ಸಾಲು, ಸಾಲು ದೊಡ್ಡ ಸಿನಿಮಾಗಳನ್ನು ನಿರ್ಮಿಸುತ್ತಿರುವ ಹೊಂಬಾಳೆ ಫಿಲಂಸ್, ಕಿಚ್ಚ ಸುದೀಪ್ ಅವರೊಂದಿಗೆ ಹೊಸ ಸಿನಿಮಾ ಘೋಷಿಸುವುದು ಖಚಿತವಾಗಿದೆ. ಸುದೀಪ್ ಅವರನ್ನು ಭೇಟಿ ಮಾಡಿರುವ ಹೊಂಬಾಳೆ ಕಾರ್ತೀಕ್ ಗೌಡ, ಅವರ ಜೊತೆಗಿನ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸುದೀಪ್ ಸರ್ ಅವರ ಜೊತೆಗೆ ಹೊಸ ಆರಂಭ ಎಂದು ಟ್ವೀಟ್ ಮಾಡಿದ್ದಾರೆ.
ಈ ಹಿಂದೆಯೇ ಹೊಂಬಾಳೆ–ಸುದೀಪ್ ಜೊತೆಯಾಗಿ ಸಿನಿಮಾ ಬರಬೇಕಿತ್ತು. ಈ ಸಂಬಂಧ ನಿರ್ಮಾಣ ಸಂಸ್ಥೆ ಸುದೀಪ್ ಕಾಲ್‌ಶೀಟ್ ಅನ್ನು ತೆಗೆದುಕೊಂಡಿತ್ತು. ಆದರೆ ಸುದೀಪ್ ಡೇಟ್ ಸಿಕ್ಕಿರಲಿಲ್ಲ. ಹಾಗಾಗಿ ಸಿನಿಮಾ ಬಾಕಿ ಉಳಿದಿತ್ತು ಎನ್ನುತ್ತಿವೆ ಮೂಲಗಳು.
ಕಾಂತಾರದ ದೊಡ್ಡ ಯಶಸ್ಸಿನ ಬಳಿಕ ರಿಷಭ್ ಶೆಟ್ಟಿ ಸುದೀಪ್‌ಗೆ ಆಕ್ಷನ್–ಕಟ್ ಹೇಳುತ್ತಾರಾ ಎಂಬ ಪ್ರಶ್ನೆಗಳು ಮೂಡಿವೆ. ಆದರೆ ಮೂಲಗಳ ಪ್ರಕಾರ ರಿಷಭ್ ಬೆಲ್‌ಬಾಟಂ–2 ಮುಗಿಯುವವರೆಗೂ ಹೊಸತೇನೂ ಒಪ್ಪಿಕೊಳ್ಳುತ್ತಿಲ್ಲ. ಸುದೀಪ್ ಕೂಡ ತಮಿಳಿನಲ್ಲಿ ನಿರ್ದೇಶಕ ವೆಂಕಟ್ ಪ್ರಭು ಅವರ ಚಿತ್ರ ಮುಗಿಸಿ ಬರಬೇಕು. ಅದಾದ ಬಳಿಕ ಹೊಂಬಾಳೆಯೊಂದಿಗಿನ ಸಿನಿಮಾ ಸೆಟ್ಟೇರಲಿದೆ. ಆ ವೇಳೆಗೆ ರಿಷಭ್ ಶೆಟ್ಟಿ ಕೂಡ ಸಮಯ ಮಾಡಿಕೊಂಡು ಬರಬಹುದು ಎನ್ನಲಾಗುತ್ತಿದೆ. ಸುದೀಪ್ ಜೊತೆ ಆಪ್ತವಾಗಿರುವ ರಿಷಭ್, ಈ ಹಿಂದೆ ಸುದೀಪ್ ಅವರಿಗೆ ಸಿನಿಮಾವೊಂದನ್ನು ಮಾಡುವ ಇರಾದೆ ವ್ಯಕ್ತಪಡಿಸಿದ್ದರು.
