ADVERTISEMENT

ನಟ ಸಂಜಯ್‌ ದತ್‌ ಮೇಲೆ ₹735 ಕೋಟಿ ಹೂಡಿಕೆ: ಅಡಕತ್ತರಿಗೆ ಸಿಲುಕಿದ ನಿರ್ಮಾಪಕರು

ಕೆ.ಎಚ್.ಓಬಳೇಶ್
Published 13 ಆಗಸ್ಟ್ 2020, 15:06 IST
Last Updated 13 ಆಗಸ್ಟ್ 2020, 15:06 IST
ಸಂಜಯ್‌ ದತ್‌
ಸಂಜಯ್‌ ದತ್‌   

ಬಾಲಿವುಡ್‌ ನಟ ಸಂಜಯ್‌ ದತ್‌ಗೆ ಈಗ 61 ವರ್ಷ. ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಅವರು ಮೂರನೇ ಹಂತ ತಲುಪಿರುವ ಈ ರೋಗದ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಲಿದ್ದಾರೆ. ಹಾಗಾಗಿಯೇ, ನಟನೆಯಿಂದ ಕೊಂಚ ಬಿಡುವು ಪಡೆಯುವುದಾಗಿ ಅವರು ಘೋಷಿಸಿದ್ದಾರೆ.

ಸಂಜಯ್‌ ದತ್‌ ಅವರ ಬಣ್ಣದ ಬುಟ್ಟಿಯಲ್ಲಿ ಹಲವು ಸಿನಿಮಾಗಳಿವೆ. ಅವರು ನಟಿಸಿರುವ ‘ಸಡಕ್‌ 2’, ‘ಟೊರ್ಬಾಜ್‌’, ‘ಭುಜ್‌–ದಿ ಪ್ರೈಡ್ ಆಫ್‌ ಇಂಡಿಯಾ’ ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆಗೆ ಸಿದ್ಧವಾಗಿವೆ. ‘ಸಡಕ್‌ 2’ ಚಿತ್ರ ಆಗಸ್ಟ್‌ 28ರಂದು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಲಿದೆ. ಇನ್ನೂ ‘ಕೆಜಿಎಫ್‌ ಚಾಪ್ಟರ್‌ 2’, ‘ಶಂಶೇರಾ’, ‘ಪೃಥ್ವಿರಾಜ್‌’ ಸಿನಿಮಾಗಳ ಶೂಟಿಂಗ್‌ ಪೂರ್ಣಗೊಂಡಿಲ್ಲ.

‌ದತ್‌ ಮೇಲೆ ನಿರ್ಮಾಪಕರು ಸುಮಾರು ₹ 735 ಕೋಟಿ ಬಂಡವಾಳ ಹೂಡಿದ್ದಾರಂತೆ. ಅವರ ಚಿಕಿತ್ಸೆಗೆ ಐದಾರು ತಿಂಗಳು ಸಮಯಾವಕಾಶ ಹಿಡಿಯಬಹುದು. ಚಿಕಿತ್ಸೆ ಪಡೆದು ಮರಳಿದ ನಂತರವಷ್ಟೇ ಅವರು ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲು ಸಾಧ್ಯ. ಹಾಗಾಗಿ, ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿರುವ ನಿರ್ಮಾಪಕರು ಅಕ್ಷರಶಃ ಅಡಕತ್ತರಿಗೆ ಸಿಲುಕಿದ್ದಾರೆ. ದತ್‌ ಅಮೆರಿಕದಿಂದ ವಾಪಸ್‌ ಮರಳಿದ ಬಳಿಕ ತಮ್ಮ ಸಿನಿಮಾಗಳ ಬಾಕಿ ಇರುವ ಕೆಲಸ ಪೂರ್ಣಗೊಳಿಸುವುದು ಅವರಿಗೆ ಅನಿವಾರ್ಯವಾಗಿದೆ.

ADVERTISEMENT

‘ಸಡಕ್‌ 2’ ಸಿನಿಮಾ 1991ರಲ್ಲಿ ತೆರೆಕಂಡ ‘ಸಡಕ್‌’ ಚಿತ್ರದ ಸ್ವೀಕೆಲ್‌. ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿರುವುದು ಮಹೇಶ್‌ ಭಟ್‌ ಅವರೇ. ಅಲಿಯಾ ಭಟ್‌, ಆದಿತ್ಯ ರಾಯ್‌ ಕಪೂರ್‌, ಪೂಜಾ ಭಟ್‌ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಸಂಜಯ್‌ ದತ್ ಅವರದ್ದು ಟ್ಯಾಕ್ಸಿ ಡ್ರೈವರ್‌ ರವಿ ಪಾತ್ರ. ಇದಕ್ಕೆ ಹೂಡಿರುವ ಬಂಡವಾಳ ಸುಮಾರು ₹ 40 ಕೋಟಿ.

