ADVERTISEMENT

ನೋಟಕ್ಕಿಂತ ಪಾತ್ರವೇ ಮುಖ್ಯ: ರಿಷಾ ಗೌಡ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 0:00 IST
Last Updated 13 ಆಗಸ್ಟ್ 2025, 0:00 IST
ರಿಷಾ ಗೌಡ
ರಿಷಾ ಗೌಡ   

‘ಆಸ್ಟಿನ್‌ನ ಮಹಾನ್‌ ಮೌನ’ ಚಿತ್ರದಲ್ಲಿ ‘ಜಾಸ್ಮಿನ್‌’ ಆಗಿ ಕಾಣಿಸಿಕೊಳ್ಳುತ್ತಿರುವ ನಟಿ ರಿಷಾ ಗೌಡ ಕೈಯ್ಯಲ್ಲಿ ಸದ್ಯ ಹಲವು ಚಿತ್ರಗಳಿವೆ. ರಂಗಭೂಮಿಯಲ್ಲಿ ನಟನೆ ಕಲಿತು ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲಯೂರುವ ಕನಸು ಕಾಣುತ್ತಿರುವ ಅವರು ತಮ್ಮ ಸಿನಿಪಯಣದ ಕುರಿತು ಮಾತನಾಡಿದ್ದಾರೆ.

‘ತಂದೆ–ಮಗಳ ಸಂಬಂಧವನ್ನು ಹೇಳುವ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. 90ರ ದಶಕದಲ್ಲಿ ತಂದೆ–ಮಕ್ಕಳು ಹೇಗಿದ್ದರು ಎಂಬುದನ್ನು ಪ್ರತಿಬಿಂಬಿಸುವ ಪಾತ್ರ. ಆವತ್ತು ಕೌಟುಂಬಿಕ ವ್ಯವಸ್ಥೆ ಇವತ್ತಿನ ರೀತಿ ಇರಲಿಲ್ಲ. ಅಪ್ಪ ಹಾಕಿದ ಗೆರೆ ದಾಟುವುದು ಬಹಳ ಕಷ್ಟವಿತ್ತು. ಅಂಥದ್ದೊಂದು ಪಾತ್ರವಿದು. ‘ಜಾಸ್ಮಿನ್’ ನನ್ನ ಪಾತ್ರದ ಹೆಸರು. ಅಂದಿನ ಕುಟುಂಬದಲ್ಲಿ ಹೆಣ್ಣುಮಕ್ಕಳನ್ನು ಹೇಗೆ ಬೆಳೆಸುತ್ತಿದ್ದರು, ಕೌಟುಂಬಿಕ ಮೌಲ್ಯಗಳು ಹೇಗಿತ್ತು ಎಂಬಿತ್ಯಾದಿ ಅಂಶಗಳು ಬರುತ್ತವೆ. ತುಂಬಾ ಮುಗ್ಧೆ’ ಎಂದು ಪಾತ್ರ ಪರಿಚಯದೊಂದಿಗೆ ಮಾತು ಪ್ರಾರಂಭಿಸಿದರು. 

ಕೊಡಗಿನವರಾದ ಇವರು ನಟನೆ ಕಲಿತ್ತಿದ್ದು ಮೈಸೂರಿನ ಮೈಮ್‌ ರಮೇಶ್‌ ಅವರ ಗರಡಿಯಲ್ಲಿ ಪಳಗಿದ ರಿಷಾ, ರಂಗಭೂಮಿಯಲ್ಲಿಯೂ ಸಕ್ರಿಯ. ‘ಕ್ರೇಜಿ ಕೀರ್ತಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ನಟನೆ, ನಾಯಕಿ ಎಂದರೆ ತೆರೆ ಮೇಲೆ ಚೆನ್ನಾಗಿ ಕಾಣಿಸಿಕೊಳ್ಳುವುದು ಮಾತ್ರವಲ್ಲ, ವಿಭಿನ್ನವಾದ ಸವಾಲಿನ ಪಾತ್ರಗಳನ್ನು ನಿರ್ವಹಿಸುವುದು ಎನ್ನುವ ಇವರು, ಸದ್ಯ ತೆಲುಗು, ತಮಿಳು ಚಿತ್ರರಂಗಗಳಲ್ಲಿ ಸಕ್ರಿಯರಾಗಿದ್ದಾರೆ. ಧರ್ಮ ಕೀರ್ತಿರಾಜ್‌ ಜತೆ ನಟಿಸಿರುವ ‘ಬೆಂಗಳೂರು ಇನ್‌’ ಚಿತ್ರ ಕೂಡ ಬಿಡುಗಡೆಗೆ ಸಿದ್ಧವಿದೆ.

ADVERTISEMENT

‘2023ರಲ್ಲಿ ಪ್ರಾರಂಭವಾದ ಚಿತ್ರವಿದು. ಬಹುಭಾಗ ಮೈಸೂರಿನಲ್ಲಿ ಚಿತ್ರೀಕರಣಗೊಂಡಿದೆ. ಹೊನ್ನಾವರ, ಚಿಕ್ಕಮಗಳೂರು ಮೊದಲಾದೆಡೆ ಸ್ವಲ್ಪ ಭಾಗ ಚಿತ್ರೀಕರಿಸಿದ್ದೇವೆ. ಕೌಟುಂಬಿಕ ಕಥಾ ಹಂದರ ಹೊಂದಿರುವ ಸಿನಿಮಾ. ಭಾವನಾತ್ಮಕ ಪಯಣ. ಎರಡು ಭಿನ್ನ ಕುಟುಂಬಗಳ ಕಥೆಯೇ ಚಿತ್ರದ ಜೀವಾಳ’ ಎನ್ನುತ್ತಾರೆ.

