
ಶಶಿಕುಮಾರ್, ತಾರಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ‘ರುದ್ರ ಅವತಾರ’ ಚಿತ್ರದ ಪಾತ್ರಗಳನ್ನು ಪರಿಚಯಿಸುವ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಪೋಷಕರ ಕುರಿತಾದ ಕಥೆ ಹೊಂದಿರುವ ಚಿತ್ರಕ್ಕೆ ಸವಾದ್ ಮಂಗಳೂರು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ರೇಮ್ ಜಿ ಪ್ರೊಡಕ್ಷನ್ಸ್ ಮೂಲಕ ಉದ್ಯಮಿ ಪ್ರೇಮಾನಂದ್ ವಿ. ಗವಸ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
‘ರುದ್ರ ಅವತಾರ’ ಶಿವನ ಮತ್ತೊಂದು ರೂಪ. ಮಧ್ಯಮ ವರ್ಗದವರು ತಮ್ಮ ಮಕ್ಕಳ ರಕ್ಷಣೆಗೋಸ್ಕರ ಯಾವ ರೀತಿ ಹೋರಾಡುತ್ತಾರೆ?, ಹೇಗೆ ರುದ್ರ ಅವತಾರ ತಾಳುತ್ತಾರೆ? ಎಂಬುದನ್ನು ಈ ಚಿತ್ರದ ಮೂಲಕ ಹೇಳಹೊರಟಿದ್ದೇವೆ. ಮಕ್ಕಳ ಕನಸುಗಳನ್ನು ಈಡೇರಿಸುವ ಸಲುವಾಗಿ ಪೋಷಕರು ತಮ್ಮ ಕನಸು, ಆಸೆಗಳನ್ನು ಕಟ್ಟಿಟ್ಟು ಜೀವನ ನಡೆಸುತ್ತಾರೆ. ಈ ಕಥೆಯಲ್ಲಿ ಪ್ರಮುಖವಾಗಿ ಮೂರು ಪಾತ್ರಗಳನ್ನು ಶಿವನ ರುದ್ರ ಅವತಾರದಲ್ಲಿ ನೋಡಬಹುದು. ಅವರಲ್ಲಿ ಮುಖ್ಯವಾಗಿ ಬರುವವರೇ ಶಶಿಕುಮಾರ್. ನವೆಂಬರ್ 24ರಿಂದ ಚಿತ್ರೀಕರಣ ಆರಂಭಿಸಲಿದ್ದೇವೆ’ ಎಂದು ನಿರ್ದೇಶಕರು ತಿಳಿಸಿದರು.
‘ಇದು ನಾಯಕ, ನಾಯಕಿ ಕಥೆಯಲ್ಲ. ಇಲ್ಲಿ ಕಥೆಯೇ ನಾಯಕ. ಈ ಚಿತ್ರದಲ್ಲಿ ನಾನೊಬ್ಬ ಆಟೊ ಡ್ರೈವರ್. ಹೆಣ್ಣುಮಗಳ ತಂದೆಯಾಗಿ ನಟಿಸುತ್ತಿದ್ದೇನೆ. ಸಂಗೀತಾ ನನ್ನ ಪತ್ನಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮಗಳಿಗಾಗಿ ಹೋರಾಡುವ ತಂದೆಯ ಪಾತ್ರ ನನ್ನದು’ ಎಂದರು ಶಶಿಕುಮಾರ್.
ಯಶ್ ಶೆಟ್ಟಿ, ವರ್ಧನ್ ತೀರ್ಥಹಳ್ಳಿ, ಅಂಕಿತಾ ಜಯರಾಮ್, ಸಾಧನಾ ಮುಂತಾದವರು ಚಿತ್ರದಲ್ಲಿದ್ದಾರೆ. ಅಲನ್ ಭರತ್ ಛಾಯಾಚಿತ್ರಗ್ರಹಣ, ಪಾಲ್ ಅಲೆಕ್ಸ್ ಸಂಗೀತ ಸಂಯೋಜನೆ, ಶ್ರೀಕಾಂತ್ ಸಂಕಲನ ಈ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.