ಆಯಾ ಕಾಲಕ್ಕೆ ಹಿಟ್ ಆದ ಸಿನಿಮಾ ಕಥೆಗಳು, ಹಾಡುಗಳು, ಹಾಸ್ಯದ ತುಣುಕುಗಳು ಯಕ್ಷಗಾನದ ರಂಗಸ್ಥಳಕ್ಕೆ ಬಂದು ಬಹಳ ಕಾಲವಾಗಿದೆ. ಅದರಂತೆ ಒಂದಷ್ಟು ಯಕ್ಷಗಾನದ ಸನ್ನಿವೇಶಗಳೂ ಸಿನಿಮಾದಲ್ಲಿ ನುಸುಳಿದ್ದಿದೆ. ಆದರೆ ಸಂಗೀತ ನಿರ್ದೇಶಕ ರವಿ ಬಸ್ರೂರು ಪೂರ್ಣ ಯಕ್ಷಗಾನವನ್ನೇ ಸಿನಿಮಾವಾಗಿಸುವ ವಿಶಿಷ್ಠ ಪ್ರಯೋಗಕ್ಕೆ ಕೈ ಹಾಕಿದ್ದಾರೆ.
‘ವೀರ ಚಂದ್ರಹಾಸ’ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಓಂಕಾರ್ ಮೂವೀಸ್, ರವಿ ಬಸ್ರೂರ್ ಮೂವೀಸ್ ಸಹಯೋಗದೊಂದಿಗೆ ಈ ಚಿತ್ರ ನಿರ್ಮಾಣಗೊಂಡಿದೆ. ಯಕ್ಷಗಾನ ಕಲಾವಿದರೇ ಪ್ರಮುಖ ಪಾತ್ರದಲ್ಲಿರುವ ಈ ಚಿತ್ರಕ್ಕೆ ನಿರ್ದೆಶಕರಿಲ್ಲ. ಬದಲಿಗೆ ಬಸ್ರೂರು ತಂಡದ ಪರಿಶ್ರಮ ಎಂದು ಪೋಸ್ಟರ್‌ನಲ್ಲಿ ಹಾಕಲಾಗಿದೆ.
ಯಕ್ಷಗಾನದ ಪೌರಾಣಿಕ ಕಥೆಯೊಂದನ್ನು ಸಿನಿಮೀಯವಾಗಿ ಚಿತ್ರಿಸಲಾಗಿದೆ ಎಂಬುದು ಟೀಸರ್‌ನಿಂದ ಮೇಲ್ನೋಟಕ್ಕೆ ತಿಳಿಯುತ್ತಿದೆ. ದೃಶ್ಯಗಳು ‘ಕಾಂತಾರ’ ಸಿನಿಮಾವನ್ನು ನೆನಪಿಸುತ್ತಿದೆ. ರವಿ ಬಸ್ರೂರು ಅವರ ಸಂಗೀತ, ಕಿರಣ್‌ಕುಮಾರ್ ಆರ್ ಛಾಯಾಚಿತ್ರಗ್ರಹಣವಿದೆ. ಹಟ್ಟಿಯಂಗಡಿ ಮೇಳದ ಯಕ್ಷ ಕಲಾವಿದ ಶಿಥಿಲ್ ಶೆಟ್ಟಿ ಚಿತ್ರದ ನಾಯಕ. ಯಕ್ಷತಾರೆ, ಕಿರುತೆರೆ ನಟಿ ನಾಗಶ್ರೀ ಜಿ ಎಸ್ ಪ್ರಮುಖ ಪಾತ್ರದಲ್ಲಿದ್ದಾರೆ. ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ, ಉದಯ್ ಕಡಬಾಳ್, ರವೀಂದ್ರ ದೇವಾಡಿಗ, ನಾಗರಾಜ್ ಸರ್ವೆಗಾರ್, ಗುಣಶ್ರೀ ಎಂ ನಾಯಕ್, ಶ್ರೀಧರ್ ಕಾಸರಕೋಡು ಮೊದಲಾದವರು ತಾರಾಗಣದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.