ADVERTISEMENT

ಕೋವಿಡ್–19 ಪರಿಣಾಮ | ರುದ್ರಪ್ರಯಾಗ ಚಿತ್ರೀಕರಣ ಮುಂದಕ್ಕೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2020, 20:15 IST
Last Updated 9 ಏಪ್ರಿಲ್ 2020, 20:15 IST
   

ರಿಷಬ್ ಶೆಟ್ಟಿ ನಿರ್ದೇಶನದ ‘ರುದ್ರಪ್ರಯಾಗ’ ಚಿತ್ರದ ಚಿತ್ರೀಕರಣದ ಕೆಲಸಗಳು ಮಾರ್ಚ್‌ 26ರಿಂದ ಶುರು ಆಗಬೇಕಿತ್ತು. ಆದರೆ... ಆದರೆ ಏನು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಕೊರೊನಾ ವೈರಾಣು ಈ ಚಿತ್ರದ ಚಿತ್ರೀಕರಣದ ದಿನಾಂಕವನ್ನು ನುಂಗಿಹಾಕಿದೆ.

ವೈರಾಣುವಿನ ಹಾವಳಿ ಕೊನೆಗೊಂಡ ನಂತರ ರಿಷಬ್ ಮತ್ತು ತಂಡವು ಹೊಸ ದಿನಾಂಕವನ್ನು ನಿಗದಿ ಮಾಡಬೇಕಿದೆ. ‘ಆರಂಭದಲ್ಲಿ ಬೆಂಗಳೂರು ಭಾಗದ ಚಿತ್ರೀಕರಣ ನಡೆಯಬೇಕಿತ್ತು. ನಂತರದ ದಿನಗಳಲ್ಲಿ ಬೆಳಗಾವಿ ಮತ್ತು ದಾಂಡೇಲಿ ಕಡೆ ಮುಖ ಮಾಡಬೇಕಿತ್ತು. ಈಗ ಕೊರೊನಾ ಕಾರಣದಿಂದಾಗಿ ಚಿತ್ರೀಕರಣ ನಿಂತಿದೆ’ ಎಂದು ರಿಷಬ್ ತಿಳಿಸಿದರು.

ಅವರು ಈಗ ಲಾಕ್‌ಡೌನ್‌ ಅವಧಿಯನ್ನು ತಮ್ಮ ಊರಿನಲ್ಲಿ (ಕುಂದಾಪುರ) ಕಳೆಯುತ್ತಿದ್ದಾರೆ. ‘ರುದ್ರಪ್ರಯಾಗ’ ಚಿತ್ರದ ಪಾತ್ರಗಳನ್ನು ಯಾರು ನಿಭಾಯಿಸಬೇಕು ಎಂಬುದೆಲ್ಲ ಬಹುತೇಕ ಅಂತಿಮಗೊಂಡಿದೆ. ಆದರೆ ಇದರಲ್ಲೂ ಒಂಚೂರು ಕೆಲಸ ಬಾಕಿ ಇದೆ ಎಂದು ರಿಷಬ್ ಹೇಳುತ್ತಾರೆ.

ADVERTISEMENT

ಅನಂತ್ ನಾಗ್ ಮತ್ತು ಶ್ರದ್ಧಾ ಶ್ರೀನಾಥ್ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅನಂತ್ ನಾಗ್ ಮತ್ತು ರಿಷಬ್ ಅವರು ‘ಸರ್ಕಾರಿ ಹಿ.ಪ್ರಾ.ಶಾಲೆ ಕಾಸರಗೋಡು, ಕೊಡುಗೆ: ರಾಮಣ್ಣ ರೈ’ ಚಿತ್ರದ ನಂತರ ಮತ್ತೆ ಇದರಲ್ಲಿ ಒಂದಾಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.