‘ಬಾಹುಬಲಿ’ ಖ್ಯಾತಿಯ ನಟ ಪ್ರಭಾಸ್ ನಟನೆಯ ಮತ್ತು ‘ಕೆಜಿಎಫ್’ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ ಬಹುನಿರೀಕ್ಷೆಯ ‘ಸಲಾರ್’ ಚಿತ್ರಕ್ಕೆ ಶುಕ್ರವಾರ ಹೈದರಾಬಾದ್‌ನ ರಾಮಾನಾಯ್ಡು ಸ್ಟುಡಿಯೋದಲ್ಲಿ ಅದ್ಧೂರಿಯಾಗಿ ಮುಹೂರ್ತ ನೆರವೇರಿತು.
ಭಾರತೀಯ ಚಿತ್ರರಂಗವೇ ಬೆರಗುಗಣ್ಣಿನಿಂದ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತಹ ಬಿಗ್ ಬಜೆಟ್‌ಚಿತ್ರ ‘ಕೆಜಿಎಫ್’ ನಿರ್ಮಿಸಿದ ಹೊಂಬಾಳೆ ಫಿಲ್ಮ್ಸ್‌ನ ವಿಜಯ್ ಕಿರಗಂದೂರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸಲಾರ್ ಮುಹೂರ್ತದಲ್ಲಿ ಕನ್ನಡ ಮತ್ತು ತೆಲುಗು ಚಿತ್ರರಂಗಗಳ ಮಹಾ ಸಮ್ಮಿಲನವಾದಂತೆ ನಟರು, ಗಣ್ಯರು ಪಾಲ್ಗೊಂಡು ಚಿತ್ರತಂಡಕ್ಕೆ ಶುಭಹಾರೈಸಿದರು.
ಬೆಳಿಗ್ಗೆ 11 ಗಂಟೆಗೆ ನಡೆದ ಚಿತ್ರದ ಮುಹೂರ್ತದಲ್ಲಿ ಚಿತ್ರದ ನಾಯಕ ಪ್ರಭಾಸ್, ರಾಜ್ಯದ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ, ರಾಕಿಂಗ್ ಸ್ಟಾರ್ ಯಶ್, ನಿರ್ಮಾಪಕ ವಿಜಯ್ ಕಿರಗಂದೂರು, ನಿರ್ದೇಶಕ ಪ್ರಶಾಂತ್ ನೀಲ್, ಸಂಗೀತ ನಿರ್ದೇಶಕ ರವಿ ಬಸ್ರೂರು ಪಾಲ್ಗೊಂಡಿದ್ದರು.
ಗಡಿ, ಭಾಷೆ ಮೀರಿದ ಚಿತ್ರರಂಗ
ವಿಜಯ್ ಕಿರಗಂದೂರು ತಮ್ಮ ಹೊಂಬಾಳೆ ಫಿಲ್ಮ್ಸ್ ವತಿಯಿಂಧ ‘ಕೆಜಿಎಫ್ ಚಾಪ್ಟರ್-1ʼ, ‘ಕೆಜಿಎಫ್ ಚಾಪ್ಟರ್-2’ಗೂ ಮೊದಲೇ ಹಲವು ಯಶಸ್ವಿ ಚಿತ್ರಗಳನ್ನು ನಿರ್ಮಿಸಿದವರು. ಈಗ ‘ಸಲಾರ್’ ಚಿತ್ರ ಕೈಗೆತ್ತಿಕೊಂಡಿದ್ದಾರೆ. ಕೆಜಿಎಫ್ ಸರಣಿ ಚಿತ್ರಗಳ ಮೂಲಕ ಇಡೀ ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ನೋಡುವಂತೆ ಮಾಡಿದ ನಿರ್ದೇಶಕ ಪ್ರಶಾಂತ್ ನೀಲ್ ‘ಸಲಾರ್’ ನಿರ್ದೇಶಿಸುತ್ತಿದ್ದಾರೆ. ಅದರಲ್ಲೂ ಪ್ರಭಾಸ್ ಈ ಚಿತ್ರದ ನಾಯಕರಾಗುವ ಮೂಲಕ ಗಡಿ, ಭಾಷೆಗಳನ್ನು ಮೀರಿ ಕನ್ನಡ-ತೆಲುಗು ಚಿತ್ರರಂಗಗಳು ಒಂದಾಗಿ ಮುಂದೆ ಹೋಗುತ್ತಿರುವುದು ಆನಂದ ನೀಡಿದೆ. ‘ಬಾಹುಬಲಿ’ ಚಿತ್ರದಿಂದ ಕನ್ನಡದ ಅಭಿಮಾನಿಗಳ ಮನಗೆದ್ದಿರುವ ಪ್ರಭಾಸ್, ‘ಸಲಾರ್’ ಚಿತ್ರದಿಂದ ಕನ್ನಡಿಗರಿಗೆ ಇನ್ನಷ್ಟು ಹತ್ತಿರವಾಗಲಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಆಶಯ ವ್ಯಕ್ತಪಡಿಸಿದರು.
