ಲವ್ ಮಾಕ್ಟೇಲ್ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್
ಆರ್.ಚಂದ್ರು ನಿರ್ಮಾಣದ ‘ಫಾದರ್’ ಚಿತ್ರದ ಚಿತ್ರೀಕರಣ ಮುಗಿದು, ಪೋಸ್ಟ್ ಪ್ರೊಡಕ್ಷನ್ ಕೂಡ ಮುಕ್ತಾಯದ ಹಂತದಲ್ಲಿದೆ. ಶಶಾಂಕ್ ನಿರ್ದೇಶನದ ‘ಬ್ರಾಟ್’ ಚಿತ್ರ ಕೂಡ ಅಂತಿಮ ಹಂತದಲ್ಲಿದೆ. ಈ ಚಿತ್ರಕ್ಕಾಗಿ ಕೇಶವಿನ್ಯಾಸ ಬದಲಿಸಿದ್ದೆ. ಹೀಗಾಗಿ ಕೂದಲು ಬೆಳೆಯುತ್ತಿದ್ದಂತೆ ‘ಲವ್ ಮಾಕ್ಟೇಲ್–3’ ಚಿತ್ರೀಕರಣ ಪ್ರಾರಂಭವಾಗಲಿದೆ. ಈಗಾಗಲೇ ಒಂದು ದಿನ ಚಿತ್ರೀಕರಣಗೊಂಡಿದೆ’ ಎಂದು ಮಾತು ಪ್ರಾರಂಭಿಸಿದರು ಕೃಷ್ಣ.
‘ಲವ್ ಮಾಕ್ಟೇಲ್–3’ ಹಿಂದಿನ ಎರಡು ಭಾಗಗಳಿಂತ ಭಿನ್ನವಾಗಿರುತ್ತದೆ. ಅಲ್ಲಿನ ಪಾತ್ರಗಳು ಮುಂದುವರಿಯುತ್ತವೆ. ಆದರೆ ಇದು ಬೇರೆ ರೀತಿಯದ್ದೇ ಸಿನಿಮಾ. ತುಂಬಾ ಹೊಸ ಪಾತ್ರಗಳು ಬರುತ್ತವೆ. ವಿಭಿನ್ನವಾದ, ಜನಕ್ಕೆ ಖುಷಿ ಕೊಡುವ ಪಾತ್ರಗಳು ಇಲ್ಲಿವೆ. ತಾಂತ್ರಿಕ ತಂಡ ಅದೇ ಇರುತ್ತದೆ. ಬೆಂಗಳೂರಿನಲ್ಲಿ ಕಥೆ ನಡೆದರೂ ಕಥೆ ಬೇರೆ ಬೇರೆ ಊರುಗಳಲ್ಲಿ ಪಯಣಿಸುತ್ತದೆ. ಈ ಜಾನರ್‌ಗೆ ಲೋಕೇಷನ್ ತುಂಬ ಮಹತ್ವದ್ದು. ಜನ ಕಥೆಯ ಮೂಡ್‌ಗೆ ಹೋಗಬೇಕು ಎಂದರೆ ಕಣ್ಣಿಗೆ ಸುಂದರವಾದ ದೃಶ್ಯಗಳು ಕಾಣಿಸಬೇಕು. ಅದಕ್ಕಾಗಿ ಕಥೆ ಬೇರೆಬೇರೆ ಊರುಗಳಲ್ಲಿ ನಡೆಯುತ್ತದೆ’ ಎಂದು ಅವರು ಮಾಹಿತಿ ನೀಡಿದರು.
