಎಂದೆನಿಸಿ ನಟಿಸಿದೆ. 

ಈ ಸಿನಿಮಾ ಏಕೆ ವಿಳಂಬವಾಯಿತು? 

‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾಗೂ ಮೊದಲೇ ‘ಸೂತ್ರಧಾರಿ’ ಚಿತ್ರ ಪೂರ್ಣಗೊಂಡಿತ್ತು. 2022ರಲ್ಲಿ ಈ ಸಿನಿಮಾದ ಚಿತ್ರೀಕರಣ ಆರಂಭವಾಗಿತ್ತು. ಎರಡು ವರ್ಷಗಳ ಮೊದಲೇ ಹಾಡೊಂದು ರಿಲೀಸ್‌ ಆಗಿತ್ತು. ಆ ಸಂದರ್ಭದಲ್ಲಿ ಸಿನಿಮಾದ ವಹಿವಾಟುಗಳು ಚೆನ್ನಾಗಿ ಆಗುತ್ತಿತ್ತು. ಒಟಿಟಿ ವೇದಿಕೆಗಳು ರಿಲೀಸ್‌ಗೂ ಮೊದಲೇ ಚಿತ್ರವನ್ನು ಖರೀದಿಸುತ್ತಿದ್ದವು. ನಾವು ಚಿತ್ರ ಬಿಡುಗಡೆಗೆ ಸಜ್ಜಾಗುವ ಸಂದರ್ಭದಲ್ಲಿ ಒಟಿಟಿ ವೇದಿಕೆಗಳು ಕನ್ನಡ ಸಿನಿಮಾಗಳ ಖರೀದಿಯನ್ನು ನಿಲ್ಲಿಸಿದವು. ಚಿತ್ರಮಂದಿರಗಳಲ್ಲಿ ಸಿನಿಮಾ ಓಡಿದರಷ್ಟೇ ಖರೀದಿಸುತ್ತೇವೆ ಎನ್ನುವ ನಿರ್ಧಾರವನ್ನು ಅವು ಮಾಡಿದವು. ರಿಲೀಸ್‌ಗೂ ಮೊದಲೇ ವಹಿವಾಟು ನಡೆದರೆ ಒಂದು ಸುರಕ್ಷಿತ ವಲಯದಲ್ಲಿ ಇರಬಹುದು ಎನ್ನುವ ನಂಬಿಕೆ ನಮ್ಮಲ್ಲಿತ್ತು. ಹೀಗಾಗಿ ಕಾದೆವು. ಯಾವುದೂ ಈಡೇರದೇ ಇದ್ದಾಗ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಗೆ ದಿನಾಂಕ ಹುಡುಕಿದೆವು. ಕಳೆದ ಕೆಲ ತಿಂಗಳಲ್ಲಿ ಪ್ರತಿ ಶುಕ್ರವಾರ ಐದಾರು ಸಿನಿಮಾಗಳು ತೆರೆಕಂಡವು. ಇದರಿಂದ ಮತ್ತೆ ಸಿನಿಮಾವನ್ನು ಮುಂದೂಡುತ್ತಾ ಮೇ 9ಕ್ಕೆ ಬರಲು ನಿರ್ಧರಿಸಿದೆವು. 

ಸಿನಿಮಾದಲ್ಲಿ ಮುಂದುವರಿಯುತ್ತೀರಾ...ಅಥವಾ?

ಇದು ಮೇ 9ಕ್ಕೆ ನಿರ್ಧಾರವಾಗಲಿದೆ. ‘ಸೂತ್ರಧಾರಿ’ಯ ಫಲಿತಾಂಶಕ್ಕೆ ಕಾಯುತ್ತಿದ್ದೇನೆ. ಒಬ್ಬ ಲೀಡ್‌ ನಟನಾಗಿ ಒಂದು ಸಿನಿಮಾವನ್ನು ನಿಲ್ಲಿಸಲು ನನಗೆ ಸಾಮರ್ಥ್ಯವಿದೆಯೇ ಎನ್ನುವುದು ಆಗ ತಿಳಿಯಲಿದೆ. ಒಬ್ಬ ಕಲಾವಿದನಾಗಿ ಶೇಕಡ ನೂರರಷ್ಟು ತನ್ನನ್ನು ತಾನು ತೊಡಗಿಸಿಕೊಂಡು ಸಿನಿಮಾ ಮಾಡಿದ್ದೇನೆ. ಈತ ನಟಿಸಬಲ್ಲ, ನಮಗೆ ಮನರಂಜನೆ ನೀಡಬಲ್ಲ ಎಂದು ಪ್ರೇಕ್ಷಕರು ಒಪ್ಪಿದರೆ ಖಂಡಿತವಾಗಿಯೂ ಮತ್ತಷ್ಟು ಒಳ್ಳೆಯ ಸಿನಿಮಾಗಳನ್ನು ಮಾಡುತ್ತೇನೆ.

‘ಸೂತ್ರಧಾರಿ’ಯ ಪಾತ್ರದ ಬಗ್ಗೆ...