ದತ್‌ ನಟನೆಯ ಮತ್ತೊಂದು ಕುತೂಹಲಕಾರಿ ಚಿತ್ರ ‘ಭುಜ್‌– ದಿ ಪ್ರೈಡ್‌ ಆಫ್‌ ಇಂಡಿಯಾ’. ಬಹು ತಾರಾಗಣ ಇರುವ ಚಿತ್ರ ಇದು. ಸಂಜು ಜೊತೆಗೆ ಅಜಯ್‌ ದೇವಗನ್‌, ಸೋನಾಕ್ಷಿ ಸಿನ್ಹ ತೆರೆ ಹಂಚಿಕೊಂಡಿದ್ದಾರೆ. ಇದಕ್ಕೆ ಸುಮಾರು ₹ 80 ಕೋಟಿ ವೆಚ್ಚ ಮಾಡಲಾಗಿದೆ.

ಅಭಿಷೇಕ್‌ ದುಧಯ್ಯ ನಿರ್ದೇಶನದ ಈ ಚಿತ್ರವನ್ನು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ₹ 120 ಕೋಟಿಗೆ ಖರೀದಿಸಿದೆಯಂತೆ. ಅಕ್ಷಯ್‌ ಕುಮಾರ್‌ ನಟನೆಯ ‘ಲಕ್ಷ್ಮಿಬಾಂಬ್‌’ ಚಿತ್ರದ ಬಳಿಕ ಒಟಿಟಿಯಲ್ಲಿ ಅತಿಹೆಚ್ಚು ಮೊತ್ತಕ್ಕೆ ಖರೀದಿಯಾದ ಬಾಲಿವುಡ್‌ನ ಎರಡನೇ ಚಿತ್ರ ಇದಾಗಿದೆ. ಇನ್ನೂ ಇದರ ಬಿಡುಗಡೆಯ ದಿನಾಂಕ ನಿಗದಿಯಾಗಿಲ್ಲ.

ದತ್‌ ನಟನೆಯ ಮತ್ತೊಂದು ಚಿತ್ರ ‘ಟೊರ್ಬಾಜ್’ ಕೂಡ ಒಟಿಟಿಯಲ್ಲಿ ಬಿಡುಗಡೆಯಾಗುವುದು ಪಕ್ಕಾ ಆಗಿದೆ. ಆಫ್ಘಾನಿಸ್ತಾನ, ಮನಾಲಿ, ಪಂಜಾಬ್‌ ಸೇರಿದಂತೆ ದೇಶದ ವಿವಿಧೆಡೆ ಇದರ ಶೂಟಿಂಗ್‌ ನಡೆದಿದೆ. ಇದರಲ್ಲಿ ದತ್‌ಗೆ ನರ್ಗಿಸ್‌ ಫರ್ಕಿ ಜೋಡಿ. ಕಳೆದ ಜುಲೈನಲ್ಲಿಯೇ ಇದು ತೆರೆ ಕಾಣಬೇಕಿತ್ತು. ಕೋವಿಡ್‌–19 ಪರಿಣಾಮ ಇದರ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗಿದೆ. ಗಿರೀಶ್‌ ಮಲಿಕ್‌ ನಿರ್ದೇಶನದ ಈ ಚಿತ್ರದ ಬಜೆಟ್‌ ಸುಮಾರು ₹ 25 ಕೋಟಿ.

‘ಸಡಕ್‌ 2’, ‘ಭುಜ್‌’ ಮತ್ತು ‘ಟೊರ್ಬಾಜ್‌’ ಸಿನಿಮಾಗಳ ನಿರ್ಮಾಣ ವೆಚ್ಚವೇ ಸುಮಾರು ₹ 145 ಕೋಟಿಯಷ್ಟಿದೆ. ಉಳಿದಂತೆ ದತ್‌ ನಟಿಸುತ್ತಿರುವ ಇನ್ನೂ ಚಿತ್ರೀಕರಣ ಪೂರ್ಣಗೊಳ್ಳದ ಸಿನಿಮಾಗಳ ನಿರ್ಮಾಣದ ಮೊತ್ತ ಸುಮಾರು ₹ 590 ಕೋಟಿಯಷ್ಟಿದೆ.

