ಸಲ್ಮಾನ್ ಖಾನ್, ತಂದೆ ಸಲೀಂ ಖಾನ್
ಬೆಂಗಳೂರು: ಬಾಬಾ ಸಿದ್ದೀಕಿ ಹತ್ಯೆಗೂ, ಸಲ್ಮಾನ್ ಖಾನ್‌ಗೂ ಯಾವುದೇ ಸಂಬಂಧ ಇಲ್ಲ ಎಂದು ನಟ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಅವರು ಹೇಳಿದ್ದಾರೆ.
ಎಬಿಪಿ ಸುದ್ದಿವಾಹಿನಿ ಜೊತೆ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಸಿದ್ದೀಕಿ ಹತ್ಯೆ ಆಸ್ತಿ ವಿವಾದದಿಂದ ನಡೆದಿರಬಹುದು ಎಂದು ಹೇಳಲಾಗುತ್ತಿದೆ. ಅದಕ್ಕೂ ನಮ್ಮ ಕುಟುಂಬಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನಿಂದ ಸಲ್ಮಾನ್ ಖಾನ್ ಅವರಿಗೆ ಬೆದರಿಕೆ ಇರುವ ಬಗ್ಗೆ ಮಾತನಾಡಿದ ಸಲೀಂ ಅವರು, ಕೃಷ್ಣಮೃಗ ಹತ್ಯೆ ಪ್ರಕರಣದಲ್ಲಿ ಸಲ್ಮಾನ್ ವಿರುದ್ಧ ದ್ವೇಷ ಸಾಧಿಸುತ್ತಿದ್ದಾರೆ ಎಂದು ಹೇಳುತ್ತಾರೆ. ಆದರೆ, ಕೃಷ್ಣಮೃಗ ಹತ್ಯೆ ಪ್ರಕರಣದಲ್ಲಿ ನನ್ನ ಮಗ ಭಾಗಿಯಾಗಿಲ್ಲ. ಅವನು ನನ್ನ ಬಳಿ ಎಂದಿಗೂ ಸುಳ್ಳು ಹೇಳುವುದಿಲ್ಲ. ಅಂದು ಆತ ಕಾರಿನಲ್ಲಿ ಇರಲಿಲ್ಲ. ಆತ ಯಾವಾಗಲೂ ಪ್ರಾಣಿಗಳನ್ನು ಪ್ರೀತಿಸುವವನು ಎಂದು ಹೇಳಿದ್ದಾರೆ.
ಕೃಷ್ಣಮೃಗ ಹತ್ಯೆ ಪ್ರಕರಣದಲ್ಲಿ ಸಲ್ಮಾನ್ ತಪ್ಪಿತಸ್ಥ ಅಲ್ಲ. ಆತ ಏಕೆ ಕ್ಷಮೆ ಕೇಳಬೇಕು? ಕ್ಷಮೆ ಕೇಳಿದರೆ ತಪ್ಪು ಮಾಡಿದ್ದಾನೆಂದು ಅರ್ಥವಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಸಲೀಂ ಖಾನ್ ಅವರು ಭಾರತೀಯ ಚಿತ್ರರಂಗದ ಖ್ಯಾತ ಚಿತ್ರ ಕಥೆಗಾರರಾಗಿದ್ದಾರೆ. ಅನೇಕ ಸಿನಿಮಾಗಳನ್ನು ನಿರ್ಮಿಸಿದ್ದಾರೆ.
1998ರಲ್ಲಿ ‘ಹಮ್ ಸಾಥ್ ಸಾಥ್ ಹೈ’ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಜೋಧಪುರ ಬಳಿ ಅರಣ್ಯದಲ್ಲಿ ಸಲ್ಮಾನ್ ಖಾನ್ ಅವರು ತಮ್ಮ ಸಹನಟರ ಜೊತೆ ಕಾರಿನಲ್ಲಿ ಹೋಗಿ ಕೃಷ್ಣಮೃಗವನ್ನು ಭೇಟೆಯಾಡಿದ್ದರು ಎಂದು ಅವರ ಮೇಲೆ ಆರೋಪ ಇದೆ.
ರಾಜಸ್ಥಾನದ ಬಿಷ್ಣೋಯಿ ಸಮುದಾಯ ಕೃಷ್ಣಮೃಗಗಳನ್ನು ಪೂಜನೀಯ ಭಾವನೆಯಿಂದ ಕಾಣುತ್ತದೆ. ಹೀಗಾಗಿ ಬಿಷ್ಣೋಯಿ ಸಮುದಾಯ ಸಲ್ಮಾನ್ ಖಾನ್ ಅವರನ್ನು ದ್ವೇಷಿಸುತ್ತದೆ ಎನ್ನಲಾಗಿದೆ.
ಬಾಬಾ ಸಿದ್ದೀಕಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಮತ್ತೆ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಖಚಿತ ಮಾಹಿತಿ ಆಧರಿಸಿ ಮಹಾರಾಷ್ಟ್ರದ ರಾಯಘಡ ಜಿಲ್ಲೆಯ ಪನ್ವೇಲ್ ಮತ್ತು ಕರ್ಜತ್ ಪ್ರದೇಶಗಳಲ್ಲಿ ಕ್ರೈಂ ಬ್ರಾಂಚ್ ಪೊಲೀಸರು ದಾಳಿ ನಡೆಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.