ADVERTISEMENT

ಸಲ್ಮಾನ್ ಶುಭ ಹಾರೈಕೆ ಬೆನ್ನಲ್ಲೇ ಚಿತ್ರರಂಗದಲ್ಲಿ ನಾನು ಒಬ್ಬಂಟಿಯಲ್ಲವೆಂದ ಕಂಗನಾ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಮೇ 2022, 9:28 IST
Last Updated 13 ಮೇ 2022, 9:28 IST
ಕಂಗನಾ ರನೌತ್‌ ಮತ್ತು ಸಲ್ಮಾನ್ ಖಾನ್
ಕಂಗನಾ ರನೌತ್‌ ಮತ್ತು ಸಲ್ಮಾನ್ ಖಾನ್    

ಮುಂಬೈ: ಬಾಲಿವುಡ್‌ ನಟಿ ಕಂಗನಾ ರನೌತ್‌ ಅಭಿನಯ ಬಹುನಿರೀಕ್ಷಿತ ‘ಧಾಕಡ್‌’ ಚಿತ್ರತಂಡಕ್ಕೆ ನಟ ಸಲ್ಮಾನ್ ಖಾನ್ ಶುಭ ಹಾರೈಸಿದ್ದಾರೆ.

ರಜನೀಶ್ ರಾಜಿ ಘಾಯ್ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾ ಇದೇ 20ರಂದು ಬಿಡುಗಡೆಯಾಗಲಿದೆ. ಚಿತ್ರತಂಡ ಈಗಾಗಲೇ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ.

ಇತ್ತೀಚೆಗೆ ಬಿಡುಗಡೆಯಾದ ‘ಧಾಕಡ್‌’ ಚಿತ್ರದ ಟ್ರೇಲರ್ ಮತ್ತು ಪೋಸ್ಟರ್‌ಗಳು ಪ್ರೇಕ್ಷಕರ ಗಮನ ಸೆಳೆದಿದ್ದು, ಚಿತ್ರ ಕುರಿತಾದ ಕುತೂಹಲ ಹೆಚ್ಚಾಗುವಂತೆ ಮಾಡಿದೆ.

ADVERTISEMENT

ಇದೀಗ ಸಲ್ಮಾನ್ ಖಾನ್, ಚಿತ್ರದ ಟ್ರೇಲರ್‌ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಸಲ್ಮಾನ್ ಪೋಸ್ಟ್‌ ಕುರಿತು ಪ್ರತಿಕ್ರಿಯಿಸಿರುವ ಕಂಗನಾ, ‘ಹಾರ್ಟ್ ಆಫ್ ಗೋಲ್ಡ್... ‘ದಬಾಂಗ್’ ನಟನಿಗೆ ಧನ್ಯವಾದಗಳು. ನಾನು ಹಿಂದಿ ಚಿತ್ರರಂಗದಲ್ಲಿ ಒಂಟಿಯಾಗಿದ್ದೇನೆ ಎಂದು ಮತ್ತೆಂದೂ ಹೇಳುವುದಿಲ್ಲ... ಇಡೀ ‘ಧಾಕಡ್‌’ ತಂಡದಿಂದ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.

ದೆಹಲಿಯಲ್ಲಿ ಗುರುವಾರ ನಡೆದ ‘ಧಾಕಡ್‌’ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಕಂಗನಾ ರನೌತ್‌ ಪಾಲ್ಗೊಂಡಿದ್ದರು. ಇದೇ ವೇಳೆ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ‘ಬಾಲಿವುಡ್‌ಗೆ ನನ್ನನ್ನು ಭರಿಸಲು ಸಾಧ್ಯವಿಲ್ಲ’ ಎಂಬ ಮಹೇಶ್ ಬಾಬು ನೀಡಿದ್ದ ಹೇಳಿಕೆಗೆ ಕುರಿತು ಪ್ರತಿಕ್ರಿಯಿಸಿದ್ದಾರೆ.

‘ಮಹೇಶ್‌ ಬಾಬು ಹೇಳಿರುವುದು ಸರಿ ಇದೆ. ಅವರ ಮಾತನ್ನು ನಾನು ಒಪ್ಪುತ್ತೇನೆ. ಮಹೇಶ್, ತೆಲುಗು ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಮಹೇಶ್‌ ಅವರ ತಲೆಮಾರಿನ ಅನೇಕ ನಟರು ತಮ್ಮ ಪರಿಶ್ರಮದಿಂದ ತೆಲುಗು ಚಿತ್ರರಂಗವನ್ನು ಭಾರತದಲ್ಲಿ ನಂಬರ್ ಒನ್ ಚಿತ್ರೋದ್ಯಮವನ್ನಾಗಿ ಮಾಡಿದ್ದಾರೆ. ಹಾಗಾಗಿ ಬಾಲಿವುಡ್‌ಗೆ ಖಂಡಿತವಾಗಿಯೂ ಮಹೇಶ್ ಅವರನ್ನು ಭರಿಸಲು ಸಾಧ್ಯವಿಲ್ಲ’ ಎಂದು ಹೇಳಿಕೊಂಡಿದ್ದಾರೆ.
ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.