ಇನ್ನೊಂದೆಡೆ ‘ವಿಕ್ರಾಂತ್ ರೋಣ’ ಬಳಿಕ ಅನೂಪ್ ಭಂಡಾರಿ ನಿರ್ದೇಶನದಲ್ಲಿಯೇ ಸುದೀಪ್ ಮುಂದಿನ ಚಿತ್ರ ಎಂಬ ಮಾತುಗಳಿತ್ತು. ಆದರೆ ಆ ಚಿತ್ರವೇ ಹೊಂಬಾಳೆ ಫಿಲಂಸ್‌ನಿಂದ ನಿರ್ಮಾಣಗೊಳ್ಳುತ್ತಿದೆ ಎಂಬುದು ಖಾತ್ರಿಯಾಗಿಲ್ಲ. ಬಾಲಿವುಡ್‌ನ ಜನಪ್ರಿಯ ನಿರ್ದೇಶಕರೊಬ್ಬರು ಸುದೀಪ್‌ಗೆ ಜೊತೆಯಾಗಬಹುದು ಎಂಬ ಸುದ್ದಿ ಕೂಡ ಕೇಳಿಬಂದಿದೆ. ಹೀಗಾಗಿ ಚಿತ್ರದ ನಿರ್ದೇಶಕರ್ಯಾರು? ಕಥೆ ಏನು ಎಂಬಿತ್ಯಾದಿ ಸಂಗತಿಗಳು ಇನ್ನಷ್ಟೇ ತಿಳಿದುಬರಬೇಕಿದೆ.
ಕೆಜಿಎಫ್–2 ಚಿತ್ರದ ನಂತರ ಕಾಂತಾರ ಹೊಂಬಾಳೆಗೆ ಅತ್ಯಂತ ಯಶಸ್ವಿ ಚಿತ್ರವಾಗಿದೆ. ಪ್ರಭಾಸ್ ನಟನೆಯ ಸಲಾರ್ ಚಿತ್ರ ಮುಂದಿನ ವರ್ಷ ಬಿಡುಗಡೆಗಿದೆ. ಲೂಸಿಯಾ ಪವನ್ ನಿರ್ದೇಶನದಲ್ಲಿ ಮಲಯಾಳದಲ್ಲಿ ಫಹಾದ್ ಫಾಸಿಲ್‌ಗೆ ಧೂಮಂ ಚಿತ್ರವನ್ನು ಘೋಷಿಸಿದೆ. ಸಂತೋಷ್ ಆನಂದ್‌ರಾಮ್ ನಿರ್ದೇಶಿಸಿ, ಜಗ್ಗೇಶ್ ನಟಿಸಿರುವ ರಾಘವೇಂದ್ರ ಸ್ಟೋರ್ಸ್ ಬಿಡುಗಡೆಗೆ ಸಿದ್ಧವಾಗಿದೆ. ರಕ್ಷಿತ್ ಶೆಟ್ಟಿ ಜೊತೆಗೆ ರಿಚರ್ಡ್ ಆಂಟನಿ ಸಿನಿಮಾ ಘೋಷಿಸಿದೆ. ಡಾಲಿ ಧನಂಜಯ್ ಜೊತೆಗೆ ಹೊಂಬಾಳೆ-ಕೆಆರ್‌ಜಿ ನಿರ್ಮಾಣದ 5 ಸಿನಿಮಾಗಳಿಗೆ ಸಹಿ ಹಾಕಿದೆ ಎನ್ನಲಾಗುತ್ತಿದೆ. ಕನ್ನಡದ ದೊಡ್ಡ ನಾಯಕರು, ದೊಡ್ಡ ನಿರ್ದೇಶಕರನ್ನು ಹೊಂಬಾಳೆ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ.
ಕೆಜಿಎಫ್ ಹೊಂಬಾಳೆಗೆ ದೊಡ್ಡ ಯಶಸ್ಸು ನೀಡಿದ ಚಿತ್ರ. ಹೀಗಾಗಿ ಯಶ್‌ಗೆ ಕೆಜಿಎಫ್–3 ಮಾಡುತ್ತಾರೆ ಎಂಬ ಸುದ್ದಿ ಸಹಜವಾಗಿತ್ತು. ಆದರೆ ಸದ್ಯ ಯಶ್ ಕೆಜಿಎಫ್‌ನ ಇನ್ನೊಂದು ಭಾಗಕ್ಕೆ ಆಲೋಚಿಸಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ಸುದೀಪ್ ಜೊತೆಗಿನ ಚಿತ್ರ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.