‘ಲವ್ ಮಾಕ್ಟೇಲ್–2’, ಮೊದಲನೆ ಭಾಗಕ್ಕಿಂತ ದೊಡ್ಡ ಹಿಟ್. ಮೂರನೇ ಭಾಗ ಅವೆರಡಕ್ಕಿಂತ ದೊಡ್ಡ ಬಜೆಟ್‌ನ ಸಿನಿಮಾ. ಈ ಶೀರ್ಷಿಕೆಗೆ ಒಂದಷ್ಟು ಕನಿಷ್ಠ ವಹಿವಾಟುಗಳು ಆಗುತ್ತವೆ ಎಂಬುದು ಗೊತ್ತಿದೆ. ಹೀಗಾಗಿ ನಿರ್ಮಾಪಕನಾಗಿ ನನಗೆ ಹೆಚ್ಚೇನು ರಿಸ್ಕ್ ಇಲ್ಲ. ಆದರೆ ಕಥೆಯಿಂದಾಗಿ ಬಜೆಟ್ ಹಿಂದಿನ ಸಿನಿಮಾಗಳಿಗಿಂತ ಮೂರು ಪಟ್ಟು ಹೆಚ್ಚಾಗುತ್ತಿದೆ. ಯಶಸ್ಸು ಅದೇ ಮಟ್ಟದಲ್ಲಿ ಸಿಗುತ್ತದೆಯಾ ಎಂಬುದು ಗೊತ್ತಿಲ್ಲ. ಒಟ್ಟಿನಲ್ಲಿ ಹಿಂದಿನ ಎರಡು ಭಾಗಕ್ಕಿಂತ ಅದ್ದೂರಿಯಾದ ಸಿನಿಮಾ ಮಾಡುವ ಇರಾದೆಯಿದೆ’ ಎಂದರು.
‘ಈ ಭಾಗವನ್ನು ಕನ್ನಡದಲ್ಲಿ ಮಾತ್ರ ಮಾಡುತ್ತಿದ್ದೇವೆ. ಉಳಿದ ಭಾಷೆಗಳಿಗೆ ಡಬ್ ಮಾಡುತ್ತೇವೆ. ಮೊದಲ ಭಾಗ ಮಾಡಿದ್ದಾಗ ಮುಂದಿನ ಭಾಗ ಮಾಡುವ ಆಲೋಚನೆ ಇರಲಿಲ್ಲ. ನಂತರ ಆ ಆಲೋಚನೆ ಬಂದಿದ್ದು. ಒಂದೇ ಕಥೆಯನ್ನು ವಿಸ್ತರಿಸಿಕೊಂಡು ಹೋಗುವುದು ಸುಲಭವಲ್ಲ. ವಿಷಯಗಳು ಖಾಲಿಯಾಗುತ್ತವೆ. ‘ಲವ್ ಮಾಕ್ಟೇಲ್’ಗೆ 19 ದಿನಗಳಲ್ಲಿ ಸ್ಕ್ರಿಪ್ಟ್ ಬರೆದಿದ್ದೆ. ಆದರೆ ಮೂರನೇ ಭಾಗಕ್ಕೆ ಮೂರುವರೆ ವರ್ಷ ತೆಗೆದುಕೊಂಡಿರುವೆ. ಸಿಕ್ವೆಲ್ ಕಥೆಗಳನ್ನು ಹೇಳುವುದು ಸುಲಭವಲ್ಲ’ ಎನ್ನುತ್ತಾರೆ ಅವರು.
‘ನಾನು ನಿರ್ದೇಶಕ ಅಲ್ಲ, ಬರಹಗಾರ ಅಲ್ಲ. ಆಕಸ್ಮಿಕವಾಗಿ ‘ಲವ್ ಮಾಕ್ಟೇಲ್’ ಮಾಡಿದ್ದು. ಅದರ ಯಶಸ್ಸಿನಿಂದ ಮುಂದಿನ ಭಾಗಗಳು ಹುಟ್ಟಿಕೊಂಡಿದ್ದು. ಇದರ ಹೊರತಾಗಿ ಬೇರೇನು ಬರೆಯುತ್ತಿಲ್ಲ. ಮುಗಿದಿರುವ ಎರಡು ಸಿನಿಮಾಗಳಲ್ಲಿ ಯಾವುದು ಮೊದಲು ತೆರೆಗೆ ಬರುತ್ತದೆ ಗೊತ್ತಿಲ್ಲ. ಮೂರು ಸಿನಿಮಾಗಳು ಬೇರೆ ರೀತಿಯವು. ‘ಬ್ರಾಟ್’ ಯುವ ಮನಸ್ಸುಗಳನ್ನು ಸೆಳೆಯುವ ಸಿನಿಮಾ. ‘ಫಾದರ್’ ಭಾವನಾತ್ಮಕ ಚಿತ್ರ. ಎರಡೂ ಈ ವರ್ಷವೇ ತೆರೆ ಕಾಣಲಿದೆ’ ಎಂದು ಮಾತಿಗೆ ವಿರಾಮವಿತ್ತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.