ADVERTISEMENT

Ba***ds of Bollywood: ತಮ್ಮ ಪಾತ್ರ ಮಾನಹಾನಿಕರ;ಮೊಕದ್ದಮೆ ಹೂಡಿದ IRS ಅಧಿಕಾರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಸೆಪ್ಟೆಂಬರ್ 2025, 12:58 IST
Last Updated 25 ಸೆಪ್ಟೆಂಬರ್ 2025, 12:58 IST
Shwetha Kumari
   Shwetha Kumari

ನವದೆಹಲಿ: ಶಾರುಕ್ ಮಗ ಆರ್ಯನ್ ಖಾನ್ ನಿರ್ದೇಶದನ ‘ದಿ ಬ್ಯಾಡ್ಸ್‌ ಆಫ್‌ ಬಾಲಿವುಡ್‌’ ವೆಬ್‌ ಸಿರೀಸ್‌ನಲ್ಲಿ ತಮ್ಮ ಪಾತ್ರವನ್ನು ಸಮರ್ಪಕವಾಗಿ ತೆರೆಮೇಲೆ ತಂದಿಲ್ಲ ಎಂದು ಆರೋಪಿಸಿರುವ ಮಾದಕ ದ್ರವ್ಯ ನಿಯಂತ್ರಣ ದಳದ (ಎನ್‌ಸಿಬಿ) ಮಾಜಿ ಅಧಿಕಾರಿ ಸಮೀರ್ ವಾಂಖೆಡೆ ₹2 ಕೋಟಿ ಪರಿಹಾರ ಕೋರಿದ್ದಾರೆ.

ಈ ಪ್ರಕರಣದಲ್ಲಿ ನಿರ್ಮಾಣ ಸಂಸ್ಥೆ, ನೆಟ್‌ಫ್ಲಿಕ್ಸ್‌ ಮತ್ತು ಇತರರನ್ನು ಅವರು ಪಕ್ಷಗಾರರನ್ನಾಗಿಸಿದ್ದಾರೆ.

ಗೌರಿ ಖಾನ್‌ ಒಡೆತನದ ‘ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್’ ವೆಬ್‌ ಸಿರೀಸ್‌ ನಿರ್ಮಿಸಿದೆ. ಸಿರೀಸ್‌ನ ಮೊದಲ 7 ಏಪಿಸೋಡ್‌ಗಳು ಸೆಪ್ಟೆಂಬರ್‌ 18ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿತ್ತು.

ADVERTISEMENT

ದೂರಿನಲ್ಲಿ ಏನಿದೆ:

ನಮ್ಮ ನಡುವಿನ (ವಾಂಖೆಡೆ ಮತ್ತು ಆರ್ಯನ್ ಖಾನ್‌) ಪ್ರಕರಣವು ಬಾಂಬೆ ಹೈಕೋರ್ಟ್ ಮತ್ತು ಮುಂಬೈನ ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯದಲ್ಲಿ ಬಾಕಿ ಇರುವಾಗಲೇ ಉದ್ದೇಶಪೂರ್ವಕವಾಗಿಯೇ ವೆಬ್‌ ಸಿರೀಸ್‌ ಅನ್ನು ತರಲಾಗಿದೆ. ಆ ಮೂಲಕ ನನ್ನ ವ್ಯಕ್ತಿತ್ವಕ್ಕೆ ಕಳಂಕ ತರುವ ಉದ್ದೇಶ ಹೊಂದಿದ್ದಾರೆ ಎಂದು ವಾಂಖೆಡೆ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಚಿತ್ರದಲ್ಲಿ ಮಾದಕ ದ್ರವ್ಯ ನಿಯಂತ್ರಣ ಸಂಸ್ಥೆ ಬಗ್ಗೆ ನಕಾರಾತ್ಮಕವಾಗಿ ತೋರಿಸಲಾಗಿದೆ. ಇದು ಸಂಸ್ಥೆಯ ಮೇಲಿರುವ ವಿಶ್ವಾಸವನ್ನು ಕುಗ್ಗಿಸಲಿದೆ ಎಂದು ಅವರು ಹೇಳಿದ್ದಾರೆ.

ಪರಿಹಾರ ಹಣ ಮಂಜೂರಾದರೆ ಅದನ್ನು ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗಾಗಿ ಟಾಟಾ ಮೆಮೋರಿಯಲ್ ಕ್ಯಾನ್ಸರ್ ಆಸ್ಪತ್ರೆಗೆ ದಾನ ಮಾಡಬೇಕೆಂದು ಅವರು ಕೋರಿದ್ದಾರೆ.

ವಾಂಖೆಡೆ ವಿರುದ್ಧ ₹25 ಕೋಟಿ ಲಂಚ ಆರೋಪ

ಡ್ರಗ್ಸ್‌ ಪ್ರಕರಣದಲ್ಲಿ ಆರ್ಯನ್‌ ಖಾನ್‌ ಬಂಧಿಸದಿರಲು ₹25 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ವಾಂಖೆಡೆ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಪ್ರಕರಣ ವಿಚಾರಣಾ ಹಂತದಲ್ಲಿದೆ.

2021ರ ಅಕ್ಟೋಬರ್ 2ರಂದು ವಾಂಖೆಡೆ ನೇತೃತ್ವದ ತಂಡವು ಕ್ರೂಸ್ ಮೇಲೆ ದಾಳಿ ನಡೆಸಿತ್ತು. ಹಡಗಿನಲ್ಲಿದ್ದ ಪ್ರಯಾಣಿಕರಿಗೆ ಬೆದರಿಸಿದ್ದಲ್ಲದೇ, ₹25 ಕೋಟಿ ನೀಡುವಂತೆ ಆರ್ಯನ್‌ ಖಾನ್‌ ಕುಟುಂಬಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಅವರ ಮೇಲಿದೆ.

ಈ ಸಂಬಂಧ ಭ್ರಷ್ಟಾಚಾರ ಮತ್ತು ವಿವಿಧ ನಿಯಮಗಳ ಅಡಿಯಲ್ಲಿ ವಾಂಖೆಡೆ ಹಾಗೂ ಇತರ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಸದ್ಯ ಇವರು ಭಾರತೀಯ ಕಂದಾಯ ಇಲಾಖೆಯಲ್ಲಿ ಅಧಿಕಾರಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.