ನಾನು ಅಂಡರ್‌ಕವರ್‌ ಪೊಲೀಸ್‌ ಅಧಿಕಾರಿಯಾಗಿ ನಟಿಸಿದ್ದೇನೆ. ಚಿತ್ರದ ಆರಂಭದಲ್ಲಿ ಈತ ಓರ್ವ ಸೋಮಾರಿ ಪೊಲೀಸ್‌ ಅಧಿಕಾರಿ. ಪ್ರಕರಣಗಳ ತನಿಖೆಗೆ ಬೇಕಾದ ಬುದ್ಧಿವಂತಿಕೆ ಇದ್ದರೂ ಬಳಸದೇ ಇರುವ ಯುವ ಅಧಿಕಾರಿ. ಹೀಗಿರುವಾಗ ಕಾರಣವಿಲ್ಲದೇ ಸರಣಿ ಆತ್ಮಹತ್ಯೆಗಳು ನಡೆಯುತ್ತವೆ. ಇವುಗಳು ಆತ್ಮಹತ್ಯೆಯಲ್ಲ ಕೊಲೆ ಎಂದು ಪತ್ತೆ ಹಚ್ಚುವ ಈತ ಇವುಗಳ ತನಿಖೆ ಆರಂಭಿಸುತ್ತಾನೆ. ಈ ಸಂದರ್ಭದಲ್ಲಿ ಎದುರಾಗುವ ಕಷ್ಟಗಳು, ಗೊಂದಲವೇ ಚಿತ್ರದ ಕಥೆ. 

ಹೊಸಬರನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಿದ್ದಾರೆ?

ಈಗಿನ ಸ್ಥಿತಿಯನ್ನು ನೋಡಿದರೆ ಚಿತ್ರರಂಗದಲ್ಲಿ ಹೊಸಬರಿಗೆ ಹಲವು ಕಷ್ಟಗಳಿವೆ. ಯಾರೂ ಹೊಸಬರನ್ನು ನಂಬಲು ಸಿದ್ಧರಿಲ್ಲ. ಇತ್ತೀಚೆಗೆ ಬಂದ ಹೊಸಬರ ಸಿನಿಮಾಗಳು ಚೆನ್ನಾಗಿವೆ ಎಂಬ ವಿಮರ್ಶೆಗಳು ಬಂದರೂ ಚಿತ್ರಮಂದಿರಕ್ಕೆ ಜನ ಬಂದು ಗೆಲ್ಲಿಸುತ್ತಿಲ್ಲ. ಕನ್ನಡ ಸಿನಿಮಾಗಳನ್ನು ಪ್ರಚಾರ ಮಾಡುವುದಕ್ಕಿಂತ ಹೆಚ್ಚಾಗಿ ನಾವು ಜನ ಸಿನಿಮಾಗಳಿಗೆ ಬರುತ್ತಿಲ್ಲ ಎನ್ನುತ್ತಾ ಓಡಾಡುತ್ತಿದ್ದೇವೆ. ಪದೇ ಪದೇ ಕೇಳಿಬರುವ ಈ ಮಾತು ಜನರ ಮನಸ್ಸಿನಲ್ಲೂ ಅಚ್ಚೊತ್ತಿದೆ. ‘ಕನ್ನಡ ಸಿನಿಮಾಗೆ ಜನ ಬರುತ್ತಿಲ್ಲ, ನಾವೇಕೆ ಹೋಗಬೇಕು’ ಎಂದು ಅವರೇ ನಿರ್ಧರಿಸಿಕೊಂಡುಬಿಟ್ಟಿದ್ದಾರೆ. ಇದು ಭರವಸೆಯನ್ನೂ ಕಸಿದುಕೊಂಡಿದೆ. ಪ್ರತಿಯೊಬ್ಬರ ಮನೆಯಲ್ಲೂ ದೊಡ್ಡ ಟಿ.ವಿಗಳು ಇವೆ. ಅವುಗಳನ್ನೇ ಅವರು ಸಿನಿಮಾ ಪರದೆ ಮಾಡಿಕೊಂಡಿದ್ದಾರೆ. ಈಗಿನ ಸಮಯದಲ್ಲಿ ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ನೋಡುವುದು ಎಂದರೆ ಸಾವಿರಾರು ರೂಪಾಯಿ ಖರ್ಚಿನ ಜೊತೆಗೆ ಒಂದು ಶ್ರಮದ ಕೆಲಸವಾಗಿದೆ. ಅದಕ್ಕಾಗಿ ಸಮಯ ಎತ್ತಿಡಬೇಕಿದೆ. ಪ್ಲ್ಯಾನ್‌ ಮಾಡಿಕೊಂಡು ಸಿನಿಮಾಗೆ ಹೋಗುವ ಸಂದರ್ಭ ಬಂದಿದೆ. ನಾವೊಂದು ಬದಲಾವಣೆಯ ಕಾಲಘಟ್ಟದಲ್ಲಿದ್ದೇವೆ. ಮನರಂಜನೆಗೆ ಈಗ ಹಲವು ವೇದಿಕೆಗಳು ಇವೆ. ಚಿತ್ರಮಂದಿರಗಳು ಒಂದು ವೇದಿಕೆಯಷ್ಟೇ.   

