ADVERTISEMENT

25 ದಿನಗಳಲ್ಲಿ ಬ್ಯಾಗ್ರೌಂಡ್‌ ಸ್ಕೋರ್‌: 'ಮಾರ್ಕ್‌' ಸಿನಿಮಾ ಕುರಿತು ಅಜನೀಶ್ ಮಾತು

ಅಭಿಲಾಷ್ ಪಿ.ಎಸ್‌.
Published 23 ಡಿಸೆಂಬರ್ 2025, 1:30 IST
Last Updated 23 ಡಿಸೆಂಬರ್ 2025, 1:30 IST
ಸುದೀಪ್‌ 
ಸುದೀಪ್‌    

‘ಉಳಿದವರು ಕಂಡಂತೆ’, ‘ಕಿರಿಕ್‌ ಪಾರ್ಟಿ’, ‘ದಿಯಾ’, ‘ಕಾಂತಾರ’ ಮೂಲಕ ಗುರುತಿಸಿಕೊಂಡಿರುವ ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್‌ ಪಾಲಿಗೆ 2025 ಮಹತ್ವದ ವರ್ಷ.

ಈ ವರ್ಷ ಅಜನೀಶ್‌ ನಿರ್ಮಾಣದ ಮೊದಲ ಸಿನಿಮಾ ‘ಜಸ್ಟ್‌ ಮ್ಯಾರೀಡ್‌’ ತೆರೆಕಂಡಿತು. ಜೊತೆಗೆ ಅವರು ಸಂಗೀತ ನಿರ್ದೇಶನ ಮಾಡಿರುವ ‘ಕಾಂತಾರ–ಚಾಪ್ಟರ್‌ 1’, ‘ದಿ ಡೆವಿಲ್‌’ ರಿಲೀಸ್‌ ಆಗಿದ್ದು, ಇದೀಗ ನಟ ಸುದೀಪ್‌ ನಟನೆಯ ‘ಮಾರ್ಕ್‌’ ತೆರೆಗೆ ಬರಲು ಸಜ್ಜಾಗಿದೆ. ಇದು ಸುದೀಪ್‌ ಅವರ ಜೊತೆ ಅಜನೀಶ್‌ ಅವರ ಮೂರನೇ ಪ್ರಾಜೆಕ್ಟ್‌. ‘ವಿಕ್ರಾಂತ್‌ ರೋಣ’, ‘ಮ್ಯಾಕ್ಸ್‌’ ಬಳಿಕ ‘ಮಾರ್ಕ್‌’ ಮೂಲಕ ಸಂಗೀತದ ಮಿಂಚು ಹರಿಸಲು ಬರುತ್ತಿದ್ದಾರೆ ಅಜನೀಶ್‌.

‘ಮಾರ್ಕ್‌’ ಕುರಿತು ಮಾತಿಗಿಳಿದ ಅಜನೀಶ್‌, ‘ಪ್ರತಿ ಸಿನಿಮಾವೂ ಒಂದು ಸವಾಲು. ಪ್ರತಿಯೊಬ್ಬ ನಿರ್ದೇಶಕರ ಆಲೋಚನೆಗಳು ಭಿನ್ನ ಭಿನ್ನವಾಗಿರುತ್ತಲ್ಲವೇ. ‘ಮ್ಯಾಕ್ಸ್‌’ ಸಿನಿಮಾಗೆ ಹೋಲಿಸಿದರೆ ‘ಮಾರ್ಕ್‌’ನ ಚಿತ್ರಕಥೆ ಇನ್ನೂ ವೇಗವಾಗಿದೆ. ಮೇಕಿಂಗ್‌, ತಾರಾಗಣದಲ್ಲೂ ದೊಡ್ಡದಾಗಿದೆ. ದೊಡ್ಡ ಕ್ಯಾನ್ವಾಸ್‌ನ ಈ ಸಿನಿಮಾ ಇನ್ನಷ್ಟು ಮಾಸ್‌ ಆಗಿ ಮೂಡಿಬಂದಿದೆ.

