ADVERTISEMENT

ಪೋಸ್ಟರ್‌ ವೈರಲ್‌: ರೌದ್ರ, ರುಧಿರ, ರಣ ಕಥೆಯ ಅನಾವರಣವೇ ರಾಜಮೌಳಿಯ 'RRR'

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2020, 7:29 IST
Last Updated 27 ಮಾರ್ಚ್ 2020, 7:29 IST
   

ಹೈದರಾಬಾದ್‌: ಎಸ್.ಎಸ್. ರಾಜಮೌಳಿ ಅವರು ‘ಬಾಹುಬಲಿ’ ಸಿನಿಮಾದ ಬಳಿಕ ‘ಆರ್‌ಆರ್‌ಆರ್‌’ ಚಿತ್ರ ಘೋಷಿಸಿದ ದಿನದಿಂದಲೂ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿತ್ತು. ಇದೀಗ ಆರ್‌ಆರ್‌ಆರ್‌ ಸಿನಿಮಾ ಆಗ್ನಿ ಮತ್ತು ಜಲದ ಕಥೆ ಎಂಬುದು ಗೊತ್ತಾಗಿದೆ.

ಹೌದು, ಚಿತ್ರದ ಮೋಷನ್‌ ಪೋಸ್ಟರ್‌ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಆಗ್ನಿ ಮತ್ತು ಜಲದ ಮೂಲಕ ನಾಯಕರನ್ನು ಪರಿಚಯಿಸುವ ಮೋಷನ್‌ ಪೋಸ್ಟರ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ತೆಲುಗಿನಲ್ಲಿ ಬಿಡುಗಡೆಯಾಗಿ ಎರಡು ದಿನಗಳಲ್ಲಿ ಸುಮಾರು 55 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಈ ಮೋಷನ್‌ ಫೋಸ್ಟರ್ ಕನ್ನಡದಲ್ಲೂ ಬಿಡುಗಡೆಯಾಗಿದೆ. ಕನ್ನಡದಲ್ಲಿ 10 ಲಕ್ಷ ಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ.

ರಾಮ್‌ ಚರಣ್ ಅಗ್ನಿಯನ್ನು ಪ್ರತಿನಿಧಿಸಿದರೆ, ಎನ್‌ಟಿಆರ್ ಜಲವನ್ನು ಪ್ರತಿನಿಧಿಸುತ್ತಿರುವುದು ಮೊಷನ್ ಪೋಸ್ಟರ್‌ನಲ್ಲಿ ಸ್ಪಷ್ಟವಾಗಿದೆ. ಹಾಗೇ 1920ರಲ್ಲಿ ನಡೆದ ಘಟನೆಯನ್ನು ಆದರಿಸಿ ತೆಗೆದ ಸಿನಿಮಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಯಾಕೆಂದರೆ ಆರ್‌ಆರ್‌ಆರ್‌ ಅಡಿಬರಹದಲ್ಲಿ 1920 ಎಂದು ಬರೆದಿದೆ.

ADVERTISEMENT

ಚಿತ್ರ ಘೋಷಣೆಯಾಗಿದ್ದು 2018ರಲ್ಲಿ. ‘ರಾಮ ರಾವಣ ರಾಜ್ಯಂ’ ಎಂಬುದು ಇದರರ್ಥ ಎಂಬ ಸುದ್ದಿ ಆಗ ಟಾಲಿವುಡ್‌ ಪಡಸಾಲೆಯಲ್ಲಿ ಹರಿದಾಡಿತ್ತು. ಆದರೆ, ಚಿತ್ರತಂಡ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿರಲಿಲ್ಲ. ಜೂನಿಯರ್‌ ಎನ್‌.ಟಿ.ಆರ್‌, ರಾಮ್‌ ಚರಣ್‌, ಅಜಯ್‌ ದೇವಗನ್‌ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾ ಮುಂದಿನ ವರ್ಷ ಜನವರಿ 8ರಂದು ತೆರೆ ಕಾಣಲಿದೆ.

ಇದಕ್ಕೆ ₹ 350 ಕೋಟಿಗೂ ಹೆಚ್ಚು ಬಂಡವಾಳ ಹೂಡಲಾಗಿದೆ. ಎಂ.ಎಂ. ಕೀರ್ವಾಣಿ ಸಂಗೀತ ಸಂಯೋಜಿಸಿದ್ದಾರೆ. ಕೆ.ಕೆ. ಸೆಂಥಿಲ್‌ಕುಮಾರ್‌ ಅವರ ಛಾಯಾಗ್ರಹಣವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.