
ರಿಷಬ್ ಶೆಟ್ಟಿ
ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘45‘ ಸಿನಿಮಾದ ಟ್ರೇಲರ್ ಇಂದು ಸಂಜೆ 6.45ಕ್ಕೆ ಬಿಡುಗಡೆಯಾಗುತ್ತಿದೆ. ಇದಕ್ಕೂ ಮೊದಲು ನಟ ರಿಷಬ್ ಶೆಟ್ಟಿ ಅವರು 45 ಸಿನಿಮಾದ ಟ್ರೇಲರ್ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸೂರಜ್ ಪ್ರೊಡಕ್ಷನ್ ಆಫೀಶಿಯಲ್ ವಿಡಿಯೊ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಅದರಲ್ಲಿ ನಟ ರಿಷಬ್ ಶೆಟ್ಟಿ ಅವರು ರಾಜ್ ಬಿ ಶೆಟ್ಟಿ ಹೆಸರು ಉಲ್ಲೇಖಿಸದೇ 45 ಸಿನಿಮಾಗೆ ಶುಭಕೋರಿದ್ದಾರೆ.
ವಿಡಿಯೊದಲ್ಲಿ ರಿಷಬ್ ಶೆಟ್ಟಿ ಹೇಳಿದ್ದೇನು?
‘ನನ್ನ ಮೊದಲ ನಿರ್ದೇಶನದ ಮೊದಲ ಸಂಗೀತ ನಿರ್ದೇಶಕರು ಅರ್ಜುನ್ ಮಾಡಿರುವಂತಹ ಮೊದಲ ಸಿನಿಮಾ. ನಿರ್ದೇಶಕರಾಗಿ ಸಿನಿಮಾ ಮಾಡಬೇಕಾದರೆ ಅನೇಕ ಕಾಳಜಿ ಇರುತ್ತದೆ. ಯಾವ ತರಹದ ಕಥೆ? ಎಷ್ಟು ದೊಡ್ಡ ಮಟ್ಟದಲ್ಲಿ ಮಾಡಬೇಕು? ಎಂಬುವುದರ ಬಗ್ಗೆ ಪ್ಲಾನಿಂಗ್ ಇರುತ್ತದೆ. ಈಗ ಸಿನಿಮಾ ಮುಕ್ತಾಯಗೊಳಿಸಿದ್ದಾರೆ. ಈಗ ತಾನೆ ಸಿನಿಮಾದ ಟ್ರೇಲರ್ ನೋಡಿದೆ. 45 ಸಿನಿಮಾದ ಟ್ರೇಲರ್ ಅದ್ಭುತವಾಗಿ ಮೂಡಿಬಂದಿದೆ. ನನ್ನ ಫೇವರೆಟ್‌ಗಳಾದ ಶಿವಣ್ಣ ಹಾಗೂ ಉಪ್ಪಿ ಸರ್ ಅವರಿಬ್ಬರ ಅಭಿನಯದಲ್ಲಿ ಸಿನಿಮಾ ಮೂಡಿ ಬಂದಿದೆ’.
‘ಉಪೇಂದ್ರ ಸರ್ ಹಾಗೂ ಶಿವಣ್ಣ ಇಬ್ಬರ ಪಾತ್ರಗಳೂ ಕೂಡ ತುಂಬಾ ಅದ್ಭುತವಾಗಿ ಮೂಡಿಬಂದಿವೆ. ಅವರನ್ನು ದೊಡ್ಡ ಪರದೆ ಮೇಲೆ ನೋಡುವುದೇ ಒಂದು ಮಜಾ. ಸಿನಿಮಾ ಕೂಡ ಅಷ್ಟೇ ಅದ್ಭುತವಾಗಿ ಮೂಡಿಬಂದಿದೆ ಅಂತ ಅಂದ್ಕೋತೀನಿ. ಯಾಕೆ ಅಂದ್ರೆ, ಟ್ರೇಲರ್ ಹೇಳುತ್ತಿದೆ ಇದು ಯಾವ ಥರದ ಕಥೆಯನ್ನು ಹೇಳಿತ್ತಿದೆ ಅಂತ. ತುಂಬಾ ಮಾಸ್ ಆಗಿ, ತುಂಬಾ ವಿಚಾರ ಇಟ್ಟುಕೊಂಡು ಮೂಡಿಬಂದಿದೆ ಅನ್ನೋ ಅನುಭವ ಆಯ್ತು. 45 ಸಿನಿಮಾ ನೋಡಿ, ಇಡೀ ತಂಡಕ್ಕೆ ಆಶೀರ್ವದಿಸಿ ಅಂತ ನಾನು ಕೇಳ್ಕೋತೀನಿ' ಎಂದಿದ್ದಾರೆ.
ಇನ್ನು, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನದ ಮೊದಲ ಸಿನಿಮಾ ಇದಾಗಿದ್ದು, ಸೂರಜ್ ಪ್ರೊಡಕ್ಷನ್ ಲಾಂಛನದಲ್ಲಿ ರಮೇಶ್ ರೆಡ್ಡಿ ಅವರು ನಿರ್ಮಿಸಿದ್ದಾರೆ. ಕನ್ನಡದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಇದೇ ಡಿಸೆಂಬರ್ 25ರ ಕ್ರಿಸ್‌ಮಸ್ ದಿನದಂದು ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಇಂದು (ಡಿಸೆಂಬರ್ 15) ಸಂಜೆ 6.45ಕ್ಕೆ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಏಕಕಾಲಕ್ಕೆ ಏಳು ಜಿಲ್ಲೆಯಲ್ಲಿ 45 ಸಿನಿಮಾದ ಟ್ರೇಲರ್ ಬಿಡುಗಡೆಯಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.