ADVERTISEMENT

ಮೇ 20ಕ್ಕೆ ಚಿತ್ರಮಂದಿರದಲ್ಲಿ ‘ಸಕುಟುಂಬ ಸಮೇತ’

​ಪ್ರಜಾವಾಣಿ ವಾರ್ತೆ
Published 12 ಮೇ 2022, 9:47 IST
Last Updated 12 ಮೇ 2022, 9:47 IST
ಸಿರಿ ರವಿಕುಮಾರ್‌, ಭರತ್ ಜಿ.ಬಿ.
ಸಿರಿ ರವಿಕುಮಾರ್‌, ಭರತ್ ಜಿ.ಬಿ.   

ನಟ, ನಿರ್ಮಾಪಕ ರಕ್ಷಿತ್ ಶೆಟ್ಟಿ ತಮ್ಮ ಪರಂವಾ ಸ್ಟುಡಿಯೋ ಮೂಲಕ ನಿರ್ಮಿಸಿರುವ ‘ಸಕುಟುಂಬ ಸಮೇತ’ ಚಿತ್ರ ಮೇ 20ರಂದು ತೆರೆಗೆ ಬರುತ್ತಿದೆ.

‘ಸಕುಟುಂಬ ಸಮೇತ’ ಕುಟುಂಬ ಸಮೇತ ನೋಡುವ ಸಿನಿಮಾ. ಮದುವೆ ನಿಶ್ಚಯವಾದ ಹುಡುಗಿಯೊಬ್ಬಳು ಮದುವೆಗೆ ಒಂದು ವಾರ ಇರುವಾಗ, ಮದುವೆ ಬೇಡ ಎಂದು ಹುಡುಗನ ಮನೆಗೆ ಬಂದು ಹೇಳುತ್ತಾಳೆ. ಮುಂದೇನಾಗುತ್ತದೆ? ಎಂಬುದು ಸಿನಿಮಾ ತಿರುಳು’ ಎಂದರು ನಿರ್ದೇಶಕ ರಾಹುಲ್.

‘ನಾನು ರಾಹುಲ್ ಅವರನ್ನು ‘ಉಳಿದವರು ಕಂಡಂತೆ’ ಸಿನಿಮಾದಿಂದಲೂ ಬಲ್ಲೆ. ಸಹಾಯಕ ನಿರ್ದೇಶಕರಾಗಿದ್ದ ಅವರು ಈ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ನಾನು ಚಿತ್ರ ನೋಡಿದ್ದೇನೆ. ಚೆನ್ನಾಗಿದೆ. ಕಲರ್ಸ್ ವಾಹಿನಿಯವರು ಈ ಚಿತ್ರದ ಸ್ಯಾಟಲೈಟ್ ಹಾಗೂ ಒಟಿಟಿ ಹಕ್ಕು ಪಡೆದುಕೊಂಡಿದ್ದಾರೆ. ಚಿತ್ರಮಂದಿರಗಳಲ್ಲೂ ಈ ಚಿತ್ರ ಬಿಡುಗಡೆಯಾಗುತ್ತಿದೆ. ಜಿ.ಎಸ್.ಗುಪ್ತ ಅವರು ನನ್ನ ಜೊತೆ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ. ಬಿಡುಗಡೆಗೂ ಮುನ್ನವೇ ನಾವು ಹಾಕಿರುವ ದುಡ್ಡು ನಮಗೆ ವಾಪಸ್ ಬಂದಿರುವುದಕ್ಕೆ ಖುಷಿಯಿದೆ’ ಎಂದರು ರಕ್ಷಿತ್ ಶೆಟ್ಟಿ.

ADVERTISEMENT

‘ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ ಮುಂತಾದ ಗೆಳೆಯರ ಬಳಗದಿಂದ ಬಂದವರು ಈಗ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಈ ಚಿತ್ರದ ನಿರ್ದೇಶಕ ರಾಹುಲ್ ಸಹ ನನಗೆ ಪರಿಚಯ. ಅವರು ಈ ಚಿತ್ರದ ಕಥೆ ಹೇಳಿದಾಗ ಸ್ವಲ್ಪ ಭಯವಾಯಿತು. ಹೆಚ್ಚು ಮನೆಯಲ್ಲೇ ನಡೆಯುವ ಕಥೆಯಿದು. ಆದರೆ ನಿರ್ದೇಶಕರು ಚಿತ್ರವನ್ನು ಅಂದುಕೊಂಡದ್ದಕ್ಕಿಂತ ಚೆನ್ನಾಗಿ ನಿರ್ದೇಶಿಸಿದ್ದಾರೆ’ ಅಂದರು ಅಚ್ಯುತಕುಮಾರ್.

‘ರೇಡಿಯೋ, ನಾಟಕಗಳಲ್ಲಿ ಅನುಭವವಿದ್ದ ನನಗೆ ಇದು ಮೊದಲ ಚಿತ್ರ. ನನ್ನ ಪಾತ್ರ ಚೆನ್ನಾಗಿದೆ’ ಎಂದರು ನಾಯಕಿ‌ ಸಿರಿ ರವಿಕುಮಾರ್.

‘ಆಡಿಷನ್ ಮೂಲಕ ಆಯ್ಕೆಯಾದ ಆದ ನಾನು ಸ್ಕ್ರಿಪ್ಟ್ ‌ಓದುವಾಗ ಎಷ್ಟು ನಕ್ಕಿದೇನೋ? ಗೊತ್ತಿಲ್ಲ. ಕುಟುಂಬ ಸಮೇತ ನೋಡಬೇಕಾದ ಚಿತ್ರವಿದು ನೋಡಿ ಹಾರೈಸಿ’ ಎಂದರು ನಾಯಕ ಭರತ್ ಜಿ.ಬಿ.

ಚಿತ್ರದಲ್ಲಿ ಅಭಿನಯಿಸಿರುವ ಕೃಷ್ಣ ಹೆಬ್ಬಾಳೆ, ರೇಖಾ ಕೂಡ್ಲಿಗಿ, ಜಯಲಕ್ಷ್ಮಿ ಪಾಟೀಲ್, ಛಾಯಾಗ್ರಾಹಕ ಕರಮ್ ಚಾವ್ಲಾ, ಸಂದೀಪ್ ಹಾಗೂ ಸಂಗೀತ ನಿರ್ದೇಶಕ ಮಿಥುನ್ ಮುಕುಂದನ್ ತಮ್ಮ ಅನುಭವವನ್ನು ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.