ADVERTISEMENT

ಲೇಖಕ ಅಹೋರಾತ್ರ ಮನೆಗೆ ನುಗ್ಗಿ ನಟ ಸುದೀಪ್‌ ಅಭಿಮಾನಿಗಳಿಂದ ದಾಂದಲೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2021, 13:32 IST
Last Updated 21 ಮಾರ್ಚ್ 2021, 13:32 IST
ಅಹೋರಾತ್ರ (ಟ್ವಿಟರ್‌ ಚಿತ್ರ)
ಅಹೋರಾತ್ರ (ಟ್ವಿಟರ್‌ ಚಿತ್ರ)   

ಬೆಂಗಳೂರು: ನಟ ಕಿಚ್ಚ ಸುದೀಪ್‌ ಅಭಿಮಾನಿಗಳು ಲೇಖಕ ಅಹೋರಾತ್ರ ಅವರ ಮನೆಗೆ ನುಗ್ಗಿ ದಾಂದಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಮಾರ್ಚ್‌ 20ರಂದು ರಾತ್ರಿ ಸುದೀಪ್‌ ಅಭಿಮಾನಿಗಳು ತಮ್ಮ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಅಹೋರಾತ್ರ ಆರೋಪಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಸುದೀಪ್‌ ಅಭಿಮಾನಿಗಳ ಸಂಘದ ಕೆಲವರು ತಾವು ಹಲ್ಲೆ ಮಾಡಲು ಹೋಗಿಲ್ಲ ಎಂದು ಫೇಸ್‌ಬುಕ್‌ ಲೈವ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ. ಉಭಯರ ನಡುವಿನ ಸಂಘರ್ಷ ಫೇಸ್‌ಬುಕ್‌ ವೇದಿಕೆಯಲ್ಲಿ ಜೋರಾಗಿ ಸಾಗಿದೆ. ಘಟನೆಯ ವಿಡಿಯೋ ನೀಡಿದ ಒಂಬತ್ತು ಸಾವಿರಕ್ಕೂ ಅಧಿಕ ಮಂದಿ ತಮ್ಮದೇ ದಾಟಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

‘ಅಹೋರಾತ್ರ ಅವರ ಮನೆಯಲ್ಲಿ ನಡೆದ ದಾಂದಲೆ ಪ್ರಕರಣದ ವಿಡಿಯೋಗಳು ಕೂಡಾ ಹರಿದಾಡುತ್ತಿವೆ. ಸುದೀಪ್ ಅಭಿಮಾನಿ ಸಂಘದ ರಾಜ್ಯಾಧ್ಯಕ್ಷ ನವೀನ್ ಗೌಡ, ಅನೇಕರನ್ನು ಕರೆದುಕೊಂಡು ಬಂದು ಹಲ್ಲೆ ನಡೆಸಿದ್ದಾರೆ’ ಎಂದು ಅಹೋರಾತ್ರ ಹೇಳಿದ್ದಾರೆ.

ADVERTISEMENT

ಈ ನಡುವೆ ರಾಜ್ಯದ ಪೊಲೀಸರು ತಮಗೆ ರಕ್ಷಣೆ ನೀಡುತ್ತಿಲ್ಲ. ಘಟನೆಗೆ ಸಂಬಂಧಿಸಿದಂತೆ ಸುದೀಪ್‌ ಅವರ ಬಂಧನವಾಗಬೇಕು ಎಂದು ಅಹೋರಾತ್ರ ಆಗ್ರಹಿಸಿದ್ದಾರೆ.

‘ನಮಗೆ ಅಭದ್ರತೆ ಕಾಡುತ್ತಿದೆ. ಹಲ್ಲೆ ಆದ ನಂತರ ಪೊಲೀಸರು ನಾವಿದ್ದೇವೆ ಎಂದು ಭರವಸೆ ನೀಡಿದ್ದರು. ಆದರೆ, ರಾತ್ರಿ ಯಾವ ಪೊಲೀಸರೂ ನಮ್ಮ ಮನೆಯ ಬಳಿ ಇರಲಿಲ್ಲ. ಹಲ್ಲೆ ಪೊಲೀಸರ ಎದುರೇ ನಡೆದಿದೆ. ಪೊಲೀಸರು ತಡೆಯಲು ಮುಂದಾಗಲಿಲ್ಲ’ ಎಂದು ಅಹೋರಾತ್ರ ಹೇಳಿದ್ದಾರೆ.

ವಿವಾದವೇನು?
ಸುದೀಪ್‌ ಅವರು ರಮ್ಮಿ ಆಟದ ಪ್ರಚಾರ ರಾಯಭಾರಿ ಆಗಿದ್ದು, ಅದರ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ‘ಇದು ಯುವಜನರನ್ನು ಹಾದಿ ತಪ್ಪಿಸುತ್ತಿದೆ. ಎಷ್ಟೋ ಕುಟುಂಬಗಳನ್ನು ಹಾಳು ಮಾಡುತ್ತಿದೆ. ಸುದೀಪ್‌ ಅವರಂಥ ಪ್ರಬುದ್ಧ ನಟರು ಈ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಬಾರದು’ ಎಂದು ಅಹೋರಾತ್ರ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಸಿದ್ದರು. ಇದು ಸುದೀಪ್‌ ಅಭಿಮಾನಿಗಳನ್ನು ಕೆರಳಿಸಿತ್ತು.

ಕಳೆದ ತಿಂಗಳು ದರ್ಶನ್‌ ಅಭಿಮಾನಿಗಳು ಬನ್ನೂರಿನಲ್ಲಿ ಹಿರಿಯ ನಟ ಜಗ್ಗೇಶ್‌ ಅವರಿಗೆ ಮುತ್ತಿಗೆ ಹಾಕಿ ಗಲಾಟೆ ಮಾಡಿದ ಘಟನೆ ನಡೆದಿದ್ದನ್ನು ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.