ADVERTISEMENT

ರಾಬರ್ಟ್‌ ಬಿಡುಗಡೆ ಟಾಲಿವುಡ್‌ನಲ್ಲೂ ಸರಾಗ

​ಪ್ರಜಾವಾಣಿ ವಾರ್ತೆ
Published 31 ಜನವರಿ 2021, 15:32 IST
Last Updated 31 ಜನವರಿ 2021, 15:32 IST
ಚೆನ್ನೈನಲ್ಲಿ ಭಾನುವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್‌. ಜೈರಾಜ್‌ (ಎಡದಿಂದ ಮೂರನೇಯವರು) ಅವರು ರಾಬರ್ಟ್ ಚಿತ್ರ ಬಿಡುಗಡೆಗೆ ತೆಲುಗು ಚಿತ್ರರಂಗದ ನಿರ್ಬಂಧ ತೆರವುಗೊಳಿಸುವಂತೆ ಭಾರತೀಯ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕಾಟ್ರಗಡ ಪ್ರಸಾದ್‌ (ಬಲದಿಂದ ಎರಡನೇಯವರು) ಮತ್ತು ತೆಲಂಗಾಣ ಸಿನಿಮಾ ನಿರ್ಮಾಪಕರ ಮಂಡಳಿ ಅಧ್ಯಕ್ಷ ಸಿ. ಕಲ್ಯಾಣ್ (ಎಡದಿಂದ ಮೊದಲನೇಯವರು) ಅವರಿಗೆ ಮನವಿ ಸಲ್ಲಿಸಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಎನ್‌.ಎಂ. ಸುರೇಶ್‌, ದಕ್ಷಿಣ ಭಾರತೀಯ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಥಾಮಸ್ ಡಿಸೋಜ ಇದ್ದಾರೆ.
ಚೆನ್ನೈನಲ್ಲಿ ಭಾನುವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್‌. ಜೈರಾಜ್‌ (ಎಡದಿಂದ ಮೂರನೇಯವರು) ಅವರು ರಾಬರ್ಟ್ ಚಿತ್ರ ಬಿಡುಗಡೆಗೆ ತೆಲುಗು ಚಿತ್ರರಂಗದ ನಿರ್ಬಂಧ ತೆರವುಗೊಳಿಸುವಂತೆ ಭಾರತೀಯ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕಾಟ್ರಗಡ ಪ್ರಸಾದ್‌ (ಬಲದಿಂದ ಎರಡನೇಯವರು) ಮತ್ತು ತೆಲಂಗಾಣ ಸಿನಿಮಾ ನಿರ್ಮಾಪಕರ ಮಂಡಳಿ ಅಧ್ಯಕ್ಷ ಸಿ. ಕಲ್ಯಾಣ್ (ಎಡದಿಂದ ಮೊದಲನೇಯವರು) ಅವರಿಗೆ ಮನವಿ ಸಲ್ಲಿಸಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಎನ್‌.ಎಂ. ಸುರೇಶ್‌, ದಕ್ಷಿಣ ಭಾರತೀಯ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಥಾಮಸ್ ಡಿಸೋಜ ಇದ್ದಾರೆ.   

ಬೆಂಗಳೂರು: ದರ್ಶನ್ ನಟನೆಯ ಬಹು ನಿರೀಕ್ಷೆಯ ‘ರಾಬರ್ಟ್’ಚಿತ್ರದ ಬಿಡುಗಡೆಗೆ ತೆಲುಗು ಚಿತ್ರರಂಗದಲ್ಲಿ ಎದುರಾಗಿದ್ದ ನಿರ್ಬಂಧವನ್ನು ನಿವಾರಿಸುವುದಾಗಿ ದಕ್ಷಿಣ ಭಾರತೀಯ ಚಲನಚಿತ್ರ ವಾಣಿಜ್ಯ ಮಂಡಳಿ ಆಶ್ವಾಸನೆ ನೀಡಿದೆ. ‘ರಾಬರ್ಟ್‌’ ಚಿತ್ರವನ್ನು ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡುವ ಚಿತ್ರ ತಂಡದ ಹಾದಿ ಸುಗಮವಾದಂತಾಗಿದೆ.