ಮಧ್ಯಮ ಬಜೆಟ್‌ನ ಸಿನಿಮಾಗಳು ಇನ್ನು ಮುಂದೆ ಬಿಡುಗಡೆಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುವುದಕ್ಕಿಂತ ಒಟಿಟಿ ಮೂಲಕ ಪ್ರೇಕ್ಷಕರನ್ನು ತಲುಪುವುದೇ ಒಳ್ಳೆಯದು.  

ಹೊಸ ಪ್ರಾಜೆಕ್ಟ್‌ಗಳು?

‘ಸೂತ್ರಧಾರಿ’ಯ ಫಲಿತಾಂಶ ನೋಡಿಕೊಂಡು ‘ಎಲ್ರ ಕಾಲೆಳೆಯುತ್ತೆ ಕಾಲ’ ಸಿನಿಮಾ ಬಿಡುಗಡೆಯಾಗಲಿದೆ. ಈ ಸಿನಿಮಾವನ್ನು ಒಟಿಟಿಯಲ್ಲೇ ಬಿಡುಗಡೆ ಮಾಡಿ ಎಂದು  ಕೇಳಿಕೊಂಡಿದ್ದೇನೆ. ‘ಮುದ್ದು ರಾಕ್ಷಸಿ’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಇದನ್ನು ಹೊರತುಪಡಿಸಿ ಯಾವ ಸಿನಿಮಾಗಳನ್ನೂ ಒಪ್ಪಿಕೊಂಡಿಲ್ಲ. ಕಥೆಯನ್ನೂ ಕೇಳುತ್ತಿಲ್ಲ.       

ಸಂಗೀತವೇ ನಿಮ್ಮ ಜೀವನ ಈ ದಾರಿಯಲ್ಲಿ...

ಅಂತರರಾಷ್ಟ್ರೀಯ ಮಾರುಕಟ್ಟೆಗೆ ತಲುಪಬೇಕು ಎನ್ನುವ ಉದ್ದೇಶದಿಂದ ಹೊಸ ಹೊಸ ಶೈಲಿಯ ಪ್ರಯೋಗ ಮಾಡುತ್ತಿದ್ದೇನೆ. ನನ್ನ ಹೆಸರೇ ಕನ್ನಡ ರ್‍ಯಾಪರ್‌ ಚಂದನ್‌ ಶೆಟ್ಟಿ. ಹೀಗಾಗಿ ಕನ್ನಡ ಹಾಡಿನ ಮೂಲಕವೇ ಅಂತರರಾಷ್ಟ್ರೀಯ ಮಟ್ಟಕ್ಕೆ ತಲುಪಬೇಕು ಎನ್ನುವ ಗುರಿ ನನ್ನದು. ಪ್ರಚಲಿತ ಮಾರುಕಟ್ಟೆಯಲ್ಲಿ ಯಾವ ಶೈಲಿಯ ಮ್ಯೂಸಿಕ್‌ ಓಡುತ್ತಿದೆಯೋ ಅದೇ ಮಾದರಿಯಲ್ಲಿ ಹಾಡೊಂದನ್ನು ಮಾಡಬೇಕು ಎಂದುಕೊಂಡಿದ್ದೇನೆ. 45 ದಿನಕ್ಕೊಂದು ಹಾಡು ಬಿಡುಗಡೆ ಮಾಡುವ ನಿರ್ಧಾರವನ್ನು ನಾನು ಮಾಡಿದ್ದೇನೆ. ಒಂದು ಹಾಡಿನ ಶೂಟಿಂಗ್‌ ಪೂರ್ಣಗೊಂಡಿದೆ. ಸಂಕಲನಕ್ಕೆ ಕೊಂಚ ಸಮಯ ತೆಗೆದುಕೊಳ್ಳುತ್ತಿದೆ. ಶೀಘ್ರದಲ್ಲೇ ಇದು ಬಿಡುಗಡೆಯಾಗಲಿದೆ. ವರ್ಷಕ್ಕೆ ನನ್ನ ನಾಲ್ಕು ಹಾಡುಗಳು ಬಿಡುಗಡೆಯಾಗಲಿವೆ. ನನಗೆ ಫ್ಯಾನ್ಸ್‌ಗಳು ಇರುವುದೇ ಹಾಡಿಗಾಗಿ. ಎರಡು ವರ್ಷದಲ್ಲಿ ನನಗೆ ಸಿನಿಮಾದಲ್ಲಿ ಸಿಗುವ ಸಂಭಾವನೆ ಮೂರು ಗಂಟೆಯ ಒಂದು ಮ್ಯೂಸಿಕ್‌ ಶೋದಲ್ಲಿ ಸಿಗುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.