
ರೋಶಿನಿ ಪ್ರಕಾಶ್
‘ಕವಲುದಾರಿ’, ‘ಮರ್ಫಿ’ ಚಿತ್ರಗಳ ಮೂಲಕ ಗಮನ ಸೆಳೆದ ನಟಿ ರೋಶಿನಿ ಪ್ರಕಾಶ್, ಸುದೀಪ್ ನಟನೆಯ ‘ಮಾರ್ಕ್’ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಡಿ.25ರಂದು ತೆರೆಗೆ ಬರುತ್ತಿರುವ ಚಿತ್ರ ಹಾಗೂ ತಮ್ಮ ಪಾತ್ರದ ಕುರಿತು ಅವರು ಮಾತನಾಡಿದ್ದಾರೆ.
‘ಪಾತ್ರದ ಬಗ್ಗೆ ಹೆಚ್ಚು ಹೇಳುವಂತಿಲ್ಲ. ಸುದೀಪ್ ಅವರ ಜತೆ ಇರುವ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಾವೆಲ್ಲ ಸೇರಿ ಒಂದು ಪ್ರಕರಣ ಬಗೆಹರಿಸುತ್ತೇವೆ. ಆ ಪ್ರಕರಣ ಏನು, ಅದರ ಹಿನ್ನೆಲೆ ಏನು ಎಂಬುದೇ ಕಥೆ. ‘ಮ್ಯಾಕ್ಸ್’ನಲ್ಲಿ ಸುದೀಪ್ ಅವರ ಜತೆಗಿದ್ದ ಮಹಿಳಾ ಪೊಲೀಸ್ ರೀತಿಯ ಪಾತ್ರವಲ್ಲ. ಪಾತ್ರ ಪೋಷಣೆ ಅದಕ್ಕಿಂತ ಭಿನ್ನವಾಗಿದೆ. ಮಫ್ತಿಯಲ್ಲಿರುವ ಅಧಿಕಾರಿಗಳು, ಆದರೆ ಸಮವಸ್ತ್ರ ಧರಿಸಿರುವುದಿಲ್ಲ’ ಎಂದು ತಮ್ಮ ಪಾತ್ರ ಪರಿಚಯಿಸಿಕೊಂಡರು ರೋಶಿನಿ.
‘ಸಿನಿಮಾದುದ್ದಕ್ಕೂ ಬರುವ ಪಾತ್ರ. ಕಥೆಗೆ ಎಷ್ಟು ಅಗತ್ಯವೋ ಅಷ್ಟು ಬರುತ್ತದೆ. ಇಡೀ ಚಿತ್ರದಲ್ಲಿ ಈ ಪಾತ್ರಕ್ಕೆ ಶೇಕಡ 30ರಷ್ಟು ಇರಬಹುದು. ನಾನು ಹೆಚ್ಚಾಗಿ ಮಾಡಿದ್ದು ಕಂಟೆಂಟ್ ಸಿನಿಮಾಗಳನ್ನು. ಆದರೆ ಕೇವಲ ಕಂಟೆಂಟ್ ಸಿನಿಮಾಗಳನ್ನು ಮಾಡಿದರೆ ಹೆಚ್ಚು ಜನರನ್ನು ತಲುಪಲು ಸಾಧ್ಯವಿಲ್ಲ. ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸಿದರೆ ನಮ್ಮನ್ನು ಗುರುತಿಸುವುದು ಹೆಚ್ಚಾಗುತ್ತದೆ’ ಎಂದರು.
‘ನಾವೆಲ್ಲ ಸುದೀಪ್ ಅವರ ಸಿನಿಮಾಗಳನ್ನು ನೋಡಿಕೊಂಡು ಬೆಳೆದವರು. ಅವರಂಥವರ ಜತೆ ನಟಿಸುವ ಅವಕಾಶ ಸಿಕ್ಕಿದ್ದು ನನ್ನ ಸಿನಿಪಯಣದ ಗ್ರಾಫ್ ಬದಲಿಸುವ ಅವಕಾಶ. ಇಲ್ಲಿ ಸಾಕಷ್ಟು ಕಲಿತಿದ್ದೇನೆ. ಸಿನಿಮಾ ಕುರಿತಾಗಿ ಸುದೀಪ್ ಅವರ ಪ್ರೀತಿ, ಬದ್ಧತೆ ಎಷ್ಟಿದೆ ಎಂಬುದು ಗೊತ್ತಾಯಿತು. ಅವರ ಕೆಲಸ ವೈಖರಿಯನ್ನು ಕಣ್ಣಾರೆ ನೋಡುವ ಅವಕಾಶ ಲಭಿಸಿತು. ಸತ್ಯಜ್ಯೋತಿ ಫಿಲ್ಮ್ಸ್ ತಮಿಳಿನ ಬಹುದೊಡ್ಡ ನಿರ್ಮಾಣ ಸಂಸ್ಥೆ. ಅಂಥ ಸಂಸ್ಥೆಯ ಜತೆ ಕೆಲಸ ಮಾಡುವುದು ಒಂದು ಅನನ್ಯ ಅನುಭವ’ ಎಂಬುದು ಅವರ ಅಭಿಮತ.
‘ನನ್ನ ಹಿಂದಿನ ಸಿನಿಮಾ ‘ಮರ್ಫಿ’ ಸಾಕಷ್ಟು ಜನಪ್ರಿಯತೆ ನೀಡಿತು. ಈಗ ಜನ ಎಲ್ಲ ಕಡೆ ಆ ಚಿತ್ರದ ಪಾತ್ರದಿಂದ ಗುರುತಿಸಿ ಮಾತನಾಡಿಸುತ್ತಾರೆ. ಅಷ್ಟರಮಟ್ಟಿಗೆ ಸಿನಿಮಾ ತಲುಪಿದೆ. ಅದರಿಂದಲೇ ನನಗೆ ಸಾಕಷ್ಟು ಅವಕಾಶಗಳು ಬರುತ್ತಿವೆ. ‘ನಾಕುತಂತಿ’ ಎಂಬ ನಾಲ್ಕು ಭಿನ್ನ ಹೆಣ್ಣುಮಕ್ಕಳ ಕಥೆ ಹೊಂದಿರುವ ಚಿತ್ರದಲ್ಲಿ ಒಂದು ಕಥೆಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದೇನೆ. ಗೌತಮ್ ನಿರ್ದೇಶನದ ಚಿತ್ರ ಶೀಘ್ರದಲ್ಲಿ ತೆರೆಗೆ ಬರಲಿದೆ. ಬೇರೆ ಎರಡು ಸಿನಿಮಾಗಳು ಮಾತುಕತೆ ಹಂತದಲ್ಲಿವೆ. ಈ ವರ್ಷ ನನಗೆ ಅತ್ಯಂತ ಯಶಸ್ಸು ನೀಡಿದ ವರ್ಷ. ಇನ್ನಷ್ಟು ಒಳ್ಳೊಳ್ಳೆ ಸಿನಿಮಾಗಳನ್ನು ಮಾಡುವ ಬಯಕೆಯಿದೆ. ಆ ನಿಟ್ಟಿನಲ್ಲಿ ಅವಕಾಶಗಳನ್ನು ಎದುರು ನೋಡುತ್ತಿರುವೆ’ ಎಂದು ಮಾತಿಗೆ ವಿರಾಮವಿತ್ತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.