ಮಾರ್ಚ್‌ 11ರಂದು ಕನ್ನಡ ಮತ್ತು ತೆಲುಗಿನಲ್ಲಿ ‌ಏಕಕಾಲಕ್ಕೆ ‘ರಾಬರ್ಟ್‌’ ಬಿಡುಗಡೆ ಮಾಡುವುದಾಗಿ ಚಿತ್ರ ತಂಡ ಪ್ರಕಟಿಸಿದ ನಂತರ, ಇದಕ್ಕೆ ಆಂಧ್ರಪ್ರದೇಶದಲ್ಲಿ ತೆಲುಗು ಚಿತ್ರರಂಗದಿಂದ ವಿರೋಧ ವ್ಯಕ್ತವಾಗಿತ್ತು. ಅದೇ ದಿನ ತೆಲುಗಿನ ಎರಡು ಚಿತ್ರಗಳು ಬಿಡುಗಡೆಯಾಗುತ್ತಿರುವ ಕಾರಣಕ್ಕೆ ತೆಲುಗು ಆವೃತ್ತಿಯ ‘ರಾಬರ್ಟ್‌’ ಚಿತ್ರ ಬಿಡುಗಡೆಗೆ ಆಂಧ್ರದಲ್ಲಿ ಅವಕಾಶ ಕೊಡಬಾರದೆಂದು ನಿರ್ಧಾರ ತೆಗೆದುಕೊಳ್ಳಲಾಗಿತ್ತು. ತೆಲುಗು ಚಿತ್ರರಂಗದ ಈ ನಿರ್ಧಾರದಿಂದ ‘ರಾಬರ್ಟ್‌’ ಚಿತ್ರತಂಡ ಆತಂಕಕ್ಕೆ ಒಳಗಾಗಿತ್ತು. ನಟ ದರ್ಶನ್‌ ಕೂಡ ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ ಈ ಸಂಬಂಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಭಾನುವಾರ ಚೆನ್ನೈಗೆ ತುರ್ತು ಭೇಟಿ ನೀಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್‌. ಜೈರಾಜ್‌ ಮತ್ತು ಪದಾಧಿಕಾರಿಗಳು, ದಕ್ಷಿಣ ಭಾರತೀಯ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ‘ರಾಬರ್ಟ್‌’ ಚಿತ್ರ ತಂಡದ ದೂರನ್ನು ಮಂಡಳಿಯ ಗಮನಕ್ಕೆ ತಂದು, ಚಿತ್ರ ಬಿಡುಗಡೆಗೆ ಎದುರಾಗಿದ್ದ ಅಡ್ಡಿ ನಿವಾರಿಸುವಂತೆ ಮನವರಿಕೆ ಮಾಡಿಕೊಟ್ಟರು. ಭವಿಷ್ಯದಲ್ಲೂ ಕನ್ನಡದ ಯಾವುದೇ ಚಿತ್ರಗಳ ಬಿಡುಗಡೆಗೆ ಅಡಚಣೆಯಾಗದಂತೆ ಸಂಪೂರ್ಣ ಸಹಕಾರ ನೀಡಬೇಕೆಂದು ವಿನಂತಿಸಿದರು.

ADVERTISEMENT

ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿರುವ ದಕ್ಷಿಣ ಭಾರತೀಯ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕಾಟ್ರಗಡ ಪ್ರಸಾದ್‌ ಮತ್ತು ತೆಲಂಗಾಣ ಸಿನಿಮಾ ನಿರ್ಮಾಪಕರ ಮಂಡಳಿ ಅಧ್ಯಕ್ಷ ಸಿ. ಕಲ್ಯಾಣ್ ಅವರು ‘ಈಗಾಗಲೇ ಚಿತ್ರ ವಿತರಕರು ಮತ್ತು ಪ್ರದರ್ಶಕರೊಂದಿಗೆ ಒಂದು ಸುತ್ತಿನ ಚರ್ಚೆ ನಡೆಸಿದ್ದೇವೆ. ಚಿತ್ರಮಂದಿರಗಳನ್ನು ಗೊತ್ತುಪಡಿಸಿಕೊಳ್ಳುವುದು ನಿರ್ಮಾಪಕರ ಜವಾಬ್ದಾರಿ. ಆಂಧ್ರ ಮತ್ತು ತೆಲಂಗಾಣದಲ್ಲಿ ಚಿತ್ರ ಬಿಡುಗಡೆಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. ದಕ್ಷಿಣ ಭಾರತದಲ್ಲಿ ನಾಲ್ಕು ಭಾಷಿಗರು ಸಹೋದರರಂತೆ ಇದ್ದೇವೆ. ನಾಲ್ಕು ಭಾಷಿಗ ಚಿತ್ರೋದ್ಯಮಗಳನ್ನೂ ಸಹೋದರತ್ವದಿಂದಲೇ ಮುನ್ನಡೆಸಿಕೊಂಡು ಹೋಗೋಣ’ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳಿಗೆ ಆಶ್ವಾಸನೆ ನೀಡಿದ್ದಾರೆ.

ಜಯರಾಜ್ ನೇತೃತ್ವದಲ್ಲಿ ಮಂಡಳಿಯ ಕಾರ್ಯದರ್ಶಿ ಎನ್.ಎಂ. ಸುರೇಶ್, ದಕ್ಷಿಣ ಭಾರತೀಯ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಥಾಮಸ್ ಡಿಸೋಜ, ಪ್ರದರ್ಶಕರ ವಿಭಾಗದ ಅಧ್ಯಕ್ಷ ಬಾಬ್‌ ಜೀ, ಕಾರ್ಯದರ್ಶಿ ನರಸಿಂಹಲು, ನಿರ್ಮಾಪಕ ಕೆ.ಸಿ.ಎನ್‌. ಚಂದ್ರಶೇಖರ್‌ ಚೆನ್ನೈಗೆ ಹೋಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.