ADVERTISEMENT

‘ಮ್ಯಾಕ್ಸ್‌’ ಒಂದು ರಾತ್ರಿಯಲ್ಲಿ ಒಂದು ಸ್ಥಳದಲ್ಲಿ ನಡೆಯುವ ಕಥೆ ಹೊಂದಿತ್ತು. ‘ಮಾರ್ಕ್‌’ ಹಲವು ಪ್ರದೇಶಗಳಲ್ಲಿ ಚಿತ್ರೀಕರಣಗೊಂಡಿದೆ. ಆ ವೇಗಕ್ಕೆ ಹೊಂದಿಕೊಂಡು ಹೋಗುವುದೇ ನನಗೆ ದೊಡ್ಡ ಸವಾಲಾಗಿತ್ತು. ಸಿನಿಮಾವೊಂದನ್ನು ಕೈಗೆತ್ತಿಕೊಂಡಾಗ ದೃಶ್ಯಗಳಿಗೆ ಬ್ಯಾಗ್ರೌಂಡ್‌ ಸ್ಕೋರ್‌ ಅನ್ನು ಪರೀಕ್ಷಿಸಿ ನೋಡುತ್ತೇವೆ. ‘ಮಾರ್ಕ್‌’ಗೆ ಅಂತಹ ಅವಕಾಶವೇ ಸಿಗಲಿಲ್ಲ. ಒಮ್ಮೆಯೇ ಹೈಪಾಯಿಂಟ್‌ನಿಂದ ಆರಂಭಿಸಬೇಕಿತ್ತು. ಈ ಹಿಂದೆ ತೆಲುಗಿನ ‘ವಿರೂಪಾಕ್ಷ’ ಎನ್ನುವ ಸಿನಿಮಾಗೆ ಕೇವಲ ಆರು ದಿನಗಳಲ್ಲಿ ಹಿನ್ನೆಲೆ ಸಂಗೀತ ನೀಡಿದ್ದೆ. ‘ಮಾರ್ಕ್‌’ಗೆ 20–25 ದಿನಗಳಲ್ಲಿ ಬ್ಯಾಗ್ರೌಂಡ್‌ ಸ್ಕೋರ್‌ ಮಾಡಿದ್ದೇನೆ. ಕೇವಲ ನಾಲ್ಕೂವರೆ ತಿಂಗಳಲ್ಲಿ ಒಂದು ಪ್ರಾಜೆಕ್ಟ್‌ ಪೂರ್ಣಗೊಳಿಸಿದ್ದೇವೆ’ ಎನ್ನುತ್ತಾರೆ.

ಇಷ್ಟವಾದ ಸಾನ್ವಿ ದನಿ

‘ಹಿಂದಿನ ‘ಮ್ಯಾಕ್ಸ್‌’ನಲ್ಲಿ ‘ಮಸ್ತ್‌ ಮಲೈಕಾ’ ರೀತಿಯ ಹಾಡನ್ನು ಹಾಕಲು ಅವಕಾಶವೇ ಇರಲಿಲ್ಲ. ‘ಮಾರ್ಕ್‌’ನಲ್ಲಿ ಈ ಹಾಡಿಗೆ ಒಂದು ಸನ್ನಿವೇಶವೂ ಸಿಕ್ಕಿತ್ತು. ‘ವಿಕ್ರಾಂತ್‌ ರೋಣ’ ಸಿನಿಮಾದ ‘ರ..ರ..ರಕ್ಕಮ್ಮ’ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿತ್ತು. ಇದೀಗ ‘ಮಸ್ತ್‌ ಮಲೈಕಾ’ ಮೂಲಕ ಮತ್ತೊಮ್ಮೆ ಸುದೀಪ್‌ ಅವರ ಡಾನ್ಸ್‌ನ ಸೊಬಗು ಅಭಿಮಾನಿಗಳಿಗೆ ದೊರಕಿದೆ. ನನ್ನ ಜೊತೆಗಿರುವ ನಿರ್ದೇಶಕರಾದ ಸಿ.ಆರ್‌.ಬಾಬಿ ಅವರೇ ಗಾಯಕರನ್ನು ಆಯ್ಕೆ ಮಾಡುತ್ತಾರೆ. ಸುದೀಪ್‌ ಅವರ ಪುತ್ರಿ ಸಾನ್ವಿ ಅವರಿಂದ ಹಾಡಿಸಬೇಕು ಎಂದು ಬಾಬಿ ಹೇಳಿದ್ದರು. ಇದನ್ನು ಸುದೀಪ್‌ ಅವರ ಗಮನಕ್ಕೆ ತಂದಿದ್ದೆವು. ‘ಮಸ್ತ್‌ ಮಲೈಕಾ’ಗೆ ಸಾನ್ವಿ ಅವರ ದನಿಯನ್ನು ಪರಿಶೀಲಿಸಿ ಸಿನಿಮಾದಲ್ಲಿ ಬಳಸಿಕೊಳ್ಳುವ ಕುರಿತು ಸುದೀಪ್‌ ಅವರ ಒಪ್ಪಿಗೆ ಪಡೆದುಕೊಳ್ಳಲು ನಿರ್ಧರಿಸಿದೆವು. ಅವರ ದನಿ ನನಗೆ ಇಷ್ಟವಾಯಿತು. ಈ ನಿರ್ಧಾರವನ್ನು ಸುದೀಪ್‌ ಅವರಿಗೆ ತಿಳಿಸಿದೆ’ ಎಂದರು ಅಜನೀಶ್‌. 