‘ಪ್ರಮೋದ್‌ ಶೆಟ್ಟಿ ನಿರ್ಮಿಸಿ, ನಟಿಸುತ್ತಿರುವ ‘ಪರಾಕ್ರಮಿ’ ಚಿತ್ರದಲ್ಲಿ ನಟಿಸುತ್ತಿರುವೆ. ಸದ್ಯ ‘ಕಾಂತಾರ–1’ ಚಿತ್ರದಿಂದ ಚಿತ್ರೀಕರಣ ನಿಂತಿತ್ತು. ಈಗ ಮತ್ತೆ ಚಿತ್ರೀಕರಣ ಪ್ರಾರಂಭವಾಗಲಿದೆ. ಈ ಚಿತ್ರ ಕೂಡ ಈ ವರ್ಷ ಡಿಸೆಂಬರ್‌ಗೆ ತೆರೆಗೆ ಬರಬಹುದು. ಈ ವರ್ಷ ನನ್ನ ಮೂರು ಸಿನಿಮಾಗಳು ತೆರೆ ಕಾಣಲಿವೆ. ‘ಮಿಸಸ್‌ ಕರ್ನಲ್‌’ ಎಂಬ ತೆಲುಗು ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ತಮಿಳಿನ ಇನ್ನೂ ಹೆಸರಿಡದ ಚಿತ್ರದಲ್ಲಿ ನಟಿಸುತ್ತಿದ್ದು, ಇನ್ನೊಂದು ಹಂತದ ಚಿತ್ರೀಕರಣ ಬಾಕಿಯಿದೆ. ನಟನೆಗೆ ಬಂದು ನಾಲ್ಕು ವರ್ಷಗಳು ಕಳೆಯಿತು. ಈತನಕ ಒಟ್ಟು 12 ಚಿತ್ರಗಳಲ್ಲಿ ನಟಿಸಿದ್ದೇನೆ. ಬಹುತೇಕ ಚಿತ್ರಗಳು ಇನ್ನಷ್ಟೇ ಬಿಡುಗಡೆಗೊಳ್ಳಬೇಕಿವೆ. ಇತ್ತೀಚೆಗೆ ತೆರೆಕಂಡ ‘ಜೂನಿಯರ್‌’ ಚಿತ್ರದಲ್ಲಿಯೂ ಒಂದು ಸಣ್ಣ ಪಾತ್ರ ಮಾಡಿರುವೆ’ ಎಂದು ತಮ್ಮ ಸಿನಿಪಯಣವನ್ನು ತೆರೆದಿಟ್ಟರು.

‘ನಾನು ಮುಖ್ಯವಾಗಿ ಪಾತ್ರ ಏನೆಂದು ಕೇಳುತ್ತೇನೆ. ಕಂಟೆಂಟ್‌ ಮುಖ್ಯ. ತೆರೆ ಮೇಲೆ ಗ್ಲಾಮರ್‌ ಆಗಿ ಕಾಣಿಸಿಕೊಳ್ಳುವುದರಿಂದ ಉದ್ಯಮದಲ್ಲಿ ಹೆಚ್ಚು ಕಾಲ ನೆಲೆ ನಿಲ್ಲಲ್ಲು ಸಾಧ್ಯವಿಲ್ಲ. ಪಾತ್ರ ಬಯಸಿದರೆ ಡೀಗ್ಲಾಮರ್‌ ಆಗಿಯೂ ಕಾಣಿಸಿಕೊಳ್ಳಬೇಕು. ಉದಾಹರಣೆಗೆ ‘ಸಪ್ತಸಾಗರದಾಚೇ ಎಲ್ಲೋ’ ಚಿತ್ರದಲ್ಲಿ ಚೈತ್ರಾ ಜೆ.ಆಚಾರ್‌ ನಿಭಾಯಿಸಿದ ಪಾತ್ರ. ಆ ಪಾತ್ರಕ್ಕೆ ಅವರೇ ಸೂಕ್ತ ಎನ್ನಿಸುವಂತಿದೆ. ನನಗೆ ನೋಟಕ್ಕಿಂತ ಪಾತ್ರವೇ ಮುಖ್ಯ. ಪಾತ್ರದಲ್ಲಿ ಸವಾಲು ಎಷ್ಟಿದೆ, ಪಾತ್ರಕ್ಕೆ ಮಹತ್ವ ಏನಿದೆ ಎಂಬುದನ್ನು ನೋಡುತ್ತೇನೆ. ಜನರ ಮನಸಿನಲ್ಲಿ ಉಳಿಯುವ ಪಾತ್ರಗಳನ್ನು ಮಾಡಬೇಕು. ಇಲ್ಲವಾದಲ್ಲಿ ಇವತ್ತಿನ ಸ್ಪರ್ಧೆಯಲ್ಲಿ ಚಿತ್ರೋದ್ಯಮದಲ್ಲಿ ಉಳಿದುಕೊಳ್ಳುವುದು ಸುಲಭವಲ್ಲ’ ಎಂಬುದು ಅವರ ಅಭಿಮತ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.