ಕರಣ್‌ ಮಲ್ಹೋತ್ರ ನಿರ್ದೇಶನದ ‘ಶಂಶೇರಾ’ ಚಿತ್ರದಲ್ಲಿ ಸಂಜಯ್‌ ದತ್‌ ಜೊತೆಗೆ ರಣ್‌ಬೀರ್‌ ಕಪೂರ್‌ ಕೂಡ ನಟಿಸಿದ್ದಾರೆ. ಈ ಡಕಾಯಿಟ್‌ ಡ್ರಾಮಾದಲ್ಲಿ ದತ್‌ ಪಾತ್ರದ ಆರು ದಿನಗಳ ಶೂಟಿಂಗ್‌ ಬಾಕಿಯಿದೆ. ಕೆಲವು ಪ್ಯಾಚ್‌ವರ್ಕ್ಸ್‌ಗಳ ಚಿತ್ರೀಕರಣವೂ ಪೂರ್ಣಗೊಂಡಿಲ್ಲವಂತೆ. ಈ ತಿಂಗಳಿನಲ್ಲಿಯೇ ಇದರ ಬಾಕಿ ಇರುವ ಶೂಟಿಂಗ್‌ ಪೂರ್ಣಗೊಳಿಸಲು ಚಿತ್ರತಂಡ ನಿರ್ಧರಿಸಿತ್ತು. ಇದಕ್ಕೆ ಯಶ್‌ ರಾಜ್‌ ಫಿಲ್ಮ್ಸ್‌ ₹ 140 ಕೋಟಿ ಬಂಡವಾಳ ಹೂಡಿದೆಯಂತೆ.

ಪ್ರಶಾಂತ್‌ ನೀಲ್‌ ನಿರ್ದೇಶನದ ಕನ್ನಡದ ‘ಕೆಜಿಎಫ್‌ ಚಾಪ್ಟರ್‌ 2’ ಚಿತ್ರದಲ್ಲಿ ಸಂಜಯ್‌ ದತ್‌ ‘ಅಧೀರ’ನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಪ್ಯಾನ್‌ ಇಂಡಿಯಾ ಕಾನ್ಸೆಪ್ಟ್‌ನಡಿ ನಿರ್ಮಾಣವಾಗುತ್ತಿರುವ ಚಿತ್ರ ಇದು. ಇನ್ನೂ ಈ ಚಿತ್ರದ 25 ದಿನಗಳ ಚಿತ್ರೀಕರಣ ಬಾಕಿಯಿದೆ. ಈ ಪೈಕಿ ಯಶ್ ಮತ್ತು ಸಂಜಯ್‌ ದತ್‌ ನಡುವಿನ ಅಂತಿಮ ಕದನದ ಚಿತ್ರೀಕರಣ ಪೂರ್ಣಗೊಂಡಿಲ್ಲವಂತೆ. ಸುಮಾರು ₹ 150 ಕೋಟಿ ವೆಚ್ಚದಡಿ ಹೊಂಬಾಳೆ ಫಿಲ್ಮ್ಸ್‌ ಇದನ್ನು ನಿರ್ಮಿಸುತ್ತಿದೆ. ದತ್‌ ಅಮೆರಿಕದಿಂದ ಚಿಕಿತ್ಸೆ ಪಡೆದು ಮರಳಿದ ಬಳಿಕ ಬಾಕಿ ಉಳಿದಿರುವ ಚಿತ್ರೀಕರಣ ಪೂರ್ಣಗೊಳಿಸಲು ಚಿತ್ರತಂಡ ತೀರ್ಮಾನಿಸಿದೆ.

ದತ್‌ ನಟಿಸುತ್ತಿರುವ ಮತ್ತೊಂದು ಪ್ರಮುಖ ಚಿತ್ರ ‘ಪೃಥ್ವಿರಾಜ್‌’. ಇದು ಐತಿಹಾಸಿಕ ಆ್ಯಕ್ಷನ್‌ ಚಿತ್ರ. ಅಕ್ಷಯ್‌ ಕುಮಾರ್‌ ಮತ್ತು ಮಾನುಷಿ ಚಿಲ್ಲರ್‌ ಇದರಲ್ಲಿ ನಟಿಸುತ್ತಿದ್ದಾರೆ. ಕೊರೊನಾ ಪರಿಣಾಮ ಮಾರ್ಚ್‌ನಲ್ಲಿಯೇ ಇದರ ಶೂಟಿಂಗ್‌ ಸ್ಥಗಿತಗೊಂಡಿದೆ. ಡಾ.ಚಂದ್ರಶೇಖರ್‌ ದ್ವಿವೇದಿ ನಿರ್ದೇಶನದ ಈ ಚಿತ್ರದ ಬಜೆಟ್‌ ಸುಮಾರು ₹ 300 ಕೋಟಿಯಂತೆ. ಯಶ್‌ ರಾಜ್‌ ಫಿಲ್ಮ್ಸ್‌ನಿಂದ ಇದು ನಿರ್ಮಾಣವಾಗುತ್ತಿದ್ದು, ಶೇಕಡ 40ರಷ್ಟು ಚಿತ್ರೀಕರಣವಷ್ಟೇ ಪೂರ್ಣಗೊಂಡಿದೆ. ಈ ಸಿನಿಮಾಗಳ ನಿರ್ಮಾಪಕರು ಸಂಜಯ್‌ ದತ್‌ ಅವರು ಕ್ಯಾನ್ಸರ್‌ನಿಂದ ಚೇತರಿಸಿಕೊಂಡು ಸೆಟ್‌ಗೆ ಮರಳುವುದನ್ನೇ ಎದುರು ನೋಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.