ADVERTISEMENT

‘ಹಬ್ಬಕ್ಕಿಂತ ಕೊರೊನಾ ಜಾಗ್ರತೆ ಇರಲಿ’

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2020, 19:30 IST
Last Updated 24 ಮಾರ್ಚ್ 2020, 19:30 IST
ರಚಿತಾ ರಾಮ್‌
ರಚಿತಾ ರಾಮ್‌   

ಕೊರೊನಾ ಸೋಂಕಿನ ಭೀತಿಯು ಯುಗಾದಿ ಹಬ್ಬಕ್ಕೂ ತಟ್ಟಿದೆ. ಕನ್ನಡ ಚಿತ್ರರಂಗದ ನಟ, ನಟಿಯರಿಗೆ ಈಗ ಬಿಡುವು ಸಿಕ್ಕಿದೆ. ಆದರೆ, ಯಾರೊಬ್ಬರ ಮನದಲ್ಲೂ ಹಬ್ಬದ ಸಂಭ್ರಮವಿಲ್ಲ. ಕೊರೊನೊ ಸೋಂಕು ಹರಡದಂತೆ ಎಚ್ಚರವಹಿಸಿ ಹಬ್ಬ ಆಚರಿಸಬೇಕು; ನಾವು ಕೂಡ ಮನೆಯಲ್ಲಿಯೂ ಉಳಿಯುತ್ತೇವೆ ಎನ್ನುವುದು ಅವರು ಅಭಿಮಾನಿಗಳಿಗೆ ನೀಡುವ ಸಲಹೆ.

ಹಬ್ಬದ ನೆಪದಲ್ಲಿ ಮನೆಯಿಂದ ಹೊರಗೆ ಬರಬಾರದು. ಗುಂಪುಗೂಡಬಾರದು. ಇದರಿಂದ ಅಪಾಯ ಹೆಚ್ಚು. ಹಬ್ಬದ ಸಂಭ್ರಮದಲ್ಲಿ ಮೈಮರೆತರೆ ಅಪಾಯ ಕಟ್ಟಿಟ್ಟಬುತ್ತಿ ಎಂದು ಎಚ್ಚರಿಕೆ ನೀಡಿದ್ದಾರೆ.

‘ನಗರದಿಂದ ಊರಿಗೆ ಹೋಗಬಾರದು ಎನ್ನುವ ಕಾರಣಕ್ಕೆಯೇ ನಾನು ಊರಿಗೆ ಹೋಗುವುದಿಲ್ಲ. ಬೆಂಗಳೂರಿಯಲ್ಲಿಯೇ ಇರುತ್ತೇನೆ. ಮನೆಬಿಟ್ಟು ಎಲ್ಲಿಗೂ ಹೋಗುವುದಿಲ್ಲ. ಬೆಂಗಳೂರಿನಲ್ಲಿ ವಾಸಿಸುವವರು ಹಳ್ಳಿಗಳಿಗೆ ಹೋಗಿ ಅಲ್ಲಿನವರಿಗೂ ಸೋಂಕು ಹಬ್ಬಿಸಬೇಡಿ’ ಎನ್ನುವುದು ‘ಡಾಲಿ’ ಖ್ಯಾತಿಯ ಧನಂಜಯ್‌ ಅವರ ಸಲಹೆ.

ADVERTISEMENT

‘ಕೊರೊನಾ ಸೋಂಕು ಇದ್ದರೆ ಗೊತ್ತಾಗುವುದಿಲ್ಲ. ಹಳ್ಳಿಗಳಿಗೆ ಸೋಂಕು ತಲುಪಿಸಿದರೆ ಕಷ್ಟವಾಗಲಿದೆ. ವಾಸ್ತವಾಂಶವನ್ನು ಅರ್ಥ ಮಾಡಿಕೊಂಡು ಮನೆಯಲ್ಲಿಯೇ ಇರಬೇಕು. ಸರ್ಕಾರದ ಕಾನೂನು ಪಾಲಿಸಬೇಕು. ವೈದ್ಯರು ಮತ್ತು ಸರ್ಕಾರದೊಟ್ಟಿಗೆ ನಾವೆಲ್ಲರೂ ಕೈಜೋಡಿಸಬೇಕಿದೆ. ಯಾವುದೇ ಕಾರಣಕ್ಕೂ ಭೀತಿಗೆ ಒಳಗಾಗಬೇಡಿ’ ಎನ್ನುತ್ತಾರೆ ಅವರು.