ಸುದೀಪ್‌ ನಮಗೆಲ್ಲ ಪ್ರೇರಣೆ

‘ಸುದೀಪ್‌ ಅವರ ಜೊತೆಗೆ ಕೆಲಸ ಮಾಡುವುದೇ ಸಂತೋಷ. ಪೂರ್ಣ ಸ್ವತಂತ್ರ ನೀಡುವ ಅವರ ಗುಣ ನಮಗೆ ರೆಕ್ಕೆ ಬಿಚ್ಚಿ ಹಾರಲು ಪ್ರೇರಣೆ. ಸಂಗೀತ ಕ್ಷೇತ್ರದಲ್ಲಿ ಇದೇ ವೇಗದಲ್ಲಿ ಮತ್ತಷ್ಟು ಸಿನಿಮಾಗಳನ್ನು ಮಾಡುವ ಹಂಬಲವಿದೆ. ಇದೊಂದು ತಂಡದ ಪ್ರಯತ್ನ. ಸುದೀಪ್‌ ಅವರು ಮುಂಚೂಣೆಯಲ್ಲಿದ್ದುಕೊಂಡು ಎಲ್ಲರನ್ನೂ ಪ್ರೋತ್ಸಾಹಿಸಿದರು. ಇದೇ ದಿನಕ್ಕೆ ಸಿನಿಮಾ ರಿಲೀಸ್‌ ಎಂದು ಘೋಷಿಸಿದರು. ಈ ರೀತಿ ಪ್ರೇರಣೆಯಿದ್ದರೆ ಎರಡೂವರೆ ತಿಂಗಳಲ್ಲೇ ಸಿನಿಮಾಗಳನ್ನು ತರಬಹುದು’ ಎನ್ನುತ್ತಾರೆ ಅಜನೀಶ್‌ ಲೋಕನಾಥ್‌.

ಇಷ್ಟು ಕಡಿಮೆ ಅವಧಿಯಲ್ಲಿ ಕನ್ನಡ ಸಿನಿಮಾವೊಂದಕ್ಕೆ ಬ್ಯಾಗ್ರೌಂಡ್‌ ಸ್ಕೋರ್‌ ಮಾಡಿರುವುದು ಇದೇ ಮೊದಲು. ಜೊತೆಗೆ ಇದೇ ಅವಧಿಯಲ್ಲಿ ಅಂದಾಜು 17–20 ಕ್ಯಾರೆಕ್ಟರ್‌ ಥೀಮ್‌ಗಳನ್ನು ಸಿದ್ಧಪಡಿಸಿದ್ದೆ.
–ಅಜನೀಶ್‌ ಲೋಕನಾಥ್‌, ಸಂಗೀತ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.