‘ಬಾಹುಬಲಿ ಚಿತ್ರ ನೋಡಿ ಪ್ರಭಾಸ್ ನಟನೆಗೆ ಫಿದಾ ಆಗಿದ್ದೆ. ಈಗ ಅವರ ಜತೆಯಲ್ಲೇ ಸಿನಿಮಾ ಮಾಡುವ ಅವಕಾಶ ಸಿಕ್ಕಿರುವುದು ತುಂಬಾ ಖುಷಿ ಕೊಟ್ಟಿದೆ. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ ‘ಸಲಾರ್’ ಚಿತ್ರ ನಿರ್ಮಿಸಲಿದ್ದೇವೆ’ ಎಂದರು ನಿರ್ಮಾಪಕ ವಿಜಯ್ ಕಿರಗಂದೂರು.
ಮುಹೂರ್ತದಲ್ಲಿ ಪ್ರಭಾಸ್ ಭಾಗಿ
ಜಾಗತೀಕ ಮಟ್ಟದಲ್ಲಿ ಕುತೂಹಲ ಹುಟ್ಟುಹಾಕಿರುವ ‘ಸಲಾರ್’ನಲ್ಲಿ ನಾಯಕನಾಗಿ ಬಣ್ಣ ಹಚ್ಚುತ್ತಿರುವ ಪ್ರಭಾಸ್ ಚಿತ್ರದ ಮುಹೂರ್ತದಲ್ಲಿ ಪಾಲ್ಗೊಂಡು ತೆಂಗಿನ ಕಾಯಿ ಒಡೆದು, ಪೂಜೆ ಸಲ್ಲಿಸಿದರು. ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿರುವ ನೆಚ್ಚಿನ ನಟ ಪ್ರಭಾಸ್ ಕಣ್ತುಂಬಿಕೊಳ್ಳಲು ಸ್ಟುಡಿಯೊದಲ್ಲಿ ಅಭಿಮಾನಿಗಳು ಸೇರಿದ್ದರು.
ಚಿತ್ರ ಘೋಷಣೆ ಮಾಡಿದಾಗ ಬಿಡುಗಡೆಯಾದ ‘ಸಲಾರ್’ ಫಸ್ಟ್‌ಲುಕ್ ಎಲ್ಲರ ಗಮನ ಸೆಳೆದಿತ್ತು. ಪ್ರಭಾಸ್ ಸದ್ಯ ‘ರಾಧೆ ಶ್ಯಾಂʼ ಚಿತ್ರದಲ್ಲಿ ನಟಿಸುತ್ತಿದ್ದು, ಅದರ ಚಿತ್ರೀಕರಣ ಕೊನೆ ಹಂತದಲ್ಲಿದೆ. ‘ಆದಿಪುರುಷ್’ ಚಿತ್ರದ ಶೂಟಿಂಗ್ ಸದ್ಯದಲ್ಲೇ ಶುರುವಾಗುವ ನಿರೀಕ್ಷೆ ಇದೆ. ಇದರ ಜತೆಯಲ್ಲೇ ಈಗ ‘ಸಲಾರ್’ ಚಿತ್ರವೂ ಸೆಟ್ಟೇರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.