ನಟ ಜಗ್ಗೇಶ್‌ ಕೂಡ ಮನೆಯಲ್ಲಿಯೇ ಉಳಿದುಕೊಳ್ಳಿ ಎಂದು ಟ್ವೀಟ್‌ ಮಾಡಿದ್ದಾರೆ. ‘ಸ್ವಲ್ಪ ಯಾಮಾರಿದರೆ ಕೊರೊನಾ ಸೋಂಕಿತರ ಸಂಖ್ಯೆ ಕೆಲವೇ ದಿನಗಳಲ್ಲಿ ಲಕ್ಷ ದಾಟಿ ಬಿಡುತ್ತದೆ. ಆಮೇಲೆ ಯಾವ ಸರ್ಕಾರ, ವೈದ್ಯರು, ಹಣ ನಮ್ಮ, ನಿಮ್ಮನ್ನು
ಕಾಪಾಡಲಾರದು. ದಯಮಾಡಿ ಸರ್ವರ ಒಳಿತಿಗಾಗಿ ನಿಮಗೆಷ್ಟೇ ಕಷ್ಟವಾದರು ಸಹಿಸಿಕೊಳ್ಳಿ. ಮನೆಯಲ್ಲೇ ಉಳಿದು ಸರ್ಕಾರದ ಆಜ್ಞೆ ಪಾಲಿಸಿ’ ಎಂದಿದ್ದಾರೆ.

ನಟ ದರ್ಶನ್‌ ಕೂಡ ಮನೆಯಲ್ಲಿ ಉಳಿದುಕೊಂಡಿದ್ದಾರೆ. ‘ಮಾರಕ ಕೊರೊನಾ ವಿರುದ್ಧ ಎಲ್ಲರೂ ಜಾಗೃತರಾಗಬೇಕು. ಇದರ ಬಗ್ಗೆ ಅರಿವು ಮೂಡಿಸಲು ಸರ್ಕಾರ, ವೈದ್ಯರು, ಪೊಲೀಸರು ಶ್ರಮಿಸುತ್ತಿದ್ದಾರೆ. ಸೋಂಕಿನ ಬಗ್ಗೆ ತಿಳಿದರೂ ಹಬ್ಬಗಳಿಗಾಗಿ ಊರಿಗೆ ಹೋಗುವುದು ತಪ್ಪು. ಹಬ್ಬಕ್ಕಾಗಿ ವಾಹನಗಳಲ್ಲಿ ಸಂಚರಿಸಬೇಡಿ’ ಎಂದು ಸಲಹೆ ನೀಡಿದ್ದಾರೆ.

‘ಇಟಲಿ, ಸ್ಪೇನ್‌ನಲ್ಲಿ ಮುಂಜಾಗ್ರತಾ ಕ್ರಮಕೈಗೊಳ್ಳಲಿಲ್ಲ. ಹಾಗಾಗಿ, ಅಲ್ಲಿನ ಅನಾಹುತಗಳು ನಮ್ಮ ಕಣ್ಣ ಮುಂದಿವೆ. ದೇಶದ ಹಿತಕ್ಕಾಗಿ ಎಲ್ಲಾ ನಿಯಮಗಳನ್ನೂ ಪಾಲಿಸಬೇಕು’ ಎಂದಿದ್ದಾರೆ ದರ್ಶನ್.

ನಟಿ ರಚಿತಾ ರಾಮ್‌ ಯುಗಾದಿ ಹಬ್ಬದ ಸಂಭ್ರಮದ ನಡುವೆ ಮಾಡಿರುವ ಟ್ವೀಟ್‌ ಕುತೂಹಲಕಾರಿಯಾಗಿದೆ. ‘ಆರೋಗ್ಯವೇ ಭಾಗ್ಯ; ಇದನ್ನು ಎಲ್ಲರೂ ಅರಿತುಕೊಳ್ಳಬೇಕು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.